ಅಕ್ರಮ ಗೋಮಾಂಸ ದಂಧೆ ಮಟ್ಟ ಹಾಕಲು ವಿಹಿಂಪ ಒತ್ತಾಯ

KannadaprabhaNewsNetwork |  
Published : Mar 28, 2025, 12:35 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಸುನೀಲ್‌ ಕೆ.ಆರ್‌. | Kannada Prabha

ಸಾರಾಂಶ

ದ.ಕ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗೋಹತ್ಯೆ, ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದ್ದು, ತಕ್ಷಣ ಅದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗೋಹತ್ಯೆ, ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದ್ದು, ತಕ್ಷಣ ಅದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದು ಪರಿಷತ್ ಪ್ರಾಂತ ಗೋರಕ್ಷಾ ಪ್ರಮುಖ್ ಸುನೀಲ್ ಕೆ.ಆರ್., ಕಳೆದ ಎರಡು ವಾರಗಳಿಂದ 4 ಕಡೆ ಅಕ್ರಮ ಗೋಮಾಂಸ ಸಾಗಾಟದ ಬಗ್ಗೆ ಬಜರಂಗದಳ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಪೊಲೀಸರು ವಾಹನಗಳನ್ನು ತಡೆದು ಒಂದು ಟನ್‌ಗೂ ಅಧಿಕ ಗೋಮಾಂಸ ವಶಪಡಿಸಿದ್ದಾರೆ. ಆದರೆ, ಅಪರಾಧಿಗಳನ್ನು ಬಂಧಿಸುವ ಹಾಗೂ ಇನ್ನಿತರ ಮುಂದಿನ ಕ್ರಮಗಳನ್ನು ಜರುಗಿಸಿಲ್ಲ. ಈ ಪ್ರಕರಣಗಳನ್ನು ಹೊರತುಪಡಿಸಿ ಅನೇಕ ಕಡೆ ಅಕ್ರಮ ಗೋಮಾಂಸ ಸಾಗಾಟ ನಡೆಯುತ್ತಿದೆ. ಪೊಲೀಸ್‌ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಗೋಮಾಂಸ ಪ್ರಕರಣಗಳ ಹಿಂದೆ ಇರುವ ತಂಡಗಳನ್ನು ಬಂಧಿಸಬೇಕು. ಈ ಕುರಿತು ಸಮಗ್ರ ತನಿಖೆ ನಡೆಸಿ ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದರು.

ಅಕ್ರಮ ಕಸಾಯಿಖಾನೆಗಳು ಜಿಲ್ಲೆಯಲ್ಲಿ ಅವ್ಯಾಹತವಾಗಿ ಕಾರ್ಯಾಚರಿಸುತ್ತಿವೆ. ಸುರತ್ಕಲ್, ಜೋಕಟ್ಟೆ, ತಣ್ಣೀರು ಬಾವಿ, ಕುದ್ರೋಳಿ, ಫರಂಗಿಪೇಟೆ, ಸೂರಲ್ಪಾಡಿ, ಹಂಡೇಲು ಮುಂತಾದೆಡೆ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸುನೀಲ್ ಕೆ.ಆರ್. ಆರೋಪಿಸಿದರು.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ಕಡೆ ಮಾಂಸದ ಅಂಗಡಿಯ ಲೈಸೆನ್ಸ್ ತೆಗೆದುಕೊಂಡು ದನದ ಮಾಂಸ ಮಾರಾಟ ಮಾಡಲಾಗುತ್ತಿದೆ. 200ಕ್ಕೂ ಅಧಿಕ ಬೀಫ್‌ ಸ್ಟಾಲ್‌ಗಳಿವೆ. ಇದರ ಮೇಲೆ ನಿಗಾ ಇರಿಸಿ ಅಲ್ಲಿಗೆ ಎಲ್ಲಿಂದ ಗೋಮಾಂಸ ಪೂರೈಕೆಯಾಗುತ್ತಿದೆ ಎಂಬುದನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದೂ ಸನೀಲ್ ಕೆ.ಆರ್. ಒತ್ತಾಯಿಸಿದರು.ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ವಿಹಿಂಪ, ಬಜರಂಗದಳ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಕಾರ್ಯದರ್ಶಿ ರವಿ ಅಸೈಗೋಳಿ, ಬಜರಂಗದಳ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ