ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸ್ಥಳ ಪರಿಶೀಲನೆ

KannadaprabhaNewsNetwork | Published : Jul 15, 2024 1:51 AM

ಸಾರಾಂಶ

ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲಾಡಳಿತ ಅಮರಾವತಿ ಹೋಟೆಲ್ ಹಿಂಭಾಗ, ಚಿಕ್ಕ ಮಂಡ್ಯ ಬೈಪಾಸ್ ಸಮೀಪ ಹಾಗೂ ನಗರದ ಹೊರವಲಯದಲ್ಲಿರುವ ಆರ್‌ಎಪಿಸಿಎಂಎಸ್‌ಗೆ ಸೇರಿದ ಪ್ರದೇಶಗಳನ್ನು ಗುರುತಿಸಿದೆ. ಈ ಮೂರು ಸ್ಥಳಗಳ ಪೈಕಿ ಸದ್ಯದಲ್ಲೇ ಒಂದು ಸ್ಥಳವನ್ನು ನಿಗದಿ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನ ಆಯೋಜನೆ ಸಂಬಂಧ ಭಾನುವಾರ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ನಗರದ ವಿವಿಧೆಡೆ ಸ್ಥಳ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲಾಡಳಿತ ಅಮರಾವತಿ ಹೋಟೆಲ್ ಹಿಂಭಾಗ, ಚಿಕ್ಕ ಮಂಡ್ಯ ಬೈಪಾಸ್ ಸಮೀಪ ಹಾಗೂ ನಗರದ ಹೊರವಲಯದಲ್ಲಿರುವ ಆರ್‌ಎಪಿಸಿಎಂಎಸ್‌ಗೆ ಸೇರಿದ ಪ್ರದೇಶಗಳನ್ನು ಗುರುತಿಸಿದೆ. ಈ ಮೂರು ಸ್ಥಳಗಳ ಪೈಕಿ ಸದ್ಯದಲ್ಲೇ ಒಂದು ಸ್ಥಳವನ್ನು ನಿಗದಿ ಮಾಡಲಾಗುವುದು ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಡಿಸೆಂಬರ್ ಮಾಹೆಯಲ್ಲಿ ಆಯೋಜಿಸಲಾಗಿದೆ. ಸಮ್ಮೇಳನ ಯಶಸ್ವಿಯಾಗಿ ನಡೆಯುವುದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ, ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಸಮ್ಮೇಳನ ನೂತನ ಕಚೇರಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಂಡ್ಯಡಿಸೆಂಬರ್ ತಿಂಗಳಲ್ಲಿ ಮಂಡ್ಯದಲ್ಲಿ ನಡೆಯಲಿರುವ ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ಪ್ರಾರಂಭಿಸಿದೆ. ಭಾನುವಾರ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ನೂತನ ಕಚೇರಿ ಉದ್ಘಾಟಿಸಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು. ಕಚೇರಿಯಲ್ಲಿ ಕವಿವಾಣಿಗಳ ಕಾವ್ಯದ ಸಿಂಚನಗಳ ಫಲಕಗಳನ್ನು ಅಳವಡಿಸಿ ಕನ್ನಡದ ಕಂಪು ಸೂಸುವಂತೆ ಮಾಡಲಾಗಿದೆ.

ಕಚೇರಿ ಉದ್ಘಾಟನೆಯ ನಂತರ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆದಿದ್ದನ್ನು ನೆನಪಿಸುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರೀಗಂಧದ ಗಿಡವನ್ನು ನೆಟ್ಟು ನೀರೆರೆದರು.ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Share this article