ಹಗರಿಬೊಮ್ಮನಹಳ್ಳಿ: ಮಧ್ಯ ಕರ್ನಾಟಕದ ವೈಷ್ಣವ ಮತ ಪಂಥದ ಶ್ರದ್ಧಾ ಕೇಂದ್ರವಾಗಿರುವ ಪಟ್ಟಣದ ರಾಮನಗರದಲ್ಲಿ ನಾಡಿನ ಆರಾಧ್ಯ ದೈವವಾಗಿರುವ ವೆಂಕಟೇಶ್ವರ ೬೯ನೇ ವರ್ಷದ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ನಡೆಯಿತು.
ಮಹಾದಾನಿಗಳಾದ ಗಂಗಾವತಿ ವೆಂಕೋಬಣ್ಣವರು ದಾನವಾಗಿ ನಿರ್ಮಿಸಿ ಕೊಟ್ಟ ರಥವನ್ನು ಇಂದಿಗೂ ಅವರ ಕುಟುಂಬವರೇ ಆದ ಗಂಗಾವತಿ ವಿಜಯಕುಮಾರ್ ಅವರ ಕುಟುಂಬದವರು ದೇವಸ್ಥಾನದ ಧರ್ಮಕರ್ತರ ಸಹಯೋಗದಲ್ಲಿ ಪ್ರತಿ ವರ್ಷ ಸಾಂಗೋಪಸಾಂಗವಾಗಿ ರಥೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿಕೊಂಡು ಬರುತ್ತಿದ್ದಾರೆ.
ಪಟ್ಟಣದ ಠಾಣೆಯ ಸಿಪಿಐ ವಿಕಾಸ್ ಲಮಾಣಿ ತಮ್ಮ ಪೊಲೀಸ್ ಪಡೆಯೊಂದಿಗೆ ಸೂಕ್ತ ಬಂದೋಬಸ್ತು ಕಲ್ಪಿಸಿದ್ದರು. ಪುರಸಭೆಯ ಅಧ್ಯಕ್ಷ ಮರಿರಾಮಣ್ಣನವರು ನೀರು ಮತ್ತು ಮಜ್ಜಿಗೆ ವಿತರಿಸಲು ವ್ಯವಸ್ಥೆ ಮಾಡಿದ್ದರು. ಈಗಾಗಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಪ್ರತಿದಿನ ನಿಯಮಿತವಾಗಿ ಉಚಿತವಾಗಿ ಉಪಹಾರ ಒದಗಿಸುವ ಖ್ಯಾತಿ ಹೊಂದಿರುವ ಇಲ್ಲಿನ ಪ್ರಶಾಂತ ಹೋಟೆಲ್ ಮಾಲೀಕರಾದ ಗಂಗಾಧರಯ್ಯ ರಥೋತ್ಸವ ನಿಮಿತ್ತ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ ಒದಗಿಸಿದ್ದು ವಿಶೇಷವಾಗಿತ್ತು.ಹಗರಿಬೊಮ್ಮನಹಳ್ಳಿಯ ರಾಮನಗರದಲ್ಲಿ ಶುಕ್ರವಾರ ಸಂಜೆ ವೆಂಕಟೇಶ್ವರ ಸ್ವಾಮಿಯವರ ರಥೋತ್ಸವ ನಡೆಯಿತು.