
ಕಾರವಾರ: ಕರಾವಳಿ ನಗರಿ ಕಾರವಾರದ ಕಡಲತೀರಕ್ಕೆ ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಜನಜಂಗುಳಿ ಇಲ್ಲದ ಇಲ್ಲಿನ ವಿಶಾಲವಾದ ಕಡಲತೀರ ಹಾಗೂ ಸುಂದರ ಪರಿಸರವನ್ನು ಆಸ್ವಾದಿಸುವ ಪ್ರವಾಸಿಗರು ಕೆಲಹೊತ್ತು ಇಲ್ಲಿ ಕಾಲ ಕಳೆದು ಆನಂತರ ಮುಂದಿನ ಪ್ರಯಾಣ ಕೈಗೊಳ್ಳುತ್ತಾರೆ. ಆದರೆ ಹೀಗೆ ಬರುವ ಪ್ರವಾಸಿಗರು ಕಡಲತೀರದಲ್ಲಿ ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ಕೊಂಡೊಯ್ಯಲು ಮುಂದಾಗಿ ಸಂಕಷ್ಟಕ್ಕೆ ಸಿಲುಕುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ.
ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರ ವಾಹನಗಳು ಹೀಗೆ ಮರಳಿನಲ್ಲಿ ಸಿಲುಕಿ ಪರದಾಟ ನಡೆಸುವುದು ಹೊಸದೇನಲ್ಲ. ಆದರೂ ಪ್ರವಾಸಿಗರನ್ನು ಎಚ್ಚರಿಸಬೇಕಾದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸದೇ ಕಣ್ಮುಚ್ಚಿ ಕುಳಿತಂತಿದೆ. ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡುವ ನಿಟ್ಟಿನಲ್ಲಿ ಕನಿಷ್ಠ ಸೂಚನಾ ಫಲಕಗಳನ್ನೂ ಸಹ ಅಳವಡಿಸದಿರುವುದು ದೂರದೂರುಗಳಿಂದ ಬರುವ ಪ್ರವಾಸಿಗರು ವಾಹನಗಳನ್ನು ಮರಳಿನಲ್ಲಿ ಸಿಲುಕಿಸಿಕೊಂಡು ಸಂಕಷ್ಟ ಅನುಭವಿಸುವಂತೆ ಮಾಡಿದೆ.
ಕಡಲತೀರಕ್ಕೆ ಸೂಕ್ತ ಪಾರ್ಕಿಂಗ್ ನಿಗದಿ ಅಗತ್ಯ: ಹೆದ್ದಾರಿಯಂಚಿಗೇ ಇರುವ ಟ್ಯಾಗೋರ್ ಕಡಲತೀರಕ್ಕೆ ಮಂಗಳೂರು, ಗೋವಾ ಮಾರ್ಗಗಳಿಗೆ ತೆರಳುವ ಪ್ರವಾಸಿಗರೂ ಭೇಟಿ ನೀಡಿ ತೆರಳುತ್ತಾರೆ. ಹೀಗಾಗಿ ಕೇವಲ ಕಾರುಗಳಷ್ಟೇ ಅಲ್ಲದೇ ಬಸ್‌ಗಳಂತಹ ದೊಡ್ಡ ವಾಹನಗಳೂ ಆಗಮಿಸುತ್ತವೆ. ಆದರೆ ಹೀಗೆ ಆಗಮಿಸುವ ವಾಹನ ಸವಾರರಿಗೆ ಎಲ್ಲಿ ಪಾರ್ಕಿಂಗ್ ಮಾಡಬೇಕು, ಎಲ್ಲಿ ಮಾಡಬಾರದು ಎನ್ನುವ ಸೂಚನಾ ಫಲಕ ಇಲ್ಲದಿರುವುದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಇನ್ನು ಕೆಲವು ಪ್ರವಾಸಿಗರು ಕಡಲತೀರಕ್ಕೆ ವಾಹನವನ್ನು ಕೊಂಡೊಯ್ಯುವ ಹುಚ್ಚು ಸಾಹಸವನ್ನೂ ಮಾಡುವ ಘಟನೆಗಳು ನಡೆದಿದ್ದು, ಸಂಬಂಧಪಟ್ಟ ಇಲಾಖೆ ಸೂಕ್ತ, ಸುರಕ್ಷಿತ ಪಾರ್ಕಿಂಗ್ ಸ್ಥಳವನ್ನು ನಿಗದಿಗೊಳಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.