ಎಸ್‌ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ಸಮಾರಂಭ । ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಬೆಳ್ತಂಗಡಿ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಜನ್ಮ ದಿನಾಚರಣೆಯ ಪ್ರಯುಕ್ತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮಂಗಳವಾರ ನಡೆಯಿತು.ಬೆಂಗಳೂರಿನ ಕ್ಷೇಮವನದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಮಾತನಾಡಿ, ಪ್ರಯತ್ನ, ತ್ಯಾಗ, ದೃಢತೆ ಮತ್ತು ಧೈರ್ಯವೆಂಬ ತತ್ವಗಳನ್ನು ನಾವು ವಿದ್ಯಾರ್ಥಿ ಜೀವನದಲ್ಲಿ ಹೂಡಿಕೆ ಮಾಡಿದಾಗ ಅದು ನಮಗೆ ಭವಿಷ್ಯದಲ್ಲಿ ಪ್ರತಿಫಲ ನೀಡುತ್ತದೆ. ಓದು ಹವ್ಯಾಸಗಳ ಜೊತೆಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಂಡಾಗ ನಮ್ಮ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದರು.ವಿಶೇಷ ಉಪನ್ಯಾಸ ನೀಡಿದ ಸಂಪಾಜೆಯ ಖ್ಯಾತ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಮಾತನಾಡಿ, ಧನಾತ್ಮಕ ಬೆಳವಣಿಗೆಗಳು ವಿದ್ಯಾರ್ಥಿಗಳಿಗೆ ಅತಿ ಮುಖ್ಯ. ಪ್ರತಿಯೊಬ್ಬ ವ್ಯಕ್ತಿಗೆ ಭಿನ್ನ ಆತ ತನ್ನದೇ ಆದ ಪ್ರತಿಭೆ ಮತ್ತು ಕೌಶಲ್ಯಗಳು ಹೊಂದಿರುತ್ತಾನೆ. ಅದನ್ನು ಸಕಾರಾತ್ಮಕ ಚಿಂತನೆಗಳೊಂದಿಗೆ ಯಶಸ್ಸಿನ ಹಾದಿಗೆ ಸಾಗಿಸಬೇಕು ಎಂದರು.ಉಜಿರೆಯ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಡಾ.ಡಿ ವೀರೇಂದ್ರ ಹೆಗ್ಗಡೆ ಜೀವನ ಮತ್ತು ಸಾಧನೆಯ ಕುರಿತಾದ ಶಿಕ್ಷಕಿ ಉಷಾ ರಚಿಸಿರುವ ಹಾಡನ್ನು ವಿದ್ಯಾರ್ಥಿಗಳು ಹಾಡಿದರು. ವಿದ್ಯಾರ್ಥಿಗಳಾದ ಅಂಸಿನಿ ಭೀಡೆ ಡಾ.ಡಿ ವೀರೇಂದ್ರ ಹೆಗ್ಗಡೆ ಕುರಿತು ಅನಿಸಿಕೆ ಹಂಚಿಕೊಂಡರು.ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಪರವಾಗಿ ಸಂಸ್ಥೆಯ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗಡೆ ಅವರಿಗೆ ಜನ್ಮದಿನದ ಶುಭಾಶಯವನ್ನು ಕೋರಿದರು.
ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಉಜಿರೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಆಶ್ರಯದಲ್ಲಿ ಎನ್.ಎಸ್.ಎಸ್ ಸ್ವಯಂಸೇವಕರಿಂದ ‘ಸ್ವಚ್ಛ ಉಜಿರೆ - ಸ್ವಸ್ಥ ಉಜಿರೆ’ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು.ಉಪನ್ಯಾಸಕ ಮಹಾವೀರ್ ಜೈನ್ ನಿರೂಪಿಸಿದರು. ಉಪ ಪ್ರಾಂಶುಪಾಲ ಡಾ. ರಾಜೇಶ್ ಬಿ. ವಂದಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:2024- 25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ , ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ಎಸ್.ಡಿ.ಎಂ. ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಸಾಧಕ ವಿದ್ಯಾರ್ಥಿಗಳಾದ ತುಷಾರ (ವಿಜ್ಞಾನ ವಿಭಾಗ), ನೀತಿ (ವಿಜ್ಞಾನ ವಿಭಾಗ), ಆರ್ಯ ದಿನೇಶ್ (ವಾಣಿಜ್ಯ ವಿಭಾಗ), ಅನನ್ಯಾ (ವಾಣಿಜ್ಯ ವಿಭಾಗ ) ಶ್ರೇಯಾ( ಕಲಾ ವಿಭಾಗ) ರವರಿಗೆ ಎಸ್.ಡಿ.ಎಂ ಸಂಸ್ಥೆ ಮತ್ತು ಪದವಿ ಪೂರ್ವ ಕಾಲೇಜಿನ ವತಿಯಿಂದ ಮುಖ್ಯ ಅಭ್ಯಾಗತರಾಗಿದ್ದ ಬೆಂಗಳೂರಿನ ಕ್ಷೇಮವನದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಸನ್ಮಾನಿಸಿದರು.ವಿದ್ಯಾರ್ಥಿ ವೇತನ ವಿತರಣೆ:ಡಾ.ಹೆಗ್ಗಡೆ ಜನ್ಮ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಒಟ್ಟು 129 ವಿದ್ಯಾರ್ಥಿಗಳಿಗೆ ಸುಮಾರು 30 ಲಕ್ಷ ರು.ಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಯಿತು. ಸಾಂಕೇತಿಕವಾಗಿ ವೇದಿಕೆಯಲ್ಲಿ 10 ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ವಿದ್ಯಾರ್ಥಿ ವೇತನ ಹಸ್ತಾಂತರಿಸಿದರು.