ಕಡೂರು: ತಾವು ನಾಯಕ ನಟನಾಗಿ ನಟಿಸಿರುವ ‘ಮಾವುತ ಕನ್ನಡ ಚಲನಚಿತ್ರ ಜ.30ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಿ ಆಶೀರ್ವದಿಸಬೇಕು ಎಂದು ಮಾವುತ ಸಿನಿಮಾದ ನಾಯಕ ನಟ ಕಡೂರಿನ ಲಕ್ಷೀಪತಿ ಬಾಲಾಜಿ ಮನವಿ ಮಾಡಿದರು.
ತ್ರಿಲ್ಲರ್ ಮಂಜು, ಪದ್ಮಾವಾಸಂತಿ ಮತ್ತಿತರ ಹಿರಿಯ ನಟರು ಈ ಸಿನಿಮಾದಲ್ಲಿದ್ದು, ಕಡೂರು ಸಮೀಪದ ಗೋವಿಂದಪುರ ಗ್ರಾಮದ ಹುಡುಗನಾದ ನಾನು ನಟಿಸಿರುವ ಸಿನಿಮಾವನ್ನು ವೀಕ್ಷಿಸಿ ಆಶೀರ್ವದಿಸಿ ಎಂದು ಕೋರಿದರು. ರಾಜ್ಯ ಕೃಷಿಕ ಸಮಾಜದ ನಾಮಿನಿ ನಿರ್ದೇಶಕ ಎಸ್.ಎಲ್.ರುದ್ರೇಗೌಡ ಮಾತನಾಡಿ, ಲಕ್ಷಿಪತಿ ಬಾಲಾಜಿ ನಮ್ಮ ಮಧ್ಯೆ ಬೆಳೆದ ಹುಡುಗ. ಎಂಜಿನಿಯರ್ ಪದವಿ ಪಡೆದು ಸಿನಿಮಾ ರಂಗ ಆಯ್ಕೆ ಮಾಡಿಕೊಂಡು ನಾಯಕ ನಟನಾಗಿ ಕಾಡಿನ ಸಂರಕ್ಷಣೆ ಮತ್ತು ಪ್ರಾಣಿಗಳ ಬಗ್ಗೆ ಕುತೂಹಲ ಹುಟ್ಟಿಸುವ ಸಿನಿಮಾದಲ್ಲಿ ನಟಿಸಿದ್ದು, ಕಡೂರಿನ ಜನತೆ ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಟಿಂಬರ್ ವ್ಯಾಪಾರಿ ಗೋಪಾಲಕೃಷ್ಣ ಮಾತನಾಡಿ, ಮಾವುತ ಸಿನಿಮಾಕ್ಕಾಗಿ ಆನೆಯನ್ನು ಪಳಗಿಸಿ ಆನೆಯೊಂದಿಗೆ ತಿಂಗಳುಗಟ್ಟಲೆ ಶಿವಮೊಗ್ಗದ ಸಕ್ಕರೆ ಬೈಲಿನಲ್ಲಿದ್ದು, ಮಾವುತರ ಸಹಕಾರದಿಂದ ಆನೆ ಪಳಗಿಸುವ ಕಲೆ ಕಲಿತು ನಟಿಸಿದ ಚಿತ್ರವನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು. ನಿರ್ದೇಶಕ ರವಿಶಂಕರ್ ನಾಗ್ ಮಾತನಾಡಿ, ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಕಾಡಿನ ಪ್ರಾಣಿ, ಮಾವುತರ ಸಂಕಷ್ಟಗಳ ಬಗ್ಗೆ ಚಿತ್ರಿಸಲಾಗಿದೆ. ಬಹುತೇಕ ಶಿವಮೊಗ್ಗ, ಸಕ್ಕರೆಬೈಲು, ರಾಮಚಂದ್ರಾಪುರ ಮಠ ಮತ್ತು ಸುತ್ತಮುತ್ತಲಿನಲ್ಲಿ ಚಿತ್ರಿಸಲಾಗಿದೆ ಎಂದರು. ಚಿತ್ರದ ನಾಯಕ ನಟಿ ಮಹಾಲಕ್ಷೀ, ಚಿತ್ರದ ಖಳ ನಾಯಕ ಪುಟ್ಟಪ್ಪ, ಸಹಾಯಕ ನಿರ್ದೇಶಕ ತ್ಯಾಗರಾಜ್, ಕಡೂರಿನ ನಟರಾಜ್, ಸಿನಿಮಾ ಬಾಬಣ್ಣ. ಪುರಸಭೆ ಮಾಜಿ ಸದಸ್ಯ ಶ್ರೀಕಾಂತ್, ಆಟೋ ಅಣ್ಣಪ್ಪ, ನಂದೀಶ್, ಎಸ್.ಎಚ್.ಆನಂದ್, ವಕೀಲ ಶಿವಕುಮಾರ್, ಚನ್ನೇನಹಳ್ಳಿ ಆನಂದ್, ಶಿವೇಗೌಡ, ಸೇರಿದಂತೆ ಬಾಲಾಜಿ ಅವರ ಸ್ನೇಹಿತರು ಇದ್ದರು.