ಕನ್ನಡಪ್ರಭ ವಾರ್ತೆ ಮೇಲುಕೋಟೆ
ರಾಮಾನುಜರ ಕರ್ಮಭೂಮಿ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ನೂತನ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ನ.9ರಂದು ಆಗಮಿಸಲಿದ್ದು, ಭದ್ರತೆ, ಹೆಲಿಪ್ಯಾಡ್ ನಿರ್ಮಿಸಲು ಉದ್ದೇಶಿತ ಸ್ಥಳವನ್ನು ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲನೆ ನಡೆಸಿದರು.ಅಂದು ಬೆಳಗ್ಗೆ 10 ಗಂಟೆಗೆ ಮೇಲುಕೋಟೆಗೆ ಆಗಮಿಸಲಿರುವ ಉಪರಾಷ್ಟ್ರಪತಿಗಳು ಚೆಲುವನಾರಾಯಣಸ್ವಾಮಿ ರಾಮಾನುಜಾರ್ಯರ ದರ್ಶನ ಪಡೆಯಲಿದ್ದಾರೆ. ದೇವಾಲಯದಲ್ಲಿ ಸಾಂಪ್ರದಾಯಿಕ ಪೂರ್ಣಕುಂಭಸ್ವಾಗತ ಬೀಳ್ಕೊಡುವಾಗ ರಾಜಾಶೀರ್ವಾದದ ಕಾರ್ಯಕ್ರಮ ಇರಲಿದೆ. 11ಗಂಟೆಗೆ ಮೇಲುಕೋಟೆಯಿಂದ ನಿರ್ಗಮಿಸಲಿದ್ದಾರೆ.
ಉಪರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಡೀಸಿ, ಎಸ್ಪಿ ಅವರು, ಪ್ರಾಥಮಿಕ ಆರೋಗ್ಯಕೇಂದ್ರದ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಉದ್ದೇಶಿಸಿರುವ ಸ್ಥಳ ಪರಿಶೀಲಿಸಿದರು. ಹೆಲಪ್ಯಾಡನ್ನು ಅಚ್ಚುಕಟ್ಟಾಗಿ ಸಿದ್ಧ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಹೆಲಿಪ್ಯಾಡ್‌ನಿಂದ ದೇವಾಲಯಕ್ಕೆ ನೇರವಾಗಿ ಕರೆತಂದು ಪೂರ್ಣಕುಂಭಸ್ವಾಗತ ನೀಡಿ ದರ್ಶನ ಮಾಡಿಸಲು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಮತ್ತು ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿಯೊಂದಿಗೆ ಚರ್ಚಿಸಿ ವ್ಯವಸ್ಥಿತ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಉಪರಾಷ್ಟ್ರಪತಿಗಳು ಬರುವ ರಸ್ತೆಮಾರ್ಗದಲ್ಲಿ ಯಾವುದೇ ಲೋಪವಾಗದಂತೆ ಪೊಲೀಸರು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ನಂತರ ಪ್ರವಾಸಿಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಉಪರಾಷ್ಟ್ರಪತಿಗಳ ಭೇಟಿಯ ವೇಳೆ ವಿವಿಧ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕಾದ ಕಾರ್ಯಗಳನ್ನು ತಕ್ಷಣವೇ ಮಾಡಬೇಕು, ರಸ್ತೆ ದುರಸ್ತಿ, ದೇವಾಲಯಕ್ಕೂ ಭೇಟಿನೀಡಿ ಸ್ಥಾನೀಕರು, ಅರ್ಚಕರೊಂದಿಗೆ ಚರ್ಚಿಸಿ ದೇವಾಲಯದಲ್ಲಿ ದರ್ಶನದ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಮಾಹಿತಿ ನೀಡಿದರು.ಈ ವೇಳೆ ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಶ್ರೀನಿವಾಸ್, ಪಾಂಡವಪುರ ತಹಸೀಲ್ದಾರ್ ಬಸವರೆಡ್ಡಪ್ಪ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ದೇಗುಲದ ಇಒ ಶೀಲಾ, ಎಎಸ್ಪಿ ತಿಮ್ಮಯ್ಯ, ಡಿವೈಎಸ್.ಪಿ ಶಾಂತಮಲ್ಲಪ್ಪ, ಮೇಲುಕೋಟೆ ಸರ್ಕಲ್ ಶರತ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ರಾಮಾನುಜಾಚಾರ್ಯರ ಶ್ರೀವೈಷ್ಣವಪಂತಕ್ಕೆ ಸೇರಿದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ರಾಜ್ಯಪಾಲರಾಗಿದ್ದ ವೇಳೆಯೂ ಮೇಲುಕೋಟೆಗೆ ಭೇಟಿ ನೀಡಿ ಚೆಲುವನಾರಾಯಣಸ್ವಾಮಿ ದರ್ಶನ ಪಡೆದಿದ್ದರು. ಇದೇ ವೇಳೆ ಮನವಿಗೆ ಸ್ಪಂದಿಸಿ ಪ್ರೋಟೋಕಾಲ್ ಇಲ್ಲದಿದ್ದರೂ ಕಲ್ಯಾಣಿ ಸಮುಚ್ಚಯದಲ್ಲಿ ತುಳಿಸಿ ಗಿಡ ನೆಟ್ಟು ತುಳಸಿತೋಟಕ್ಕೆ ಚಾಲನೆ ನೀಡಿ ಶುಭ ರಾಮಾನುಜರ ದಿವ್ಯಕ್ಷೇತ್ರದಲ್ಲಿ ತುಳಸಿ ಮತ್ತು ಹೂವಿನತೋಟಗಳು ಹೆಚ್ಚಾಗಲಿ ಎಂದು ಶುಭ ಹಾರೈಸಿದ್ದರು.ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ:
ಉಪರಾಷ್ಟ್ರಪತಿ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಮುಗಿಸಿ ದೇವಾಲಯದಿಂದ ನಿರ್ಗಮಿಸುವವರೆಗೆ ಭಕ್ತರಿಗೆ ದೇವರ ದರ್ಶನವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ.ಅಂದು ರಾಮಾನುಜಾಚಾರ್ಯರ ಮಾಸ ತಿರುನಕ್ಷತ್ರ ಮಹೋತ್ಸವ ಚಿತ್ತಿರೈ ಆರಿದ್ರಾ ನಕ್ಷತ್ರವೂ ಇರುವ ಕಾರಣ ರಾಮಾನುಜಾಚಾರ್ಯರಿಗೆ ಬೆಳಗ್ಗೆ 9 ಗಂಟೆ ವೇಳೆಗೆ ಅಭಿಷೇಕ ನಡೆದು ಪೂಜಾ ಕೈಂಕರ್ಯ ಮುಕ್ತಾಯಗೊಳಿಸಲಾಗುತ್ತದೆ. ವಿಶೇಷ ಅಲಂಕಾರದಲ್ಲಿ ದರ್ಶನ ಮಾಡಲಿದ್ದಾರೆ. ದೇವಾಲಯದ ಸಾಂಪ್ರದಾಯಿಕ ಪದ್ಧತಿಯಂತೆ ಸ್ವಾಗತಿಸಿ ಸೇವೆ ಮಾಡಿಸುವಂತೆ ಸೂಚನೆ ನೀಡಲಾಗಿದೆ ಭಕ್ತರು ಈ ಬದಲಾವಣೆಯನ್ನು ಗಮನಿಸಿ ಸಹಕಾರ ನೀಡುವಂತೆ ಕೋರಿದ್ದಾರೆ.