24ಕ್ಕೆ ವೇಮನ ಅಕಾಡೆಮಿ ಹೈಟೆಕ್ ಶಾಲಾ ಕಟ್ಟಡ ಉದ್ಘಾಟನೆ

KannadaprabhaNewsNetwork |  
Published : May 21, 2026, 03:00 AM IST
ಪೊಟೋ ಮೇ.20ಎಂಡಿಎಲ್ 4. ವೇಮನ್ ಅಕಾಡೆಮಿ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳ ಮಲ್ಲಮ್ಮ ನಗರದ ಶಾಲಾ ಆವರಣದಲ್ಲಿ ಮೇ 24 ರಂದು ಬೆಳಗ್ಗೆ 10.30ಕ್ಕೆ ನೂತನ ಶಾಲಾ ಕಟ್ಟಡವು ಅಧಿಕೃತವಾಗಿ ಉದ್ಘಾಟನೆ ಹಾಗೂ ಶಾಲಾ ಪ್ರಾರಂಭೋತ್ಸವ ಸಮಾರಂಭ ಜರುಗಲಿದೆ ಎಂದು ವೇಮನ್ ಅಕಾಡೆಮಿಯ ಅಧ್ಯಕ್ಷ ದಯಾನಂದ ಸು.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮಲ್ಲಮ್ಮ ನಗರದ ಶಾಲಾ ಆವರಣದಲ್ಲಿ ಮೇ 24 ರಂದು ಬೆಳಗ್ಗೆ 10.30ಕ್ಕೆ ನೂತನ ಶಾಲಾ ಕಟ್ಟಡವು ಅಧಿಕೃತವಾಗಿ ಉದ್ಘಾಟನೆ ಹಾಗೂ ಶಾಲಾ ಪ್ರಾರಂಭೋತ್ಸವ ಸಮಾರಂಭ ಜರುಗಲಿದೆ ಎಂದು ವೇಮನ್ ಅಕಾಡೆಮಿಯ ಅಧ್ಯಕ್ಷ ದಯಾನಂದ ಸು.ಪಾಟೀಲ ಹೇಳಿದರು.ನಗರದ ಕಾನಿಪ ಸಂಘದ ಕಾರ್ಯಾಲಯದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇಮನ್ ಅಕಾಡೆಮಿಗೆ ಸಾಕಷ್ಟು ಜನರು ದೇಣಿಗೆ ನೀಡಿದ್ದಾರೆ. ಈಗಾಗಲೇ ದೇಣಿಗೆದಾರರಿಂದ ₹10.5 ಕೋಟಿ ಹಣ ಸಂಗ್ರಹವಾಗಿದೆ. ದೇಣಿಗೆದಾರರಿಂದ ಸಂಗ್ರಹಿಸಿದ ಹಣದಲ್ಲಿ ಈ ನೂತನ ಹೈಟೆಕ್ ಶಾಲಾ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.ಕೇವಲ ಅಂಕಗಳ ಬೆನ್ನತ್ತಿ ಓಡುವುದಷ್ಟೇ ಶಿಕ್ಷಣವಲ್ಲ. ವಿದ್ಯಾರ್ಥಿಗಳಿಗೆ ಆಧುನಿಕ ಗುಣಮಟ್ಟದ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ, ದೈಹಿಕ ಮತ್ತು ನೈತಿಕ ಸಂಸ್ಕಾರದ ಪಾಠಗಳನ್ನು ಕಲಿಸಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಪ್ರತಿ ಶಾಲಾ ಕೊಠಡಿಯೂ ಅತ್ಯಾಧುನಿಕ ತಂತ್ರಜ್ಞಾನದಿಂದ ಸಜ್ಜುಗೊಂಡಿದ್ದು, ಕೇಬಲ್ ಇಂಟರ್ನೆಟ್ ಸೌಲಭ್ಯ ಮತ್ತು ಸುಧಾರಿತ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಪರಿಣಿತ ಶಿಕ್ಷಕರ ಬಳಗದೊಂದಿಗೆ ಮಕ್ಕಳು ಪ್ರಾಯೋಗಿಕವಾಗಿ ಕಲಿಯಲು ಮಾಂಟೆಸ್ಸರಿ ಉಪಕರಣಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ಪುಸ್ತಕಕ್ಕೆ ಸೀಮಿತವಾಗದೆ ವಸ್ತುಗಳನ್ನು ಮುಟ್ಟಿ ನೋಡುವ ಮೂಲಕ ಕಲಿಯುವ ಪ್ರಾಯೋಗಿಕ ಕಲಿಕಾ ಶೈಲಿಯನ್ನು ಇಲ್ಲಿ ಅಳವಡಿಸಲಾಗಿದೆ ಎಂದು ವಿವರಿಸಿದರು.ವೇಮನ್ ಆಕಾಡೆಮಿಯ ಸದಸ್ಯರಾದ ಕೆ.ಆರ್.ಮಾಚಪ್ಪನವರ, ಎ.ಜಿ.ಪಾಟೀಲರು ಕಾರ್ಯಕ್ರಮದ ರೂಪುರೇಷೆಗಳ ಕುರಿತು ಮಾಹಿತಿ ಹಂಚಿಕೊಂಡ ಅವರು, ಎರೇಹೊಸಳ್ಳಿ ಮಹಾಯೋಗಿ ವೇಮನ ಗುರುಪೀಠದ ವೇಮನಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರವಾಸೋದ್ಯಮ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸುವರು. ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ನೂತನ ಕಟ್ಟಡ ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಮುಖ್ಯ ಅತಿಥಿ ಸ್ಥಾನವಹಿಸುವರು. ಮಾಜಿ ಸಚಿವ ಎಸ್.ಆರ್.ಪಾಟೀಲ, ಶಾಸಕರಾದ ಜೆ.ಟಿ.ಪಾಟೀಲ, ಪಿ.ಎಚ್. ಪೂಜಾರ, ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ಮಾಜಿ ಸಚಿವ ಅಜಯಕುಮಾರ ಸರನಾಯಕ ಮತ್ತು ರೆಡ್ಡಿ ಸಮಾಜದ ಹಿರಿಯರಾದ ಹಣಮಂತಗೌಡ ಬಿ. ಬಿರಾದಾರಪಾಟೀಲ ಅತಿಥಿ ಸ್ಥಾನ ವಹಿಸುವರು ಎಂದು ತಿಳಿಸಿದರು.ಈ ಐತಿಹಾಸಿಕ ಶೈಕ್ಷಣಿಕ ಮಹೋತ್ಸವಕ್ಕೆ ಸಾರ್ವಜನಿಕರು, ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಂಸ್ಥೆಯ ಪದಾಧಿಕಾರಿಗಳು ವಿನಂತಿಸಿದರು. ವೇಮನ್ ಆಕಾಡೆಮಿಯ ಆಡಳಿತ ಮಂಡಳಿ ಸದಸ್ಯರಾದ ಕೆ.ಆರ್.ಮಾಚಪ್ಪನವರ, ಎಸ್.ಎನ್.ನಾಡಗೌಡ, ಎ.ಜಿ.ಪಾಟೀಲ, ಉದಯಕುಮಾರ ಸಾರವಾಡ, ಶ್ರೀಕಾಂತ ಗುಜ್ಜನ್ನವರ, ಎಂ.ವಿ.ದಾಸರಡ್ಡಿ, ಎಸ್.ಎಸ್.ಮಲಘಾಣ, ಎಸ್.ಎಚ್.ಬಿ.ಪಾಟೀಲ, ಹಣಮಂತಗೌಡ ಬಿ.ಪಾಟೀಲ ಉಪಸ್ಥಿತರಿದ್ದರು.ಕೋಟ್‌..

1972ರಲ್ಲಿ ಸ್ಥಾಪನೆಗೊಂಡ ಭಕ್ತಿ ಶಿರೋಮಣಿ ಕರ್ಮಯೋಗಿ ಹೇಮರಡ್ಡಿ ಮಲ್ಲಮ್ಮ ಶೈಕ್ಷಣಿಕ ಮತ್ತು ಧಾರ್ಮಿಕ ಸಂಸ್ಥೆಯು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣ ನೀಡುತ್ತಾ ಗ್ರಾಮೀಣ ಭಾಗದ ಶೈಕ್ಷಣಿಕ ಬೆಳಕಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. 72 ಸಾವಿರ ಚದುರ ಅಡಿ ವಿಸ್ತೀರ್ಣದ ಜಾಗದಲ್ಲಿ 2023ರ ನವೆಂಬರ್ ತಿಂಗಳಲ್ಲಿ ವೇಮನ್ ಅಕಾಡೆಮಿಯ ನೂತನ ಶಾಲಾ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಲಾಯಿತು. ಕೇವಲ ಎರಡೂವರೆ ವರ್ಷದಲ್ಲಿ ಸುಸಜ್ಜಿತ ಬೃಹತ್ ಕಟ್ಟಡ ನಿರ್ಮಾಣವಾಗಿದೆ. -ದಯಾನಂದ ಸು.ಪಾಟೀಲ, ವೇಮನ್ ಅಕಾಡೆಮಿಯ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಇಒ ಭೇಟಿ
ಮೆಡಿಕಲ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ