ನ.9 ರಂದು ಮೇಲುಕೋಟೆಗೆ ಉಪರಾಷ್ಟ್ರಪತಿ ಭೇಟಿ: ಭಾರೀ ಭದ್ರತೆ

KannadaprabhaNewsNetwork |  
Published : Nov 08, 2025, 01:30 AM IST
7ಕೆಎಂಎನ್ ಡಿ11,12,13 | Kannada Prabha

ಸಾರಾಂಶ

ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ನ.9ರಂದು ಮೇಲುಕೋಟೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಮೈದಾನದಲ್ಲಿ ಭಾರತೀಯ ವಾಯುಸೇನೆ ಅಧಿಕಾರಿಗಳು ಹೆಲಿಕಾಪ್ಟರ್‌ ಲ್ಯಾಂಡಿಂಗ್‌, ಟೇಕಾಫ್ ಮಾಡಿ ಪರೀಕ್ಷಿಸುವ ಮೂಲಕ ಸುರಕ್ಷತೆ ಕುರಿತು ಪರಿಶೀಲನೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ನ.9ರಂದು ಮೇಲುಕೋಟೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಮೈದಾನದಲ್ಲಿ ಭಾರತೀಯ ವಾಯುಸೇನೆ ಅಧಿಕಾರಿಗಳು ಹೆಲಿಕಾಪ್ಟರ್‌ ಲ್ಯಾಂಡಿಂಗ್‌, ಟೇಕಾಫ್ ಮಾಡಿ ಪರೀಕ್ಷಿಸುವ ಮೂಲಕ ಶುಕ್ರವಾರ ಸುರಕ್ಷತೆ ಕುರಿತು ಪರಿಶೀಲನೆ ಮಾಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ್ ನೀಡಿದ ಸಲಹೆಯಂತೆ ವಾಯುಪಡೆ ಅಧಿಕಾರಿಗಳು ಹಲವು ಸಲ ಮೈದಾನದಲ್ಲಿ ಲ್ಯಾಂಡಿಂಗ್‌ ನಂತರ ಟೇಕಾಪ್‌ ಮಾಡಿ ಪರೀಕ್ಷಿಸುವ ಮೂಲಕ ಸುರಕ್ಷತೆ ಖಚಿತ ಪಡಿಸಿಕೊಂಡರು. ಉಪರಾಷ್ಟ್ರಪತಿಯವರು ಭಾರತೀಯ ಸೇವೆ ವಿಶೇಷ ಹೆಲಿಕಾಪ್ಟರ್‌ ಮೂಲಕ ಮೇಲುಕೋಟೆಗೆ ಆಗಮಿಸಿ ಇದೇ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ಉಪರಾಷ್ಟ್ರಪತಿಗಳೊಂದಿಗೆ ಬರುವ ಬೆಂಗಾವಲು ಪಡೆಯ ಸೇನಾ ಹೆಲಿಕಾಪ್ಟರ್‌ಗಳಲ್ಲಿ ಉಪರಾಷ್ಟ್ರಪತಿಗಳೊಂದಿಗೆ ಒಂದಕ್ಕೆ ಲ್ಯಾಂಡಿಗ್ ಆಗಲು ಅವಕಾಶವಿದ್ದು ಮತ್ತೊಂದು ಹೆಲಿಕಾಪ್ಟರ್‌ಗೆ ಎಸ್.ಇ.ಟಿ ಪಾಲಿಟೆಕ್ನಿಕ್ ಮೈದಾನದಲ್ಲಿ ಅವಕಾಶ ಮಾಡಲಾಗಿದೆ.

ಹೆಲಿಕಾಪ್ಟರ್ ಯೋಗನರಸಿಂಹಸ್ವಾಮಿ ಬೆಟ್ಟದ ಹಿನ್ನೆಲೆಯಲ್ಲಿ ಹಾರಾಟ ಮಾಡುತ್ತಿರುವ ಮತ್ತು ಟೇಕಾಪ್ ಆಗುವುದನ್ನು ನೂರಾರು ಸಂಖ್ಯೆಯಲ್ಲಿ ಸೇರಿದ ನಾಗರಿಕರು ಮತ್ತು ವಿದ್ಯಾರ್ಥಿಗಳು ವೀಕ್ಷಿಸಿ ಆನಂದ ಅನುಭವಿಸಿದರು.

ಉಪರಾಷ್ಟ್ರಪತಿ ಭೇಟಿ ಭಾರೀ ಭದ್ರತೆ:

ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಅವರನ್ನು ಸ್ವಾಗತಿಸಲು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಹಾಜರಿದ್ದು, ನಂತರ ಚೆಲುವನಾರಾಯಣಸ್ವಾಮಿ ದೇವಾಲಯದ ದರ್ಶನಕ್ಕೆ ತೆರಳಲಿದ್ದಾರೆ. ಹೀಗಾಗಿ ಮೇಲುಕೋಟೆಯಲ್ಲಿ ಭಾರೀ ಭದ್ರತೆ ನಿಯೋಜಿಸಲಾಗುತ್ತಿದೆ.

ವೈರಮುಡಿ ಉತ್ಸವಕ್ಕೆ ನಿಯೋಜಿಸದಷ್ಟೇ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಇದರೊಟ್ಟಿಗೆ ಭಾರತೀಯ ಸೇನಾ ಪಡೆ, ಉಪರಾಷ್ಟ್ರಪತಿಗಳ ಬೆಂಗಾವಲು ಪಡೆಗಳು ರಕ್ಷಣಾ ಕಾರ್ಯ ನಿರ್ವಹಿಸಲಿದೆ. ಇದರೊಟ್ಟಿಗೆ ಬಾಂಬ್‌ ನಿಷ್ಕ್ರಿಯದಳ, ಕ್ಷಿಪ್ರ ಕಾರ್ಯಾಚರಣೆ ಪಡೆ, ರ್‍ಯಾಪಿಡ್ ಪೂರ್ಸ್ ಅಗ್ನಿಶಾಮಕದಳ ಗೃಹರಕ್ಷಕ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಈ ವೇಳೆ ಜಿಪಂ ಸಿಇಒ ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿಗೆ ವಾಯುಪಡೆಯ ಅಧಿಕಾರಿಗಳು ಹೆಲಿಕಾಪ್ಟರ್‌ ಚಲನವಲನದ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.

ಉಪವಿಭಾಗಾಧಿಕಾರಿ ಡಾ.ಶ್ರೀನಿವಾಸ್, ತಹಸೀಲ್ದಾರ್ ಬಸವರೆಡ್ಡಪ್ಪ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ಉಪ ತಹಸೀಲ್ದಾರ್ ರಾಜೇಶ್, ಗ್ರಾಮಾಧಿಕಾರಿ ರಮೇಶ್, ದೇವಾಲಯದ ಇಒ ಶೀಲಾ, ಗ್ರಾಪಂ ಅಧ್ಯಕ್ಷೆ ಭವಾನಿ ಹರಿಧರ್, ಉಪಾಧ್ಯಕ್ಷ ಜಿ.ಕೆ.ಕುಮಾರ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಚಲುವನಾರಾಯಣಸ್ವಾಮಿ ದೇಗುಲಕ್ಕೆ ಭಾನುವಾರ ಬೆಳಗ್ಗೆಯಿಂದ ಅರ್ಧದಿನದವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ಮೇಲುಕೋಟೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೇಲುಕೋಟೆಗೆ ಬರುವ ಭಕ್ತರ ವಾಹನಗಳಿಗೆ ದೇವಾಲಯದಿಂದ ಒಂದು ಕಿ.ಮೀ ದೂರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮೈದಾನದಲ್ಲಿ ಪಾರ್ಕಿಂಗ್ ಮಾಡಲಾಗುತ್ತದೆ. ದೇವಾಲಯದ ಸುತ್ತ ಅಧಿಕಾರಿಗಳು ಸೇರಿದಂತೆ ಯಾವುದೇ ವಾಹನಗಳೂ ಪಾರ್ಕ್ ಮಾಡಲು ಅವಕಾಶವಿಲ್ಲ ಎಂದಿದ್ದಾರೆ.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ