ಉತ್ತಮ ಆರೋಗ್ಯಕ್ಕೆ ಸೊಪ್ಪು ಬಳಕೆ ಅವಶ್ಯಕ

KannadaprabhaNewsNetwork |  
Published : Nov 03, 2025, 01:15 AM IST
ಉತ್ತಮ ಆರೋಗ್ಯಕ್ಕೆ ಸೊಪ್ಪು ಬಳಕೆ ಪ್ರಸ್ತುತ ಅನಿವಾರ್ಯ : ರಂಗಾಪುರ ಶ್ರೀ | Kannada Prabha

ಸಾರಾಂಶ

ಮನುಷ್ಯನ ಸರಳ ಆರೋಗ್ಯ ಹಾಗೂ ಇತ್ತೀಚಿಗೆ ಆವರಿಸಿಕೊಳ್ಳುತ್ತಿರುವ ಮಾರಾಣಾಂತಿಕ ರೋಗಗಳನ್ನು ತಡೆದುಕೊಳ್ಳುವ ಶಕ್ತಿ ನೀಡಬಲ್ಲ ವಿವಿಧ ಸೊಪ್ಪುಗಳನ್ನು ದಿನನಿತ್ಯ ಬಳಸುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ಮನುಷ್ಯನ ಸರಳ ಆರೋಗ್ಯ ಹಾಗೂ ಇತ್ತೀಚಿಗೆ ಆವರಿಸಿಕೊಳ್ಳುತ್ತಿರುವ ಮಾರಾಣಾಂತಿಕ ರೋಗಗಳನ್ನು ತಡೆದುಕೊಳ್ಳುವ ಶಕ್ತಿ ನೀಡಬಲ್ಲ ವಿವಿಧ ಸೊಪ್ಪುಗಳನ್ನು ದಿನನಿತ್ಯ ಬಳಸುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಅಮಾನಿಕೆರೆ ಉದ್ಯಾನವನದಲ್ಲಿ ತಿಪಟೂರು ಸೊಗಡು ಜನಪದ ಹೆಜ್ಜೆ ವತಿಯಿಂದ ಭಾನುವಾರ ಆಯೋಜಿಸಿದ್ದ ಗ್ರಾಮೀಣ ಸೊಗಡಿನ ಸೊಪ್ಪು ಮೇಳದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಹಿಂದೆಲ್ಲಾ ನಮ್ಮ ಪೂರ್ವಿಕರು, ಗದ್ದೆ, ಹೊಲಮಾಳ, ಕೊಪ್ಪಲು, ಹಿತ್ತಲು, ಬೇಲಿ ಸಾಲಿನಲ್ಲಿ ಸಿಗುವ ವಿವಿಧ ರೀತಿಯ ಸೊಪ್ಪುಗಳನ್ನು ತಂದು ಅಡಿಗೆ ಮಾಡಿ ಮನೆಮಂದಿಗೆ ಉಣಬಡಿಸುತ್ತಿದ್ದರು ಇದರಿಂದ ರೋಗರುಜಿಗಳು ಬಾರದಂತೆ ಗಟ್ಟಿಮುಟ್ಟಾಗಿದ್ದರು. ಇತ್ತಿಚಿಗೆ ಗ್ರಾಮೀಣ ಭಾಗದಲ್ಲಿ ಸೊಪ್ಪುಗಳನ್ನು ಬೆಳೆದು ತಿನ್ನುವ ಬದಲು ಮಾರುಕಟ್ಟೆಗಳಿಗೆ ಬಂದು ರಾಸಾಯನಿಕಯುಕ್ತ ಸೊಪ್ಪುಗಳಿಗೆ ಮಾರುಹೋಗಿ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರು ತಮ್ಮ ಜಮೀನುಗಳಲ್ಲಿ ಸಣ್ಣ ಪುಟ್ಟ ಕೈ ತೋಟಗಳನ್ನು ನಿರ್ಮಿಸಿ ಸಾವಯವ ಪದ್ದತಿಯ ಸೊಪ್ಪುಗಳನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ತಾಂತ್ರಿಕ ಯುಗದಲ್ಲಿ ಸೊಪ್ಪುಗಳ ಮಹತ್ವ ಯಾರಿಗೂ ತಿಳಿದಿಲ್ಲ. ರಕ್ತಪುಷ್ಠಿ, ರಕ್ತಚಲನೆಗೆ ಸೊಪ್ಪುಗಳ ಸೇವನೆ ಅವಶ್ಯಕ. ನಾವು ಐದಾರು ಬಗೆಯ ಸೊಪ್ಪುಗಳನ್ನು ಮಾತ್ರ ಉಪಯೋಗಿಸುತ್ತಿದ್ದೇವೆ. ಇಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ವಿವಿಧ ಜಾತಿಯ ಸೊಪ್ಪುಗಳನ್ನು ತಂದು ತಾಯಂದಿರು ಪರಿಚಯಿಸುವ ಮೂಲಕ ಅವುಗಳ ಮಹತ್ವ ಸಾರುತ್ತಿರುವ ಕಾರ್ಯಕ್ರಮ ಅದ್ಬುತವಾಗಿದೆ. ಸೊಗಡು ಜನಪದ ಹೆಜ್ಜೆ ನಮ್ಮ ಶ್ರೀಮಠದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದರೆ ನಮ್ಮ ಸಹಕಾರ ನೀಡುವುದಾಗಿ ತಿಳಿಸಿದರು. ಸೊಪ್ಪು ಮೇಳ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ. ಷಡಕ್ಷರಿ, ಸೊಪ್ಪು ಮನುಕುಲಕ್ಕೆ ಅವಶ್ಯಕವಾಗಿದ್ದು ಗ್ರಾಮೀಣ ಭಾಗದಲ್ಲಿ ಪ್ರಕೃತ್ತಿ ದತ್ತವಾಗಿ ಸಿಗುವ ಸೊಪ್ಪುಗಳನ್ನು ಬಳಕೆ ಮಾಡಬೇಕು. ಅಜ್ಜಿಯಂದಿರು ಇಲ್ಲಿ ವಿವಿಧ ರೀತಿಯ ನೂರಾರು ಬಗೆಯ ಸೊಪ್ಪುಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಹಿತ್ತಲಗಿಡ ಮದ್ದಲ್ಲ ಎಂಬಂತೆ ಈಗಿನ ಕಾಲದಲ್ಲಿ ಸೊಪ್ಪುಗಳ ಬಳಕೆ ಕಡಿಮೆಯಾಗುತ್ತಿದ್ದು ಹಿರಿಯರು ಮಕ್ಕಳಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಇದೊಂದು ಆರೋಗ್ಯದಾಯಕ ಕಾರ್ಯಕ್ರಮ ಎಂದರು. ಉಪವಿಭಾಗಾಧಿಕಾರಿ ಸಪ್ತಶ್ರೀ ಮಾತನಾಡಿ, ನೈಸರ್ಗಿಕವಾಗಿ ಕೆಲ ಸೊಪ್ಪುಗಳು ತನಗೆ ತಾನೆ ಬೆಳೆದುಕೊಳ್ಳುತ್ತವೆ. ಆದರೆ ಯಾವ ಸೊಪ್ಪುನ್ನು ಹೇಗೆ ಬಳಸಬೇಕೆಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ. ಸೊಪ್ಪಿನ ಮಹತ್ವ ಸಾರುವ ಸೊಪ್ಪುಮೇಳ ಅವಶ್ಯಕವಾಗಿದ್ದು ಸಾಂಪ್ರದಾಯಿಕ ಆಹಾರ ಶೈಲಿಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಲು ಸಹಕಾರಿಯಾಗಿದೆ ಎಂದರು. ಸೊಗಡು ಜನಪದ ಹೆಜ್ಜೆಯ ಅಧ್ಯಕ್ಷ ಸಿರಿಗಂಧ ಗುರು ಅಧ್ಯಕ್ಷತೆ ವಹಿಸಿ ಮಾತನಾಡಿ ಸೊಪ್ಪು ಮೇಳ ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಷತೆ ಸಲ್ಲಿಸಿ ಸೊಪ್ಪು ಮಾರಾಟಗಾರರನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಸೊಪ್ಪು ಗಣೇಶ್, ಉಧ್ಯಮಿ ಶಿವಪ್ರಸಾದ್, ಸೊಗಡು ಜನಪದ ಹೆಜ್ಜೆಯ ಮಾರನಗೆರೆ ನಿಜಗುಣ, ಸೊಪ್ಪು ತಜ್ಞ ಮುರಳೀಧರ ಗುಂಗುರಮಳೆ, ಉಮೇಶ್ ಆಲ್ಬೂರು, ಶಿಕ್ಷಕ ಸುರೇಶ್, ಬೋಚಿಹಳ್ಳಿ ಶಿವಣ್ಣ, ಚಿದಾನಂದ್, ಮಂಜುಳಾ ತಿಮ್ಮೇಗೌಡ, ತರಕಾರಿ ಗಂಗಾಧರ್, ರೇಖಾ, ಸೊಪ್ಪು ವ್ಯಾಪಾರಿ ಶಿವಮ್ಮ, ಲಕ್ಷ್ಮಮ್ಮ, ಮಹಾಲಕ್ಷ್ಮಮ್ಮ, ಸಣ್ಣ ನೀರಾವರಿ ಇಲಾಖೆ ದೊಡ್ಡಯ್ಯ ಸೇರಿದಂತೆ ಸೊಪ್ಪು ಮಾರಾಟ ಮಾಡುವ ಅಜ್ಜಿಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’