ವಿಶೇಷ ಭೂಸ್ವಾಧೀನ ಕಚೇರಿಗೆ ಬೀಗ ಜಡಿದ ಸಂತ್ರಸ್ತರು

KannadaprabhaNewsNetwork | Published : Mar 6, 2025 12:33 AM

ಸಾರಾಂಶ

ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡು 14 ವರ್ಷ ಕಚೇರಿಗೆ ಅಲೆದು ವನವಾಸದಲ್ಲಿದ್ದೇವೆ. ನಮ್‌ ಹಣ ಕೊಡ್ರಿ ಇಲ್ಲವೇ ತೊಟ್ಟು ವಿಷ ಕೊಡ್ರಿ, ಪರಿಹಾರ ಪಾವತಿಸುತ್ತೇವೆ ಎನ್ನುವ ಅಧಿಕಾರಿ ನಮಗೆ ಮುಂಡಗ ಹಣ ಕೊಟ್ಟು ಹೋಗ್ರಿ, ಇಲ್ಲದಿದ್ದರೇ ಕಚೇರಿ ಬಿಟ್ಟು ಕದಲುವುದಿಲ್ಲ.

ಭೂಮಿ ಕಳೆದುಕೊಂಡು 14 ವರ್ಷ ಕಳೆದರೂ ಪರಿಹಾರವಿಲ್ಲ । ನಮ್‌ ಹಣ ಕೊಡ್ರಿ ಇಲ್ಲವೇ ತೊಟ್ಟು ವಿಷ ಕೊಡ್ರಿ: ಅಳಲು

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡು 14 ವರ್ಷ ಕಚೇರಿಗೆ ಅಲೆದು ವನವಾಸದಲ್ಲಿದ್ದೇವೆ. ನಮ್‌ ಹಣ ಕೊಡ್ರಿ ಇಲ್ಲವೇ ತೊಟ್ಟು ವಿಷ ಕೊಡ್ರಿ, ಪರಿಹಾರ ಪಾವತಿಸುತ್ತೇವೆ ಎನ್ನುವ ಅಧಿಕಾರಿ ನಮಗೆ ಮುಂಡಗ ಹಣ ಕೊಟ್ಟು ಹೋಗ್ರಿ, ಇಲ್ಲದಿದ್ದರೇ ಕಚೇರಿ ಬಿಟ್ಟು ಕದಲುವುದಿಲ್ಲ.

ಹೌದು, ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮಸ್ಥರು ಬೀಗ ಜಡಿದು ಪ್ರತಿಭಟನೆ ವೇಳೆ ಅಧಿಕಾರಿಗಳ ಮುಂದೆ ತಮ್ಮ ಸಂಕಟ ಹೊರ ಹಾಕಿದರು.

ಕಳೆದ ಬಾರಿ ಇದೇ ರೀತಿ ಕಚೇರಿಗೆ ಬೀಗ ಜಡಿದು, ಪ್ರತಿಭಟನೆ ಮಾಡಿದ್ದ ಸಂದರ್ಭ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಪ್ರಭಾರ ಅಧಿಕಾರಿ ಫೆ.28 ರಂದು ಪರಿಹಾರ ನೀಡುತ್ತೇವೆಂದು, ಲಿಖಿತ ರೂಪದಲ್ಲಿ ಪ್ರತಿಭಟನಾಕಾರರಿಗೆ ಪತ್ರ ನೀಡಿದ್ದರು. ತಾವೇ ನೀಡಿದ ಪತ್ರದಂತೆ ನಡೆದುಕೊಂಡಿಲ್ಲ, ಅದಕ್ಕೆ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದೇವೆ. ನಮ್ಮ ಭೂಮಿಗೆ ತಕ್ಕ ಪರಿಹಾರ ನೀಡುವವರೆಗೂ ಜಾಗ ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.

ನಿಮ್ಮ ಪರಿಹಾರ ಹಾಳಾಗಿ ಹೊಗ್ಲಿ ನಮ್ಮ ಭೂಮಿ ಪಾಲು ವಿಭಾಗ ಮಾಡಿಕೊಳ್ಳಲು ಆಗುತ್ತಿಲ್ಲ, ಉತಾರಾ(ಪಹಣಿ)ದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿದೆ ಎಂದು ನಮೂದು ಮಾಡಿದ್ದೀರಿ, ಬೆಳೆ ಹಾಳಾಗಿ ಮೈ ತುಂಬಾ ಸಾಲ ಮಾಡಿಕೊಂಡಿರುವ ನಮಗೆ ಯಾರು ನಯಾ ಪೈಸೆ ಹಣ ಕೊಡೋರಿಲ್ಲ, ಭೂಮಿನಾದ್ರೂ ಮಾರಿ ಸಾಲ ಕಟ್ಟಬೇಕಂದ್ರ ಆಗುತ್ತಿಲ್ಲ, ಅಣ್ಣ ತಮ್ಮಂದಿರು ನಿತ್ಯ ಜಗಳ ಮಾಡುತ್ತಿದ್ದೇವೆ. ಭೂಮಿ ಹಂಚಿಕೆ ಮಾಡಿಕೊಳ್ಳಲು ನಿಮ್ಮ ಕಾನೂನು ಅಡ್ಡಿಯಾಗುತ್ತಿದೆ. ಹೀಗೆ 20 ವರ್ಷದಿಂದ ಸಂಕಷ್ಟದಲ್ಲಿ ಸಿಲುಕಿದ್ದೇವೆ, ನಮಗೆ ನಿಮ್ಮ ಹರಿಕಥೆ ಪುರಾಣ ಬೇಕಾಗಿಲ್ಲ, ನಮಗೆ ಪರಿಹಾರ ಕೊಡಿ ಎಂದು ಮುಂಡವಾಡದ ಸಂತ್ರಸ್ತ ಎಸ್‌.ಎಸ್‌.ಪಾಟೀಲ್‌ ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಭಾರ ವಿಶೇಷ ಭೂ ಸ್ವಾಧೀನಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, ಕಳೆದ 20 ವರ್ಷಗಳಿಂದ ನೀವು ಪರಿಹಾರಕ್ಕೆ ಅಲೆದಿರುವುದು ನಿಜ, ಆದರೆ, ಮುಂಡವಾಡದ ರೈತರಿಗೆ ನೀಡುವ ಪರಿಹಾರ ಕುರಿತು ಅವಾರ್ಡ್‌ ಹಂತದಲ್ಲಿದೆ. ಅಂತಿಮ ಹಂತದಲ್ಲಿರುವಾಗ ಅನಗತ್ಯ ಆತಂಕ ಪಡಬೇಡಿ, ಎರಡು ಇಲಾಖೆಯಿಂದ ಮೌಲ್ಯಮಾಪನ ಬೆಲೆ ನಿಗದಿ ವರದಿ ವಿಳಂಬದಿಂದ ಆಗಿಲ್ಲ. ಈ ತಿಂಗಳು ಮಾರ್ಚ್‌ ಅಂತ್ಯಕ್ಕೆ ರೈತರ ಖಾತೆಗೆ ಪರಿಹಾರದ ಹಣ, ಪಾವತಿ ಮಾಡುವ ಜವಾಬ್ದಾರಿ ನನ್ನದು ಎಂದು ಹೇಳಿದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ನಿಮ್ಮ ಗಿಳಿಪಾಠ ಬೇಕಿಲ್ಲ, ಹಣ ಕೊಡಿ ಹೋಗುತ್ತೇವೆ ಅಲ್ಲಿಯವರೆಗೂ ಇದೇ ಸ್ಥಳದಲ್ಲೇ ಅಡುಗೆ ಮಾಡಿ ಇಲ್ಲೇ ಇರುತ್ತೇವೆಂದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ವೇಳೆ ಅಧಿಕಾರಿಯನ್ನು ರೈತರು ತರಾಟೆಗೆ ತೆಗೆದುಕೊಂಡಾಗ ಪ್ರಭಾರ ಎಸಿ ಸ್ಥಳದಿಂದ ಹೊರ ನಡೆದರು. ಈ ವೇಳೆ ತಹಸೀಲ್ದಾರ್‌ ಜಿ.ಸಂತೋಷಕುಮಾರ, ಸಿಪಿಐ ದೀಪಕ್‌ ಬೂಸರೆಡ್ಡಿ, ಪಿಎಸ್‌ಐ ವಿಜಯ ಕೃಷ್ಣ, ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಂಡರಗಿ ಎಇಇ ರಮೇಶ ಹಾಗೂ ಸಿಬ್ಬಂದಿ ಮತ್ತು 50ಕ್ಕೂ ಹೆಚ್ಚು ಪ್ರತಿಭಟನಾಕಾರರು ಇದ್ದರು.

Share this article