ತರಕಾರಿ ದರ ಸ್ಥಿರ, ಈರುಳ್ಳಿ ದರ ಅಲ್ಪ ಇಳಿಕೆ

KannadaprabhaNewsNetwork | Published : Nov 11, 2024 12:48 AM

ಸಾರಾಂಶ

ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ವಾರದ ದರಕ್ಕೆ ಹೋಲಿಕೆ ಮಾಡಿದರೆ ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ. ಕೆಲವು ತರಕಾರಿಗಳ ದರ ಅಲ್ಪ ಏರಿಕೆಯಾಗಿದ್ದರೆ, ಈರುಳ್ಳಿ ದರದಲ್ಲಿ ಅಲ್ಪಪ್ರಮಾಣದ ಇಳಿಕೆಯಾಗಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ವಾರದ ದರಕ್ಕೆ ಹೋಲಿಕೆ ಮಾಡಿದರೆ ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ. ಕೆಲವು ತರಕಾರಿಗಳ ದರ ಅಲ್ಪ ಏರಿಕೆಯಾಗಿದ್ದರೆ, ಈರುಳ್ಳಿ ದರದಲ್ಲಿ ಅಲ್ಪಪ್ರಮಾಣದ ಇಳಿಕೆಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿ ಮಳೆಗೆ ಹೊಲಗದ್ದೆಗಳಲ್ಲಿ ನೀರು ನಿಂತು ಶೇ.50ರಷ್ಟು ಈರುಳ್ಳಿ ಬೆಳೆ ಹಾನಿಗೀಡಾಗಿದೆ. ಅದರಲ್ಲೇ ಉತ್ತಮ ಈರುಳ್ಳಿ ಆರಿಸಿ ಮಾರುಕಟ್ಟೆಗೆ ತಂದರೆ ಅದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಬೆಳಗಾವಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಶೇ.70ರಷ್ಟು ಈರುಳ್ಳಿ ಕೆಟ್ಟುಹೋಗಿದ್ದು, ಶೇ.30ರಷ್ಟು ಮಾತ್ರ ಉತ್ತಮ ಈರುಳ್ಳಿ ಬಂದಿದೆ. ಹಾಗಾಗಿ ಈ ಈರುಳ್ಳಿ ಖರೀದಿಸಲು ಯಾರೂ ಮುಂದಾಗುತ್ತಿಲ್ಲ. ಎರಡ್ಮೂರು ದಿನದಲ್ಲಿ ಕೊಳೆತುಹೋಗುತ್ತಿದೆ. ಹಾನಿಗೀಡಾದ ಈರುಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಎಸೆಯಲಾಗಿದೆ. ಕೊಳೆತು ಈರುಳ್ಳಿ ದುರ್ನಾತ ಬೀರುತ್ತಿವೆ. ಮಾರಾಟಗಾರರಿಗೂ ಹಾನಿಗಾಡೀದ ಈರುಳ್ಳಿ ಮಾರಾಟ ತಲೆನೋವಾಗಿದೆ. ಹೋದ ವಾರಕ್ಕೆ ಹೋಲಿಸಿದರೆ ಈ ವಾರ ಈರುಳ್ಳಿ ದರದಲ್ಲಿ ಕ್ವಿಂಟಲ್‌ ಗೆ ₹200ರಷ್ಟು ಇಳಿಕೆಯಾಗಿದೆ.ಈಚೆಗೆ ಈರುಳ್ಳಿಗೆ ಸೂಕ್ತ ದರ ಸಿಗುತ್ತಿಲ್ಲ ಎಂದು ಆಕ್ರೋಶಗೊಂಡ ಬೆಳೆಗಾರರು ಎಪಿಎಂಸಿ ಮಾರುಕಟ್ಟೆ ಗೇಟ್‌ ಬಂದ್‌ ಮಾಡಿ ಪ್ರತಿಭಟನೆ ಮಾಡಿದ್ದರು. ದಲ್ಲಾಳಿಗಳು ಕಡಿಮೆ ಬೆಲೆಗೆ ಖರೀದಿಸಿ, ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ ಎಂದು ಆರೋಪಿಸಿದ್ದರು. ಪ್ರತಿಭಟನೆಯ ಕಾರಣ ವ್ಯಾಪಾರ ವಹಿವಾಟು ಬಂದ್ ಆಗಿತ್ತು. ನ.6ರಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಬಂದಿತ್ತು. ಕ್ವಿಂಟಲ್‌ ಈರುಳ್ಳಿಗೆ ₹ 1000ದಿಂದ ₹4500ವರೆಗೆ ಸವಾಲು ಮಾಡಲಾಗಿತ್ತು. ನ.9ರಂದು ಅದೇ ದರ ಸ್ಥಿರವಾಗಿದೆ.ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಬೆಳೆಯಲಾಗಿದ್ದು, ಜನವರಿಯಲ್ಲಿ ಕೊಯ್ಲು ಮಾಡಲಾಗುತ್ತದೆ. ಮಹಾರಾಷ್ಟ್ರದ ಹಳೆಯ ಈರುಳ್ಳಿಗೆ ಈಗ ಭಾರೀ ಬೇಡಿಕೆ ಬಂದಿದೆ. ವಿವಿಧ ರಾಜ್ಯಗಳಿಂದಲೂ ಬೇಡಿಕೆ ಈರುವ ಮಹಾರಾಷ್ಟ್ರ ಈರುಳ್ಳಿ ದರ ಕ್ವಿಂಟಲ್‌ಗೆ ₹5500ದಿಂದ ₹6800 ದರವಿದೆ ಎಂದು ವ್ಯಾಪಾರಸ್ಥ ಮಹೇಶ ಕುಗಜಿ ಹೇಳಿದರು.

ಇಂದೂರ ಆಲೂಗಡ್ಡೆ ದರ ಹೆಚ್ಚಳ

ಮಹಾರಾಷ್ಟ್ರದ ಇಂದೂರ ಆಲೂಗಡ್ಡೆ ಹೆಚ್ಚಿನ ಪ್ರಮಾಣದಲ್ಲಿ ಬೆಳಗಾವಿ ಎಪಿಎಂಸಿ ಮಾರುಕಟ್ಟೆಗೆ ಆವಕವಾಗಿದ್ದು, ಆಲೂಗಡ್ಡೆ ಕ್ವಿಂಟಲ್‌ಗೆ ₹ 3900ದಿಂದ 4100ಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಇಂದೂರ ಆಲೂಗಡ್ಡೆ ದರದಲ್ಲಿ ₹200 ಏರಿಕೆಯಾಗಿದೆ. ಇಂದೂರ ಶೀತಲೀಕರಣ ಘಟಕದಲ್ಲಿರುವ ಆಲೂಗಡ್ಡೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗಿದೆ.

ಬೆಳಗಾವಿ ತಾಲೂಕಿನಲ್ಲಿ ಬೆಳೆದಿರುವ ಕೆಂಪು ಆಲೂಗಡ್ಡೆ ಆವಕ ಕಡಿಮೆಯಾಗಿದೆ. ಬಿಳಿ ಆಲೂಗಡ್ಡೆ ಆವಕ ಪ್ರಮಾಣ ಹೆಚ್ಚಾಗಿದೆ. ಕೆಂಪು ಆಲೂಗಡ್ಡೆ ದರ ಕ್ವಿಂಟಲ್‌ಗೆ ₹700 ರಿಂದ ₹ 4000ರವರೆಗೆ ಇದೆ. ಬಿಳಿ ಆಲೂಗಡ್ಡೆ ದರ ಕ್ವಿಂಟಲ್‌ಗೆ ₹600 ರಿಂದ ₹3700ರವೆಗೆ ಇದೆ.

ಬಾಕ್ಸ್‌---

ತರಕಾರಿ ದರ 10 ಕೆಜಿಗೆ

ಚವಳಿಕಾಯಿ- ₹250ರಿಂದ 300

ಡೊಣ್ಣ ಮೆಣಸಿನಕಾಯಿ ₹600-650

ಬೆಂಗಳೂರು ಬಿನ್ಸ್‌- ₹500ರಿಂದ ₹ 550

ಇಂದೋರ ಗಜ್ಜರಿ- ₹ 700-750

ಬೆಳಗಾವಿ ಬಿನ್ಸ್‌ -- ₹350-400

ಬದನೆಕಾಯಿ- ₹450-500

ಕಸಿ ಮೆಣಸಿನಕಾಯಿ- ₹200-250

ಸವತೆಕಾಯಿ- ₹100-120

Share this article