ವೀರೇಶ್ವರ ಪುಣ್ಯಾಶ್ರಮ ಅಂಧ, ಅನಾಥ ಮಕ್ಕಳ ಬಾಳಿನ ಬೆಳಕ: ಎಚ್.ಕೆ. ಪಾಟೀಲ

KannadaprabhaNewsNetwork | Published : Jun 27, 2024 1:06 AM

ಸಾರಾಂಶ

ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ. ಪಂಚಾಕ್ಷರಿ ಗವಾಯಿಗಳವರ 80ನೇ ಹಾಗೂ ಪಂ.ಪುಟ್ಟರಾಜ ಕವಿ ಗವಾಯಿಗಳ 14ನೇ ಪುಣ್ಯಸ್ಮರಣೆಯ ಅಂಗವಾಗಿ ಶಿವಾನುಭವಗೋಷ್ಠಿ ಜರುಗಿತು.

ಕನ್ನಡಪ್ರಭ ವಾರ್ತೆ ಗದಗ

ಮಾನವ ಹಕ್ಕುಗಳು ಅವರವರ ಮನೆಗಳಲ್ಲಿಯೂ ಉಲ್ಲಂಘನೆಯಾಗುತ್ತವೆ. ಆದರೆ, ಅವುಗಳನ್ನು ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಪಾಲನೆ ಮಾಡಿ, ಮನೆಗಳಲ್ಲಿಯೇ ಬೇಸರವಾಗುವಂತಹ ಅಂಧ, ಅನಾಥ ಮಕ್ಕಳನ್ನು ಪಾಲನೆ, ಪೋಷಣೆ ಮಾಡಿ, ಅವರಿಗೆ ವಿದ್ಯೆ ನೀಡಿ ಅವರ ಬದುಕಿನಲ್ಲಿ ನಿತ್ಯ ಬೆಳಕಾಗುವ ಕೆಲಸವನ್ನು ಹಾಗೂ ಮಾನವ ಹಕ್ಕುಗಳನ್ನು ಅತೀ ಹೆಚ್ಚು ಗೌರವಿಸಿ, ಪಾಲಿಸಿದ್ದು ಗದುಗಿನ ವೀರೇಶ್ವರ ಪುಣ್ಯಾಶ್ರಮ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಮಂಗಳವಾರ ರಾತ್ರಿ ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ. ಪಂಚಾಕ್ಷರಿ ಗವಾಯಿಗಳವರ 80ನೇ ಹಾಗೂ ಪಂ.ಪುಟ್ಟರಾಜ ಕವಿ ಗವಾಯಿಗಳ 14ನೇ ಪುಣ್ಯಸ್ಮರಣೆಯ ಅಂಗವಾಗಿ ಜರುಗಿದ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿದರು.

50-60 ವರ್ಷಗಳ ನಂತರ ಮಾನವ ಹಕ್ಕುಗಳ ಕಾಯ್ದೆಗಳು ಜಾರಿಗೆ ಬಂದವು. ಆದರೆ, ಇದಕ್ಕೂ ಮುನ್ನ ಉಭಯ ಗುರುಗಳು ವೀರೇಶ್ವರ ಪುಣ್ಯಾಶ್ರಮದಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತಂದು ಅಂಧರಿಗೆ, ಅನಾಥರಿಗೆ, ನಿರ್ಗತಿಕರಿಗೆ ಶಿಕ್ಷಣ, ಸಂಗೀತ ವಿದ್ಯೆ ನೀಡಿ ಅವರಿಗೆ ಸ್ವಾವಲಂಭಿ ಜೀವನ ರೂಪಿಸಿದ್ದರು. ಮಾನವ ಹಕ್ಕುಗಳನ್ನು ಗೌರವಿಸುವ ಕೆಲಸ ಪುಣ್ಯಾಶ್ರಮ ಮಾಡಿದೆ. ಪಂ. ಪಂಚಾಕ್ಷರಿ ಗವಾಯಿಗಳವರು ಪುಣ್ಯಾಶ್ರಮವನ್ನು ಕಟ್ಟಿದರೆ, ಪಂ.ಪುಟ್ಟರಾಜ ಗವಾಯಿಗಳವರು ಈ ಆಶ್ರಮವನ್ನು ರಾಷ್ಟಮಟ್ಟದಲ್ಲಿ ಖ್ಯಾತಿ ಗಳಿಸುವಂತೆ ಮಾಡಿದ್ದಾರೆ. ಅದ್ದರಿಂದ ವೀರೇಶ್ವರ ಪುಣ್ಯಾಶ್ರಮ ನಮ್ಮೆಲ್ಲರ ಪುಣ್ಯ ಕ್ಷೇತ್ರವಾಗಿದೆ. ಅಲ್ಲದೆ, ನಾಡಿನಲ್ಲಿ ಅತೀ ಹೆಚ್ಚು ತುಲಾಭಾರ ಸೇವೆ ನಡೆದಿದ್ದರೆ ಅದು ಪಂ.ಪುಟ್ಟರಾಜ ಗವಾಯಿಗಳವರದ್ದಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಯಾರು ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಾರೆಯೋ ಅವರನ್ನು ಸಮಾಜ ಸದಾ ಸ್ಮರಿಸುತ್ತದೆ. ಉಭಯ ಶ್ರೀಗಳು ವೀರೇಶ್ವರ ಪುಣ್ಯಾಶ್ರಮ ನಿರ್ಮಾಣ ಮಾಡಿ ಬಿಕ್ಷಾಟನೆಯಲ್ಲಿ ತೊಡಗಬೇಕಾಗಿದ್ದ ಸಾವಿರಾರು ಅಂಧ- ಅನಾಥರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಪುಣ್ಯಾಶ್ರಮದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಎಲ್ಲರೂ ಸಹಾಯ, ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಅಂಧ-ಅನಾಥರನ್ನು ಸಾಕಿ ಸಲುಹಿ ಪೋಷಣೆ ಮಾಡಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಪುಣ್ಯಾಶ್ರಮ ಪುಣ್ಯಕ್ಷೇತ್ರವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗದುಗಿನ ತೋಂಟದಾರ್ಯ ಮಠದ ತೋಂಟದ ಡಾ. ಸಿದ್ದರಾಮ ಶ್ರೀಗಳು ಸಾನಿಧ್ಯ ವಹಿಸಿದ್ದರು. ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಶ್ರೀಗಳು ಸಮ್ಮುಖ ವಹಿಸುವರು. ಗುಳೇದಗುಡ್ಡ ಮುರುಘಾಮಠದ ಕಾಶಿನಾಥ ಶ್ರೀಗಳು, ಎಚ್.ಎಸ್. ವೆಂಕಟಾಪೂರ-ಜಿಗೇರಿಯ ಗುರುಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳು ರಚಿಸಿದ ಭಾವ ಮಂದಾಕಿನಿ ಗ್ರಂಥ ಹಾಗೂ ಕಲ್ಲಯ್ಯಜ್ಜನವರು ರಚಿಸಿದ ಚುಟುಕು ಸಾಹಿತ್ಯ ಕೃತಿ ಲೋಕಾರ್ಪಣೆಗೊಂಡವು.ಮನವಿ

ಪಂ. ಪುಟ್ಟರಾಜ ಕವಿ ಗವಾಯಿಗಳಿಗೆ ಈಗಾಗಲೇ ಭಾರತರತ್ನ ಸಿಗಬೇಕಾಗಿತ್ತು. ಇದಕ್ಕೆ ನನ್ನದೂ ಒಪ್ಪಿಗೆ ಇದೆ. ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಭಾರತ ರತ್ನ ನೀಡುವಂತೆ ಮನವಿ ಸಲ್ಲಿಸೋಣ.

ಎಸ್.ವಿ. ಸಂಕನೂರ, ವಿಪ ಸದಸ್ಯರು.

Share this article