ಕೈ-ಕಮಲ ಕಾರ್ಯಕರ್ತರ ನಡುವೆ ವಾಗ್ವಾದ-ತಳ್ಳಾಟ!

KannadaprabhaNewsNetwork |  
Published : Oct 24, 2026, 02:15 AM IST
ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸುತ್ತಿರುವುದು.  | Kannada Prabha

ಸಾರಾಂಶ

ಮತದಾನ ಆರಂಭವಾದ ಕೆಲವೇ ಗಂಟೆಗಳಲ್ಲಿ ಮುನ್ಸಿಪಲ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು

ಗದಗ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತದಾನ ಶುಕ್ರವಾರ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದರೂ, ಗದಗ ನಗರದ ಮುನ್ಸಿಪಲ್ ಕಾಲೇಜು ಮತಗಟ್ಟೆ ಹೊರಭಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಜೆ ನಡೆದ ಜಯಘೋಷ, ವಾಗ್ವಾದ ಹಾಗೂ ತಳ್ಳಾಟ ನೂಕಾಟ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಿಸಿತು.

ಮತದಾನ ಆರಂಭವಾದ ಕೆಲವೇ ಗಂಟೆಗಳಲ್ಲಿ ಮುನ್ಸಿಪಲ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ದಿನದ ಬಹುತೇಕ ಅವಧಿಯಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಂದುವರಿಯಿತು.

ನಾಯಕರ ಆಗಮನದ ಬಳಿಕ ಮತ್ತೆ ಗದ್ದಲ: ಸಂಜೆ ಮುನ್ಸಿಪಲ್ ಕಾಲೇಜು ಹೊರವಲಯದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರ ಪರ ಹಾಕಲಾಗಿದ್ದ ಟೆಂಟ್ ಬಳಿ ನರಗುಂದ ಶಾಸಕ ಸಿ.ಸಿ. ಪಾಟೀಲ ಆಗಮಿಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಕೂಡ ಮತಗಟ್ಟೆಗೆ ಆಗಮಿಸಿದರು. ಮೋಹನ ಲಿಂಬಿಕಾಯಿ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಅವರ ಪರ ಘೋಷಣೆ ಕೂಗಿದರು. ನಂತರ ಮತಗಟ್ಟೆಯ ಒಳಗೆ ತೆರಳಿದ ಬಳಿಕ ಅಲ್ಲಿದ್ದ ಬಿಜೆಪಿ ಕಾರ್ಯಕರ್ತರು ಶಾಸಕ ಸಿ.ಸಿ. ಪಾಟೀಲ ಪರ ಜಯಘೋಷ ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಎಚ್.ಕೆ. ಪಾಟೀಲ ಅವರ ಪರ ಘೋಷಣೆ ಕೂಗಿದರು. ಹೀಗೆ ಸುಮಾರು 15ರಿಂದ 20 ನಿಮಿಷ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಪರಸ್ಪರ ಜಯಘೋಷ ಮುಂದುವರಿಯಿತು. ನಂತರ ಕೆಲವರು ನಾಯಕರ ಹೆಸರು ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ಸಿ.ಸಿ. ಪಾಟೀಲ ಆಕ್ರೋಶ: ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ತಳ್ಳಾಟ, ನೂಕಾಟದ ಹಂತಕ್ಕೆ ತಲುಪುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿದರು. ಈ ವೇಳೆ ಶಾಸಕ ಸಿ.ಸಿ. ಪಾಟೀಲ ಅವರು ಅಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪರಿಸ್ಥಿತಿ ನಿಯಂತ್ರಿಸುವಂತೆ ಸೂಚಿಸಿದರು. ಕೆಲಕಾಲ ಎರಡೂ ಬಣಗಳ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ ನಡೆದ ಪರಿಣಾಮ ಮತಗಟ್ಟೆ ಸುತ್ತ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರು ಎರಡೂ ಗುಂಪುಗಳನ್ನು ಪ್ರತ್ಯೇಕಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಯಾವುದೇ ಅಹಿತಕರ ಘಟನೆ ನಡೆಯದೇ ಚುನಾವಣೆ ಪ್ರಕ್ರಿಯೆ ಕೊನೆಗೊಂಡಿತು.

ಮತದಾರರ ಅಸಮಾಧಾನ: ಮತದಾನ ಮಾಡಲು ಆಗಮಿಸಿದ್ದ ಪದವೀಧರ ಮತದಾರರು ಮತಗಟ್ಟೆ ಹೊರಭಾಗದಲ್ಲಿ ನಡೆದ ರಾಜಕೀಯ ಕಾರ್ಯಕರ್ತರ ಗದ್ದಲಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮತದಾನದ ಹಕ್ಕು ಹೊಂದಿರುವ ಪದವೀಧರರು ಶಾಂತಿಯುತವಾಗಿ ಮತ ಚಲಾಯಿಸಲು ಬಂದಿರುವ ಸಂದರ್ಭದಲ್ಲಿ, ಮತಗಟ್ಟೆ ಹೊರಗೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಗದ್ದಲ ನಡೆಸುತ್ತಿರುವುದು ಸರಿಯಲ್ಲ ಎಂದು ಕೆಲವು ಜನ ಅಭಿಪ್ರಾಯ ವ್ಯಕ್ತಪಡಿಸಿದರೆ, ಮತಗಟ್ಟೆ ಸುತ್ತಲಿನ ಗದ್ದಲದಲ್ಲಿ ಭಾಗವಹಿಸಿದ್ದವರ ಪೈಕಿ ಬಹುತೇಕರು ಮತದಾರರಲ್ಲ ಎಂಬ ಮಾತುಗಳು ಮತಗಟ್ಟೆ ಬಳಿಯೇ ಕೇಳಿ ಬಂದವು. ಮತದಾನ ಪ್ರಕ್ರಿಯೆಗೆ ಸಂಬಂಧಿಸದವರು ಅನಗತ್ಯವಾಗಿ ಗುಂಪುಗೂಡಿ ವಾತಾವರಣ ಹದಗೆಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಮುಖರ ಮತದಾನ: ಕಾಂಗ್ರೆಸ್‌ನ ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ ಅವರು ಗದಗ ತಾಲೂಕಿನ ಹುಲಕೋಟಿಯಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಗದಗಿನ ಮುನ್ಸಿಪಲ್ ಕಾಲೇಜು ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಪದವೀಧರ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. ಒಟ್ಟಾರೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನಗಲ್ಲ ತಾಲೂಕಿನಲ್ಲಿ ಶೇ. ೮೦.೨೯ ಮತದಾನ
ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ ರೂಪಾಲಿ ನಾಯ್ಕ