ರಾಜ್ಯ ಸರ್ಕಾರದ ಶೇ.80ರಷ್ಟು ಕಮಿಷನ್‌ ಸಾಬೀತು: ಅಶೋಕ್‌

KannadaprabhaNewsNetwork |  
Published : Sep 30, 2025, 12:00 AM IST
ಆರ್‌.ಅಶೋಕ್‌ | Kannada Prabha

ಸಾರಾಂಶ

ರಾಜ್ಯ ಸರ್ಕಾರದಲ್ಲಿ ಕಮಿಷನ್‌ ಪಡೆಯುತ್ತಿರುವ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿಗೆ ಪತ್ರ ಬರೆದಿದೆ. ಹೀಗಾಗಿ ರಾಜ್ಯ ಸರ್ಕಾರ ಶೇ.80ರಷ್ಟು ಕಮಿಷನ್‌ ಪಡೆಯುತ್ತಿರುವುದು ಸಾಬೀತಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರದಲ್ಲಿ ಕಮಿಷನ್‌ ಪಡೆಯುತ್ತಿರುವ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿಗೆ ಪತ್ರ ಬರೆದಿದೆ. ಹೀಗಾಗಿ ರಾಜ್ಯ ಸರ್ಕಾರ ಶೇ.80ರಷ್ಟು ಕಮಿಷನ್‌ ಪಡೆಯುತ್ತಿರುವುದು ಸಾಬೀತಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿ ಸರ್ಕಾರದಲ್ಲಿ ಶೇ.40ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದರು. ಈಗ ಗುತ್ತಿಗೆದಾರರ ಸಂಘದವರು ಕಾಂಗ್ರೆಸ್‌ ಸರ್ಕಾರ ದುಪ್ಪಟ್ಟು ಕಮಿಷನ್‌ ಪಡೆಯುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಅಂದರೆ ಇದು ಶೇ.80ರಷ್ಟು ಕಮಿಶನ್‌ ಸರ್ಕಾರ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಎಲ್ಲಾ ಸಚಿವರು ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರು ಲಂಚ ಪಡೆದಿಲ್ಲ ಎಂದಾದರೆ ಸ್ಪಷ್ಟನೆ ನೀಡಲಿ. ಇಲ್ಲವಾದರೆ, ಎಲ್ಲರೂ ಲಂಚ ಪಡೆದಿದ್ದಾರೆ ಎಂದು ತಿಳಿಯಬೇಕಾಗುತ್ತದೆ. ನ್ಯಾ.ನಾಗಮೋಹನದಾಸ್‌ ಸಮಿತಿಯನ್ನು ಸರ್ಕಾರ ರದ್ದು ಮಾಡಿದೆ. ಭ್ರಷ್ಟಾಚಾರ ಬಯಲಾಗುವ ಕಾರಣಕ್ಕೆ ಈ ಕ್ರಮ ವಹಿಸಿದೆ. ಬಿಜೆಪಿ ಅವಧಿಯಲ್ಲಿ ಪೇ ಸಿಎಂ ಪೋಸ್ಟರ್‌ ಅಂಟಿಸಿದ್ದರು. ಇದಕ್ಕೆ ರಾಹುಲ್‌ ಗಾಂಧಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ನೆರೆ ಪರಿಹಾರದ ಬಗ್ಗೆ ಸ್ಪಷ್ಟಪಡಿಸಲಿ:

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಬಂದು ಸಾವು-ನೋವು ಉಂಟಾಗಿದೆ. ಕಲಬುರಗಿ ಹಾಗೂ ಬೀದರ್‌ನಲ್ಲಿ ಹೆಚ್ಚು ಹಾನಿಯಾಗಿದೆ. ಆದರೆ, ಈವರೆಗೂ ಯಾವುದೇ ಸಚಿವರು ಕ್ರಮ ವಹಿಸಿಲ್ಲ. ಬಿಜೆಪಿ ಅವಧಿಯಲ್ಲಿ ಡಬಲ್‌ ಪರಿಹಾರ ನೀಡಲಾಗಿತ್ತು. ಈ ಸರ್ಕಾರದಲ್ಲಿ ಹಣ ಇದ್ದರೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣ ಇಲ್ಲದೆ ಸಚಿವರು ಹಾಗೂ ಮುಖ್ಯಮಂತ್ರಿ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಈ ಸರ್ಕಾರದ ಸಂಪೂರ್ಣ ಗಮನ ಜಾತಿ ಸಮೀಕ್ಷೆ ಕಡೆಗಿದೆ. ಪ್ರವಾಹದಿಂದ ಮನೆ ಹಾನಿ ಹಾಗೂ ಬೆಳೆ ಹಾನಿ ಎಷ್ಟು ಪರಿಹಾರ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು ಎಂದು ಆರ್‌.ಅಶೋಕ್‌ ಆಗ್ರಹಿಸಿದರು.+++ನಾನೂ ಪ್ರವಾಸ ಮಾಡಿ ಸರ್ಕಾರದ ಕಿವಿ ಹಿಂಡುವೆ:

ಕೇಂದ್ರ ಸರ್ಕಾರ ತನ್ನ ಪಾಲಿನ ಪರಿಹಾರ ಹಣ ನೀಡಲಿದೆ. ರಾಜ್ಯ ಸರ್ಕಾರದಿಂದ ತಕ್ಷಣ 3 ಸಾವಿರ ಕೋಟಿ ರು. ಪರಿಹಾರ ಘೋಷಿಸಿ ವಿತರಿಸಬೇಕು. ಬಿಜೆಪಿ ಅವಧಿಯಲ್ಲಿ 30 ದಿನಕ್ಕಾಗುವಷ್ಟು ದಿನಸಿ ನೀಡಲಾಗಿತ್ತು. ಈ ಸರ್ಕಾರದಲ್ಲಿ ಅರ್ಧ ಕೆ.ಜಿ. ಅಕ್ಕಿ ಕೊಟ್ಟಿಲ್ಲ. ಈಗಾಗಲೇ ನಮ್ಮ ಪಕ್ಷದಿಂದ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ. ನಾನೂ ಪ್ರವಾಸ ಮಾಡಿ ಈ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡಲಿದ್ದೇನೆ ಎಂದು ಹೇಳಿದರು.

ಬಿಡದಿಯಲ್ಲಿ ರಿಯಲ್‌ ಎಸ್ಟೇಟ್‌:

ಬಿಡದಿಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಪಡೆದ ಜಮೀನನ್ನು ಎಚ್‌.ಡಿ.ಕುಮಾರಸ್ವಾಮಿ ಕೈಬಿಟ್ಟಿದ್ದರು. ನಾವು ಕೂಡ ಆ ಯೋಜನೆ ಕೈಬಿಟ್ಟಿದ್ದೆವು. ಈಗ ರಿಯಲ್‌ ಎಸ್ಟೇಟ್ ಮೂಲಕ ದುಡ್ಡು ಹೊಡೆಯಲು ಡಿ.ಕೆ.ಶಿವಕುಮಾರ್‌ ಈ ಯೋಜನೆ ಮತ್ತೆ ತಂದಿದ್ದಾರೆ. ಆನೇಕಲ್‌, ಯಲಹಂಕ ಮೊದಲಾದ ಭಾಗಗಳಲ್ಲಿ ಕೈಗಾರಿಕಾ ನಿವೇಶನ ಮಾಡಿದ ನಂತರ ಬಿಡದಿಗೆ ಏಕೆ ಹೋಗುತ್ತಿದ್ದಾರೆ? ಈಗಾಗಲೇ ಅನೇಕ ಕೈಗಾರಿಕಾ ನಿವೇಶನಗಳು ಖಾಲಿ ಇವೆ. ಬಿಡದಿಯಲ್ಲಿ ರೈತರ ಜಮೀನುಗಳಿವೆ. ಅಂತಹ ಫಲವತ್ತಾದ ಭೂಮಿಯಲ್ಲಿ ರಿಯಲ್ ಎಸ್ಟೇಟ್‌ ವ್ಯವಹಾರ ಮಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸೋನಿಯಾ, ರಾಹುಲ್‌ ಮೆಚ್ಚಿಸಲು ಸಮೀಕ್ಷೆ:

ಜಾತಿ ಸಮೀಕ್ಷೆಯಲ್ಲಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ತಮಗೆ ಬೇಕಾದ ಜಾತಿಗಳ ಸಂಖ್ಯೆ ಹೆಚ್ಚಾಗಿ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಮೀಕ್ಷೆಗೆ ಪೂರ್ವ ತಯಾರಿ ಮಾಡಿಲ್ಲ. ಕೇವಲ 15 ದಿನಗಳಲ್ಲಿ ಸಮೀಕ್ಷೆ ಮುಗಿಸಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಇದು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಯನ್ನು ಮೆಚ್ಚಿಸಲು ಮಾಡುತ್ತಿರುವ ಸಮೀಕ್ಷೆ ಎಂದು ಆರ್‌.ಆಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ