ಶಿವಾನಂದ ಪಿ ಮಹಾಬಲಶೆಟ್ಟಿ
ತಾಲೂಕಿನಲ್ಲಿ ನೀರಾವರಿ ಕ್ರಾಂತಿ ಭಾರೀ ಸುದ್ದಿಯಾಗಿ ಶುರುವಾಗಿದ್ದ ವೆಂಕಟೇಶ್ವರ ಏತನೀರಾವರಿ ಯೋಜನೆಯು ₹ 174.42 ಕೋಟಿ ವೆಚ್ಚದಲ್ಲಿ 2017-18ರಲ್ಲಿ ಪ್ರಾರಂಭಗೊಂಡು ಜನೆವರಿ 2024ರಲ್ಲಿ 100ಕ್ಕೆ 100ರಷ್ಟು ಮುಕ್ತಾಯಗೊಂಡು ಬರೋಬ್ಬರಿ ಎರಡುವರೆ ವರ್ಷಗಳಾಗಿದ್ದರೂ, ಇಂದಿಗೂ ಹನಿ ನೀರು ಕಾಲುವೆಗಳಿಗೆ ಹರಿಯದೇ ಸಾವಿರಾರು ರೈತರ ಪಾಲಿಗೆ ಶಾಪವಾಗಿದ್ದು, ನಮ್ಮ ಆಡಳಿತ ವೀರರ ಪ್ರಾಮಾಣಿಕ ಕೆಲಸಗಳಿಗೆ ಹಿಡಿದ ಕೈಗನ್ನಡಿ ಆಗಿದೆ.ಬಾಗಲಕೋಟೆ ಜಿಲ್ಲೆಯ ಮಹತ್ತರ ನೀರಾವರಿ ಯೋಜನೆಯಲ್ಲಿ ಒಂದಾಗಿರುವ ವೆಂಕಟೇಶ್ವರ ಏತನೀರಾವರಿ ನಿಗದಿತ ಕಾಲದಲ್ಲಿ ಕಾಲುವೆಗೆ ನೀರು ಹರಿದು ರೈತರಿಗೆ ವರದಾನ ಆಗಬೇಕಿತ್ತು. ಆದರೂ ಇದೂವರೆಗೆ ಹನಿನೀರು ಕಾಲುವೆಗಳ ಮೂಲಕ ರೈತರ ಜಮೀನುಗಳ ಹಸಿನಿಂದ ನಳನಳಿಸಬೇಕಿತ್ತು. ಆದರೂ ಮೂಲ ಕಾರ್ಯವೇ ಫಲಿಸದ ಕಾರಣಕ್ಕೆ ಇದೀಗ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಜಗದಾಳ-ನಾವಲಗಿ ಸುತ್ತಲಿನ ಮುಖ್ಯ ಹಾಗೂ ಉಪ ಕಾಲುವೆಗಳನ್ನು ಇಷ್ಟು ವರ್ಷಗಳಾದರೂ ನೀರು ಬಾರದ ಕಾರಣ ಸ್ವಯಂಪ್ರೇರಿತ ರೈತರೇ ತಮ್ಮಲ್ಲಿನ ಅನಗತ್ಯ ವಸ್ತುಗಳನ್ನು ಹಾಕಿ, ಮೇವು ಬೆಳೆ ಬೆಳೆಯುತ್ತ ಮುಚ್ಚಿದ್ದಾರೆ. ಇದರಿಂದಾಗಿ ಸಾರ್ವಜನಿಕರ ತೆರಿಗೆಯ ಹಣ ಅಕ್ಷರಶಃ ಪೋಲಾದಂತಿದೆ.ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯಕ್ಕೆ ಕುಲಹಳ್ಳಿ ಗ್ರಾಮದ ಕೃಷ್ಣಾ ನದಿಯಿಂದ 0.75 ಟಿಎಂಸಿಯಷ್ಟು ನೀರನ್ನು ಬಳಕೆ ಮಾಡಿಕೊಂಡು ಒಟ್ಟು 17.991 ಎಕರೆ (ಸುಮಾರು 7,200 ಹೆಕ್ಟೇರ್) ಭೂಮಿಗೆ ನೀರುಣಿಸುವ ಗುರಿ ಈ ಯೋಜನೆಯ ಮುಖ್ಯ ಉದ್ದೇಶವೇ ಸಫಲವಾಗದೇ ಯೋಜನೆಯೇ ಸಂಪೂರ್ಣ ನೆಗೆದುಬಿದ್ದಂತಾಗಿದೆ.
ಯೋಜನೆಯ ಮುಖ್ಯ ಕಾಲುವೆಯು 5.05 ಕಿ.ಮೀ. ಉದ್ದವಾಗಿದ್ದು, ಇದರ ಸಿದ್ದಾಪುರ ವಲಯದ ಕಾಲುವೆಯು 18.85 ಕಿ.ಮೀ. ಮತ್ತು ನಾವಲಗಿ ವ್ಯಾಪ್ತಿಯಲ್ಲಿ 15.50 ಕಿ.ಮೀ. ಉದ ಸೇರಿ ಒಟ್ಟು 394 ಕಿ.ಮೀ.ಉದ್ದವಿದ್ದರೂ, ಫಲಾನುಭವಿಗಳಾಗಿದ್ದ ರೈತರು, ಯಾವುದೇ ಪರಿಹಾರ ಮತ್ತು ನೀರು ಇಲ್ಲದೇ ಕ್ಷೀಣಗೊಂಡಿದ್ದರೆ, ಯೋಜನೆ ಹೆಸರಲ್ಲಿ ಪುಢಾರಿಗಳು ಮಾತ್ರ ಹುಲುಸಾದ ಫಸಲು ಪಡೆದ ನೈಜ ಫಲಾನುಭವಿಗಳಾಗಿದ್ದಾರೆ.
ಒಂದು ಹನಿಯೂ ನೀರಿಲ್ಲ, ಪರಿಹಾರವೂ ಇಲ್ಲ: ಕಲಹಳ್ಳಿ, ಹುಲ್ಯಾಳ, ಮರೆಗುದ್ದಿ, ಬುದ್ನಿ, ಮಾಲಾಪುರ, ಚಿಮ್ಮಡ, ಜಗದಾಳ, ನಾವಲಗಿ ಗ್ರಾಮಗಳ ಭಾಗದ ರೈತರು ಇದುವರೆಗೆ ಪರಿಹಾರ ಧನದಿಂದ ವಂಚಿತರಾಗಿದ್ದಾರೆ. ಅಲ್ಲದೇ, ಕಾಲುವೆಗೆ ಇದುವರೆಗೂ ಹನಿ ನೀರೂ ಬಂದಿಲ್ಲ. ಹೀಗಾಗಿ ನೀರಾವರಿ ವಂಚಿತ ರೈತರ ಜಮೀನುಗಳಿಗೆ ನೀರು ಕಲ್ಪಿಸುವಲ್ಲಿ ಕಾಲುವೆಯ ಅಪ್ರಯೋಜನವೆಂದು ಬೇಸರಗೊಂಡು ಸಂಪೂರ್ಣ ಮುಚ್ಚಿ ನಮ್ಮ ಹೊಲಗಳಲ್ಲಿ ಬೇಸಾಯ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ.
-ಮಲ್ಲಿಕಾರ್ಜುನ ಜನವಾಡ, ರೈತ, ನಾವಲಗಿ.
ಪರಿಹಾರಕ್ಕಾಗಿ ಇಲಾಖೆಗಳಿಗೆ ಅಲೆದು ಸಾಕಾಗಿದೆ. ಎಷ್ಟೇ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ. ಕೇಳಿದಾಗೊಮ್ಮೆ ಭರವಸೆಗಳೇ ಬೇಸರವಾಗಿವೆ.
-----
-ಪ್ರದೀಪ ಪಾಟೀಲ, ಸಹಾಯಕ ಅಭಿಯಂತರ, ನೀರಾವರಿ ಇಲಾಖೆ, ಜಮಖಂಡಿ.