ವಿಜಯದಶಮಿಯಂದು ವೇಣುಗೋಪಾಲ ಸ್ವಾಮಿ ಪಲ್ಲಕ್ಕಿ ಉತ್ಸವ

KannadaprabhaNewsNetwork |  
Published : Oct 23, 2026, 01:15 AM IST
ಸುರಪುರದಲ್ಲಿ ವಿಜಯದಶಮಿ ಪ್ರಯುಕ್ತ ಹನುಮ ವಾಹನದ ಮೇಲೆ ಶ್ರೀ ವೇಣುಗೋಪಾಲ ಸ್ವಾಮಿಯ ಪಲ್ಲಕ್ಕಿ ಉತ್ಸವದಲ್ಲಿ ಅರಸು ಡಾ.ರಾಜಾ ಕೃಷ್ಣಪ್ಪನಾಯಕ ಅವರು ಸ್ವಾಮಿಗೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಐತಿಹಾಸಿಕ ಹಿನ್ನಲೆಯ ಸಗರನಾಡಿನ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವಿಜಯದಶಮಿ ದಸರಾ ಉತ್ಸವವನ್ನು ಸುರಪುರ ಸಂಸ್ಥಾನದ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ, ಈ ಬಾರಿಯೂ ಸಂಸ್ಥಾನಿಕರ ನೇತೃತ್ವದಲ್ಲಿ ದಸರಾ ಉತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಐತಿಹಾಸಿಕ ಹಿನ್ನಲೆಯ ಸಗರನಾಡಿನ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವಿಜಯದಶಮಿ ದಸರಾ ಉತ್ಸವವನ್ನು ಸುರಪುರ ಸಂಸ್ಥಾನದ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ, ಈ ಬಾರಿಯೂ ಸಂಸ್ಥಾನಿಕರ ನೇತೃತ್ವದಲ್ಲಿ ದಸರಾ ಉತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.

ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ವೇಣುಗೋಪಾಲ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ವಿವಿಧ ಪುಷ್ಪಗಳಿಂದ ಅಲಂಕರಿಸಲಾದ ಹನುಮ ವಾಹನದ ಮೇಲೆ ಸ್ವಾಮಿಯ ಪಲ್ಲಕ್ಕಿ ಉತ್ಸವ ಜರುಗಿತು. ಸ್ವಾಮಿಯ ದರ್ಶನ ಪಡೆದ ಭಕ್ತರು ಬನ್ನಿ ಸಮರ್ಪಿಸಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಸ್ವಾಮಿಯ ಪಲ್ಲಕಿಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಶ್ರೀ ಪ್ರಭು ಕಾಲೇಜು ಮೈದಾನದ ಹಿಂಭಾಗದ ಖಾನಿಕೇರಿಯಲ್ಲಿ ಬನ್ನಿ ಮುಡಿಯುವ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಪಲ್ಲಕ್ಕಿ ಮೆರವಣಿಗೆಯು ದರಬಾರ ಅರಮನೆ ಮುಂದೆ ಬಂದಾಗ ರಾಜಾವಂಶಸ್ಥ ಅರಸ ಡಾ.ರಾಜಾ ಕೃಷ್ಣಪ್ಪನಾಯಕ ಹಾಗೂ ಅವರ ಪರಿವಾರದೊಂದಿಗೆ ವೇಣುಗೋಪಾಲಸ್ವಾಮಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ವಾದ್ಯಮೇಳ, ಭಜನೆ ಹಾಗೂ ‘ಗೋವಿಂದ-ಗೋವಿಂದ’ ಎಂಬ ವೆಂಕಟರಮಣನ ನಾಮಾಸ್ಮರಣೆಯ ಘೋಷಣೆಗಳು ಮೊಳಗಿದವು. ದೇವಸ್ಥಾನದ ಪ್ರಧಾನ ಅರ್ಚಕ ಅಂಜನೇಯಚಾರ್ಯ ಅವರ ನೇತೃತ್ವದಲ್ಲಿ ಸಂಸ್ಥಾನದ ಪಟ್ಟದ ಕತ್ತಿಗೆ ಪೂಜೆ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಪಲ್ಲಕ್ಕಿ ಮೆರವಣಿಗೆ ಆಗಮಿಸಿದ ಸಂದರ್ಭ ಶಾಸಕ ರಾಜಾ ವೇಣುಗೋಪಾಲನಾಯಕ ಹಾಗೂ ಅವರ ಸಹೋದರರು ಸ್ವಾಮಿಗೆ ಪೂಜೆ ಸಲ್ಲಿಸಿ ಪಲ್ಲಕ್ಕಿಯನ್ನು ಸ್ವಲ್ಪ ದೂರ ಹೊತ್ತು ಸೇವೆ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಮಂಜುನಾಥ್ ಗೋರ್ಕಲ್ ಅವರು ಸಾಂಪ್ರದಾಯಿಕ ಭರತನಾಟ್ಯ ಹಾಗೂ ಕುಂಭಾರತಿ ನೃತ್ಯ ಪ್ರದರ್ಶಿಸಿ ಭಕ್ತರ ಗಮನ ಸೆಳೆದರು.

ವಿಜಯದಶಮಿಯ ಸಂಪ್ರದಾಯದಂತೆ ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು. ಉತ್ಸವದಲ್ಲಿ ಸಂಸ್ಥಾನದ ವತನದಾರರಾದ ಗಣೇಶ ಜಾಗೀರದಾರ, ಉಸ್ತಾದ ವಜಾಹತ್ ಹುಸೇನ್, ರಾಜಾ ಕೃಷ್ಣದೇವರಾಯ ನಾಯಕ, ರಾಜಾ ಪಿಡ್ಡನಾಯಕ(ತಾತಾ), ವೆಂಕಟೇಶ ಹವಾಲ್ದಾರ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರು ದಸರಾದಲ್ಲಿ ಸ್ತ್ರೀ ಶಕ್ತಿಗೆ ಭಾರೀ ಮೆಚ್ಚುಗೆ
ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡಲು ವಿಳಂಬ