ಕನ್ನಡಪ್ರಭ ವಾರ್ತೆ ಕಲಬುರಗಿ
ಸುದೀರ್ಘ ಮತ ಎಣಿಕೆ ಪ್ರಕ್ರಿಯೆಯ ನಂತರ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ 4,651 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಲಬುರಗಿ ವಿವಿ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತ ಎಣಿಕೆ ಶುಕ್ರವಾರ ಬೆಳಗ್ಗೆ 11ಗಂಟೆ ವರೆಗೂ ನಿರಂತರವಾಗಿ ನಡೆಯಿತು. ಕೊನೆಯದಾಗಿ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ನಂತರ ವಿನ್ನಿಂಗ್ ಕೋಟಾ ತಲುಪದಿದ್ದರೂ ಕೊನೆ ಇಬ್ಬರು ಸ್ಪರ್ಧಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚಿನ ಮತ ಪಡೆದ ಕಾರಣ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅವರು ಡಾ. ಚಂದ್ರಶೇಖರ ಪಾಟೀಲರ ಗೆಲವು ಘೋಷಿಸಿ, ಪ್ರಮಾಣ ಪತ್ರ ವಿತರಿಸಿದರು.ಇದಕ್ಕೂ ಮುನ್ನ ನಡೆದ ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಡಾ. ಚಂದ್ರಶೇಖರ ಪಾಟೀಲ-39,496, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ-35,050, ಸ್ವತಂತ್ರ ಅಭ್ಯರ್ಥಿಗಳಾದ ಎನ್.ಪ್ರತಾಪ ರೆಡ್ಡಿ-17,421, ಅನಿಮೇಶ್ ಮಹಾರುದ್ರಪ್ಪ ಅಂದವಾಡೆ-111, ಅಬ್ದುಲ್ ಜಬ್ಬಾರ ಗೋಳಾ-201, ಕಾಶಿನಾಥ ಎಂ. ಗಿಲೇರಿ-276, ಬಸವರಾಜ ಮ್ಯಾಗಲಮನಿ-59, ಮಹೆಬೂಬ್ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ-57, ಎಂ.ಜಾವಿದ್ ಹುಸೇನ್-194, ರಿಯಾಜ್ ಅಹ್ಮದ-74, ವಿಲಾಸ ಎಂ. ಕಣಮಸ್ಕರ್-817, ಶರಣಬಸಪ್ಪ ಪಿ. ಸುಗೂರ-1,392, ಎ.ಶರಣ ಐ.ಟಿ-73, ಎ.ಎಸ್.ನಾಗನಹಳ್ಳಿ-17, ಶಿವಕುಮಾರ ಹಿರೇಮಠ-167, ಸತೀಣಕುಮಾರ ಕೋಬಾಳಕರ್-792, ಸಾಯಿನಾಥ ನಾಗೇಶ್ವರ ಮೇದಾ-72, ಡಾ.ಸುನೀಲಕುಮಾರ ಎಚ್. ವಂಟಿ-116 ಹಾಗೂ ಸುರೇಶ ದವಿದಪ್ಪ-133 ಮತ ಪಡೆದರು. ಚಲಾವಣೆಯಾದ 1,09,031 ಮತಗಳ ಪೈಕಿ 96,518 ಮತ ಪುರಸ್ಕೃತವಾದರೆ 12,513 ಮತಗಳು ತಿರಸ್ಕೃತವಾದವು.
ಎರಡನೆ ಪ್ರಾಶಸ್ತ್ಯದ ಮತ ಎಣಿಕೆ: ನಂತರ ನಡೆದ ಎರಡನೇ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಅತ್ಯಂತ ಕಡಿಮೆ ಮತ ಪಡೆದ ಸ್ವತಂತ್ರ ಅಭ್ಯರ್ಥಿಗಳಾದ ಎ.ಎಸ್.ನಾಗನಹಳ್ಳಿಯವರಿಂದ ಹಿಡಿದು ಎನ್.ಪ್ರತಾಪ ರೆಡ್ಡಿವರೆಗೆ 17 ಅಭ್ಯರ್ಥಿಗಳನ್ನು ಹಂತ-ಹಂತವಾಗಿ ಸ್ಪರ್ಧೆಯಿಂದ ಹಿಂದೆ ಸರಿಸಿ ಅವರಿಗೆ ನೀಡಲಾದ ಮತದಲ್ಲಿನ ಎರಡನೇ ಪ್ರಾಶಸ್ತ್ಯ ಮತಗಳನ್ನು ಮೇಲಿನ ಅಭ್ಯರ್ಥಿಗಳ ಲೆಕ್ಕಕ್ಕೆ ತೆಗೆದುಕೊಳ್ಳಲಾಯಿತು.
ಅಂತಿಮವಾಗಿ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ನಂತರ ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ-43,484 ಮತಗಳನ್ನು ಪಡೆದು, 4,651 ಮತಗಳಿಂದ ಗೆಲುವಿನ ನಗೆ ಬೀರಿದರು. ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ-38,833 ಮತಗಳನ್ನು ಪಡೆದರು.
ಶೇ.88.52 ಪುರಸ್ಕೃತ ಮತ: ಒಟ್ಟು ಚಲಾವಣೆಯಾದ ಮತ ಪ್ರಮಾಣ ಗಮನಿಸಿದಾಗ ಶೇ.88.52ರಷ್ಟು ಮತ ಪುರಸ್ಕೃತವಾದರೆ ಶೇ.11.48 ಮತಗಳು ತಿರಸ್ಕರಿಸಲ್ಪಟ್ಟಿವೆ.
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಸಾಮಾನ್ಯ ವೀಕ್ಷಕ ಎಂ.ಮಹೇಶ್ವರ ರಾವ್ ಅವರ ಸಮಕ್ಷಮ ಮತ ಎಣಿಕೆ ಸುಸೂತ್ರವಾಗಿ ನಡೆಯಿತು. ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಾದ ಕಲಬುರಗಿ ಡಿಸಿ ಬಿ.ಫೌಜಿಯಾ ತರನ್ನುಮ್, ಯಾದಗಿರಿ ಡಿಸಿ ಡಾ.ಸುಶೀಲಾ ಬಿ., ಬೀದರ್ ಡಿಸಿ ಗೋವಿಂದರೆಡ್ಡಿ, ರಾಯಚೂರು ಡಿಸಿ ಚಂದ್ರಶೇಖರ ನಾಯಕ್, ಕೊಪ್ಪಳ ಡಿಸಿ ನಳಿನ್ ಅತುಲ್, ಬಳ್ಳಾರಿ ಡಿಸಿ ಪ್ರಶಾಂತಕುಮಾರ ಮಿಶ್ರಾ, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮತ ಎಣಿಕೆ ಅಧಿಕಾರಿ-ಸಿಬ್ಬಂದಿ ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.