ಮಂಗಳೂರು : ತುಳುಭಾಷೆಗೆ ರಾಜ್ಯದ ಅಧಿಕೃತ ಮಾನ್ಯತೆ ಸಿಕ್ಕಿರುವುದು ಸಂತಸ ತಂದಿದೆ. ಇದು ದೀರ್ಘಕಾಲದ ಹೋರಾಟಕ್ಕೆ ಸಿಕ್ಕ ಹಾಗೂ ನ್ಯಾಯಯುತ ಗೆಲುವು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸಂತಸ ವ್ಯಕ್ತಪಡಿಸಿದ್ದಾರೆ.ಸಂಪುಟ ನಿರ್ಧಾರ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಇದನ್ನು ಅನ್ಯ ಭಾಷೆಯೊಂದಿಗೆ ಹೋಲಿಕೆ ಮಾಡುವ ವಿಚಾರ ಅಲ್ಲ. ಪಂಚ ದ್ರಾವಿಡ ಭಾಷೆಗಳಲ್ಲಿ ನಾಲ್ಕು ಭಾಷೆಗಳು ನಾಲ್ಕು ರಾಜ್ಯದ ರಾಜ್ಯ ಭಾಷೆಯಾಗಿದೆ. ತುಳು ಭಾಷೆ ಮಾತ್ರ ಉಳಿದಿತ್ತು, ಇದೀಗ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವುದು ಸಂತಷದ ವಿಚಾರ ಎಂದಿದ್ದಾರೆ.
ಸುನಿಲ್ ಕುಮಾರ್ ಕಾರ್ಕಳ ಅವರು ಈ ಪ್ರಕ್ರಿಯೆ ಆರಂಭಿಸಿದ್ದರು, ಈಗಿನ ಸರ್ಕಾರದ ಮುಖ್ಯಮಂತ್ರಿಗಳು, ಸಚಿವರು, ಯು.ಟಿ.ಖಾದರ್, ಅಶೋಕ್ ರೈ, ಜಿಲ್ಲೆಯ ಶಾಸಕರು ಇದಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ. ನಾನು ಈ ಸಮಿತಿಯಲ್ಲಿದ್ದು, ಅಧ್ಯಕ್ಷನಾಗಿದ್ದು ವರದಿ ಸಲ್ಲಿಸಿದ್ದರೂ, ಇದರ ತೇರು ಎಳೆಯುವಲ್ಲಿ ದೊಡ್ಡ ದೊಡ್ಡ ದಿಗ್ಗಜರು, ತುಳು ಅಕಾಡೆಮಿ, ಹಲವು ಹಿರಿಯರು, ಹೋರಾಟಗಾರರು ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.