ಭಾವಗೀತೆಗೆ ಆಧುನಿಕತೆಯ ಸ್ಪರ್ಶ ನೀಡಿದ ಎಚ್.ಎಸ್. ವೆಂಕಟೇಶಮೂರ್ತಿ

KannadaprabhaNewsNetwork |  
Published : Jun 25, 2025, 11:47 PM IST
ಗದಗ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರ 81ನೇ ಜಯಂತಿ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಗದಗ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಕಬ್ಬಿಗರ ಕೂಟ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ 81ನೇ ಜಯಂತಿ ಆಚರಿಸಲಾಯಿತು.

ಗದಗ: ಹೊಸಗನ್ನಡದ ಹರಿಕಾರರಾಗಿ ಭಾವಗೀತೆ ಪ್ರಕಾರಕ್ಕೆ ಭದ್ರನೆಲೆ ಒದಗಿಸಿದ ನವೋದಯ ಕವಿಗಳ ಕೊನೆಯ ಕೊಂಡಿಯಾಗಿ ಕಾವ್ಯ ರಚಿಸಿದ ಎಚ್.ಎಸ್. ವೆಂಕಟೇಶಮೂರ್ತಿ ಭಾವಗೀತೆಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದ ಮಹತ್ವದ ಕವಿ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ವಿ. ಬಡಿಗೇರ ಹೇಳಿದರು.

ಸ್ಥಳೀಯ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಕಬ್ಬಿಗರ ಕೂಟ ಮತ್ತು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಿದ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ 81ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂತಹ ಮಧುರ ಕಾವ್ಯ ರಚನೆಯ ಲೇಖಕರ ಅಗಲುವಿಕೆ ಕನ್ನಡ ಕಾವ್ಯ ಪರಂಪರೆಗೆ ಆಘಾತ ತಂದಿದೆ ಎಂದರು.

ಕಾವ್ಯ, ನಾಟಕ, ಚಲನಚಿತ್ರ, ಮಕ್ಕಳ ಸಾಹಿತ್ಯ, ಕಿರುತೆರೆಯ ಧಾರವಾಹಿ ಇತ್ಯಾದಿ ಕ್ಷೇತ್ರಗಳಲ್ಲಿ ವೆಂಕಟೇಶಮೂರ್ತಿ ಅವರು ಅನನ್ಯ ಸಾಧನೆ ತೋರಿದ್ದರು. ಗಾಯಕರು ಅವರ ಭಾವಗೀತೆಗಳನ್ನು ಮನದುಂಬಿ ಹಾಡಿದ್ದನ್ನು ಮರೆಯಲಾಗದು. ನವಿರು ಭಾವಗಳ ಗೀತ ರಚನೆಕಾರರ ಕೊರತೆ ಕನ್ನಡ ಸಾರಸ್ವತ ಲೋಕದಲ್ಲಿ ಎದ್ದು ಕಾಣುತ್ತದೆ. ಬುದ್ಧಚರಣದಂತಹ ಮಹಾಕಾವ್ಯ ರಚಿಸಿ ಬುದ್ಧನಿಗೆ ಶರಣಾಗುವುದೆಂದರೆ ಕೇವಲ ಬುದ್ಧನ ತತ್ವಗಳನ್ನು ಉಚ್ಚರಿಸುವುದಲ್ಲ, ನೋವುಗಳಿಂದ ಬಿಡುಗಡೆ ಹೊಂದಿ ಇರಬೇಕು. ಇದ್ದಂತೆ ಮಳೆ ಸುರಿಸಿ ಮುಗಿಲು ಹಗುರಾದಂತೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ ವೆಂಕಟೇಶಮೂರ್ತಿ ಅವರು, ಕನ್ನಡ ನಾಡು ಕಂಡ ಅಪರೂಪದ ಕವಿ. ಇವರ ಸಮಗ್ರ ರಚನೆಗಳ ಮರು ಮುದ್ರಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಅಧ್ಯಕ್ಷತೆ ವಹಿಸಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಬಿ.ಆರ್. ಮೂಲಿಮನಿ, ಜಿ.ಎಸ್. ಹೊಂಬಳ, ವಿನಾಯಕ ಗಾಣಿಗೇರ, ಪ್ರ.ತೋ. ನಾರಾಯಣಪುರ, ಗೋವಿಂದ ಪೂಜಾರಿ, ಗೀತಾ ನವಲಗುಂದ, ಐ.ಟಿ. ಗದಗಿನ, ಎಸ್. ಕಬಾಡಿ, ಜೀವನಸಾಬ ಹಬ್ಬಂಡಿ ಇದ್ದರು. ನಜೀರ ಸಂಶಿ ಸ್ವಾಗತಿಸಿದರು. ಬಸವರಾಜ ವಾರಿ ವಂದಿಸಿದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ