ಕನ್ನಡಪ್ರಭ ವಾರ್ತೆ ಮೂಡುಬಿದಿರೆ ವಿಶ್ವ ಹಿಂದೂ ಪರಿಷತ್ ಮೂಡುಬಿದಿರೆ ಪ್ರಖಂಡದ ವತಿಯಿಂದ ಇಲ್ಲಿನ ಕನ್ನಡ ಭವನದಲ್ಲಿ ಶನಿವಾರ ನಡೆದ ವಿಹಿಂಪ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಕಾರ್ಯಕ್ರಮದಲ್ಲಿ ಅಯೋಧ್ಯಾ ಕರಸೇವಕರನ್ನು ಗೌರವಿಸಲಾಯಿತು. ಮೂಡುಬಿದಿರೆ ಪರಿಸರದಲ್ಲಿರುವ ೬೦ಕ್ಕೂ ಅಧಿಕ ಭಜನಾ ತಂಡಗಳನ್ನು, ವಿಹಿಂಪ ಪ್ರಖಂಡದಲ್ಲಿ ವಿವಿಧ ಹೊಣೆಗಾರಿಕೆ ನಿರ್ವಹಿಸಿದವರನ್ನು ಗುರುತಿಸಿ ಗೌರವಿಸಲಾಯಿತು.
ವಿಹಿಂಪ ದಕ್ಷಿಣ ಪ್ರಾಂತದ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ದಿಕ್ಸೂಚಿ ಭಾಷಣ ಮಾಡಿ, ವಿಹಿಂಪ ಮತಾಂತರದ ವಿರುದ್ಧ ಹೋರಾಟ ಮಾಡುತ್ತಿದ್ದು ಕಳೆದ ೫೦ ವರ್ಷಗಳಲ್ಲಿ ಮತಾಂತರಗೊಂಡ ೬೦ಲಕ್ಷಕ್ಕೂ ಅಧಿಕ ಮಂದಿಯನ್ನು ಮಾತೃಧರ್ಮಕ್ಕೆ ಕರೆತರಲಾಗಿದೆ. ೭೦೦ ಶಾಲೆಗಳಲ್ಲಿ ರಾಮಾಯಣ ಮಹಾಭಾರತ ತರಗತಿಗಳನ್ನು ನಡೆಸಲಾಗುತ್ತಿದೆ. ಸತ್ಸಂಗದ ಮೂಲಕ ಧರ್ಮಜಾಗೃತಿಯೊಂದಿಗೆ ನೂರಾರು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಾರತದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ ಎಂದರು.
ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದ ಅರ್ಚಕ ಅನಂತ ಕೃಷ್ಣ ಅಡಿಗಳ್ ಅಧ್ಯಕ್ಷತೆ ವಹಿಸಿದ್ದರು.ವಿಹಿಂಪ ಪ್ರಾಂತ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಇದ್ದರು. ವಿಹಿಂಪ ಪ್ರಖಂಡ ಅಧ್ಯಕ್ಷ ಶ್ಯಾಮ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದು ಚೇತನ್ ಬೋರುಗುಡ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ಸುಚೇತನ್ ಜೈನ್ ಸ್ವಾಗತಿಸಿದರು. ಶಾಂತರಾಮ ಕುಡ್ವ ವಂದಿಸಿದರು.