ಹೊಳೆನರಸೀಪುರದಲ್ಲಿ ವಾಹನ ಪಾರ್ಕಿಂಗ್‌

KannadaprabhaNewsNetwork | Published : Nov 14, 2024 12:49 AM

ಸಾರಾಂಶ

ಪಟ್ಟಣದ ಡಾ. ಅಂಬೇಡ್ಕರ್‌ ವೃತ್ತ, ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ವೃತ್ತ ಹಾಗೂ ಸಾರ್ವಜನಿಕ ಆಸ್ಪತ್ರೆ ರಸ್ತೆಯ ಬದಿಗಳು ಪೊಲೀಸ್ ಇಲಾಖೆ ಅಳವಡಿಸಿದ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿದ್ದು, ಇವುಗಳ ಕಣ್ಗಾವಲಿಗೆ ಪೊಲೀಸ್ ಠಾಣೆಯಲ್ಲಿ ಟಿವಿ ಅಳವಡಿಸಲಾಗಿದೆ. ಆದ್ದರಿಂದ ಪರ ಊರುಗಳಿಗೆ ಕರ್ತವ್ಯಕ್ಕೆ ತೆರಳುವ ನೌಕರರು ತಮ್ಮ ವಾಹನಗಳನ್ನು ಬಹಳ ಬುದ್ಧಿವಂತಿಕೆಯಿಂದ ಸಿಸಿ ಕ್ಯಾಮರಾ ಕಣ್ಗಾವಲು ಇರುವ ಸ್ಥಳಗಳಲ್ಲಿ ನಿಲ್ಲಿಸಿ ತೆರಳುತ್ತಾರೆ. ಈ ಕಾರಣದಿಂದ ನಾಗರಿಕರಿಗೆ ತೊಂದರೆ ಉಲ್ಪಣಿಸಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬೆಳಗ್ಗೆಯಿಂದ ಸಂಜೆ ತನಕ ನೂರಾರು ದ್ವಿಚಕ್ರ ವಾಹನಗಳ ನಿಲುಗಡೆಯಿಂದಾಗಿ ವರ್ತಕರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಪೊಲೀಸ್ ಸಿಬ್ಬಂದಿಯ ಕೊರತೆ ಹಾಗೂ ಕರ್ತವ್ಯದ ಒತ್ತಡದಿಂದಾಗಿ ಪೊಲೀಸರು ಈ ರೀತಿಯ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗದೇ ಇರುವ ಕಾರಣದಿಂದ ನಾಗರಿಕರಿಗೆ ತೊಂದರೆ ಉಲ್ಪಣಿಸಿದೆ.

ಪಟ್ಟಣದ ಡಾ. ಅಂಬೇಡ್ಕರ್‌ ವೃತ್ತ, ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ವೃತ್ತ ಹಾಗೂ ಸಾರ್ವಜನಿಕ ಆಸ್ಪತ್ರೆ ರಸ್ತೆಯ ಬದಿಗಳು ಪೊಲೀಸ್ ಇಲಾಖೆ ಅಳವಡಿಸಿದ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿದ್ದು, ಇವುಗಳ ಕಣ್ಗಾವಲಿಗೆ ಪೊಲೀಸ್ ಠಾಣೆಯಲ್ಲಿ ಟಿವಿ ಅಳವಡಿಸಲಾಗಿದೆ. ಆದ್ದರಿಂದ ಪರ ಊರುಗಳಿಗೆ ಕರ್ತವ್ಯಕ್ಕೆ ತೆರಳುವ ನೌಕರರು ತಮ್ಮ ವಾಹನಗಳನ್ನು ಬಹಳ ಬುದ್ಧಿವಂತಿಕೆಯಿಂದ ಸಿಸಿ ಕ್ಯಾಮರಾ ಕಣ್ಗಾವಲು ಇರುವ ಸ್ಥಳಗಳಲ್ಲಿ ನಿಲ್ಲಿಸಿ ತೆರಳುತ್ತಾರೆ.

ಪ್ರಾರಂಭದಲ್ಲಿ ಕೆಲ ನೌಕರರು ಮಾತ್ರ ವಾಹನ ನಿಲ್ಲಿಸಿ ತೆರಳುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಜತೆಗೆ ಸಿಸಿ ಕ್ಯಾಮರಾಗಳ ತುಣುಕುಗಳು ವಾಹನಗಳ ಹುಡುಕಾಟದಲ್ಲಿ ಸಹಕಾರಿ ಎಂದು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ವಾಹನಗಳ ನಿಲುಗಡೆ ಸಹಕಾರಿ ಎಂಬ ಮನಸ್ಥಿತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಬೆಳಗ್ಗೆಯಿಂದ ಸಂಜೆ ತನಕ ನೂರಾರು ದ್ವಿಚಕ್ರ ವಾಹನಗಳನ್ನು ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ನಿಲ್ಲಿಸಿ ತೆರಳುತ್ತಿದ್ದಾರೆ.

ಲಕ್ಷಾಂತರ ರುಪಾಯಿ ಮುಂಗಡ ನೀಡಿ, ಸಾವಿರಾರು ರು. ಬಾಡಿಗೆ ನೀಡಿ, ವ್ಯಾಪಾರ ಮಾಡುತ್ತಿರುವ ವರ್ತಕರಿಗೆ ನಷ್ಟ ಹಾಗೂ ಪಾದಚಾರಿಗಳಿಗೆ ತೊಂದರೆ ಒಂದೆಡೆಯಾದರೇ, ರಸ್ತೆ ಬದಿಯಲ್ಲಿ ತಳ್ಳುಗಾಡಿ ವ್ಯಾಪಾರಿಗಳ ಉಪಟಳದಿಂದಾಗಿ ವೃತ್ತಗಳಲ್ಲಿ ಓಡಾಡುವ ವಾಹನಗಳ ಚಾಲಕರು ಪ್ರತಿನಿತ್ಯ ಯಾತನೆ ಅನುಭವಿಸುತ್ತಿದ್ದು, ಈ ಎಲ್ಲಾ ಸಮಸ್ಯೆಗಳಿಂದ ನಾಗರಿಕರು ಹಾಗೂ ಚಾಲಕರಿಗೆ ಮುಕ್ತಿ ದೊರೆತರೆ ಸಾಕು ಎಂಬಂತಾಗಿದೆ.

Share this article