ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿರಿಯ ರಂಗ ನಿರ್ದೇಶಕ, ಕಲಾವಿದ ಯಶವಂತ ಸರದೇಶಪಾಂಡೆ (60) ಹೃದಯಾಘಾತದಿಂದ ನಗರದಲ್ಲಿ ನಿಧನರಾದರು.ಭಾನುವಾರ ರಾತ್ರಿ ಧಾರವಾಡದಲ್ಲಿ ನಾಟಕ ಪ್ರದರ್ಶನ ನೀಡಿ, ಸೋಮವಾರ ಬೆಳಗ್ಗೆ ಸುಮಾರು 8.30ಕ್ಕೆ ಬೆಂಗಳೂರಿಗೆ ಹಿಂದಿರುಗಿದ್ದರು. ಸುಮಾರು 9.30ರ ಸುಮಾರಿಗೆ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾದ ಅವರನ್ನು ಪೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯೆ ಅಸುನೀಗಿದರು.
ಕಿರುತೆರೆ ಕಲಾವಿದರೂ ಆಗಿರುವ ರಂಗಕರ್ಮಿ ಪತ್ನಿ ಮಾಲತಿ ಸರದೇಶಪಾಂಡೆ ಮತ್ತು ಪುತ್ರಿ ಕಲ್ಪಶ್ರೀ ಹಾಗೂ ಮೂವರು ಸಹೋದರರನ್ನು ಅವರು ಅಗಲಿದ್ದಾರೆ. ಸೋಮವಾರ ಆವಲಹಳ್ಳಿ ಬಿಡಿಎ ಲೇಔಟ್‌ನ ಅವರ ಕಾಮಧೇನು ನಿವಾಸದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ರಂಗಭೂಮಿ, ಕಿರುತೆರೆ, ಚಲನಚಿತ್ರ ಸೇರಿ ನಾನಾ ಕ್ಷೇತ್ರಗಳ ಗಣ್ಯರು ಅಂತಿಮ ದರ್ಶನ ಪಡೆದರು. ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 9 ರಿಂದ 11 ಗಂಟೆವರೆಗೆ ಯಶವಂತ ಸರದೇಶಪಾಂಡೆ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.ಗಣ್ಯರ ಸಂತಾಪ:ಯಶವಂತ ಸರದೇಶಪಾಂಡೆ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಕಾನೂನು ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಹಿರಿಯ ರಂಗನಿರ್ದೇಶಕ ಶ್ರೀನಿವಾಸ್ ಜಿ.ಕಪ್ಪಣ್ಣ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಕಸಾಪ ಅಧ್ಯಕ್ಷ ಡಾ। ಮಹೇಶ್ ಜೋಶಿ, ಚಿತ್ರನಿರ್ದೇಶಕ ಪಿ.ಶೇಷಾದ್ರಿ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.+++
ಅಂತ್ಯ ಸಂಸ್ಕಾರ ಇಂದು ನಿರ್ಧಾರ?:ಯಶವಂತ ಸರದೇಶಪಾಂಡೆ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಎಲ್ಲಿ ನಡೆಸಬೇಕೆನ್ನುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಮುಂಬೈನಲ್ಲಿರುವ ಯಶವಂತ ಅವರ ಹಿರಿಯ ಸಹೋದರ ಬೆಂಗಳೂರಿಗೆ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪರಿಚಯ:ಯಶವಂತ ಸರದೇಶಪಾಂಡೆ ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಶ್ರೀಧರ್ ಮತ್ತು ಕಲ್ಪನಾ ದಂಪತಿ ಪುತ್ರನಾಗಿ 1965ರ ಜೂನ್ 13ರಂದು ಜನಿಸಿದ ಅವರು, ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದಲ್ಲಿ ಮತ್ತು ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಓದಿದವರು. ಕಿರ್ಲೋಸ್ಕರ್‌ನಲ್ಲಿ ಶಿಷ್ಯವೃತ್ತಿ ಮತ್ತು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಡೀಸೆಲ್ ಮೆಕ್ಯಾನಿಕ್ ಕೋರ್ಸ್ ಪೂರ್ಣಗೊಳಿಸಿದ ನಂತರ, ರಂಗಭೂಮಿಯತ್ತ ಆಸಕ್ತರಾದರು. 1985-86 ರಲ್ಲಿ ಹೆಗ್ಗೋಡಿನ ನೀನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮಾ ಪದವಿ ಪಡೆದರು. ಬಳಿಕ ಅಖಿಲ ಭಾರತ ರೇಡಿಯೋ ಮತ್ತು ದೂರದರ್ಶನಕ್ಕಾಗಿ ನಾಟಕಗಳು ಮತ್ತು ಟೆಲಿ ನಾಟಕಗಳನ್ನು ನಿರ್ದೇಶಿಸಿದರು.
ರಂಗಭೂಮಿ ತಂತ್ರಗಳನ್ನು ಕಲಿಯಲು ಭಾರತದಾದ್ಯಂತ ಪ್ರವಾಸ ಮಾಡಿದರು. ನಂತರ ಸರದೇಶಪಾಂಡೆ ಅವರು ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸೇರಿದರು. ಅಲ್ಲಿ ರಂಗಭೂಮಿ ಕಲಾವಿದೆ ಮಾಲತಿ ಅವರ ಪರಿಚಯವಾಗಿ, 1991ರಲ್ಲಿ ವಿವಾಹವಾದರು. 1996ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ನಾಟಕ ರಚನೆ, ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಪಡೆದರು.ಅತಿಥಿ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ ಸೇರಿ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ರಾಮ ಶ್ಯಾಮ ಭಾಮ ಎಂಬ ಚಲನಚಿತ್ರಕ್ಕೆ ಸಂಭಾಷಣೆ ಬರೆದ ಅವರು, ಕಮಲ್ ಹಾಸನ್ ಅವರಿಂದ ಉತ್ತರ ಕರ್ನಾಟಕದ ಆಡುಭಾಷೆ ಆಡಿಸಿದ್ದರು. ಚಿತ್ರದ ಸಂಭಾಷಣೆಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದರು. ಮಕ್ಕಳ ಚಲನಚಿತ್ರ ನಿರ್ಮಿಸಿ, ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿ ಗಳಿಸಿದ್ದರು.
2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸನ್‌ಫೀಸ್ಟ್-ಉದಯ ಪ್ರಶಸ್ತಿ 2006, 2003ರಲ್ಲಿ ಆರ್ಯಭಟ ಪ್ರಶಸ್ತಿ, 2005ರಲ್ಲಿ ಮಯೂರ್ ಪ್ರಶಸ್ತಿ, 2008ರಲ್ಲಿ ಅಭಿನಯ ಭಾರತಿ ಪ್ರಶಸ್ತಿ, 2008ರಲ್ಲಿ ರಂಗಧ್ರುವ ಪ್ರಶಸ್ತಿ , 2008ರಲ್ಲಿ ಗ್ಲೋಬಲ್‌ಮ್ಯಾನ್ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕನ್ನಡ, ಹಿಂದಿ, ಮರಾಠಿಯ ಕೆಲ ಚಿತ್ರಗಳಲ್ಲೂ ಯಶವಂತ ಸರದೇಶಪಾಂಡೆ ಕೆಲಸ ಮಾಡಿದ್ದರು. ಅವರ ಬಹುತೇಕ ನಾಟಕಗಳು 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ.