ಸಂಘಟಿತ ಪ್ರಯತ್ನದಿಂದ ಪರಿಷತ್‌ ಚುನಾವಣೆಯಲ್ಲಿ ಗೆಲುವು: ಜೋಶಿ

KannadaprabhaNewsNetwork |  
Published : Nov 07, 2026, 02:30 AM IST
ಬಿಜೆಪಿ ಅಭಿನಂದನೆ | Kannada Prabha

ಸಾರಾಂಶ

ನಾಲ್ಕು ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೂನ್ಯ ನೀಡುವ ಮೂಲಕ ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಆಡಳಿತಕ್ಕೆ ಸ್ಪಷ್ಟ ಸಂದೇಶ ನೀಡಿದೆ.

ಹುಬ್ಬಳ್ಳಿ:

ನಾಲ್ಕು ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೂನ್ಯ ನೀಡುವ ಮೂಲಕ ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಆಡಳಿತಕ್ಕೆ ಸ್ಪಷ್ಟ ಸಂದೇಶ ನೀಡಿದೆ ಎಂದು ಹೇಳಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಪಕ್ಷದ ಸಂಘಟಿತ ಪ್ರಯತ್ನದಿಂದಲೇ ಪರಿಷತ್‌ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗಿದೆ. ಜಿಪಂ. ತಾಪಂ ಚುನಾವಣೆಯನ್ನು ಇದೇ ರೀತಿ ತಯಾರಿ ನಡೆಸಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಕರೆ ನೀಡಿದ್ದಾರೆ.

ಇಲ್ಲಿಯ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಪಶ್ಚಿಮ ಪದವೀಧರರ ಮತ ಕ್ಷೇತ್ರದ ಚುನಾವಣೆಯಲ್ಲಿ ಜಯಗಳಿಸಿ ಎಸ್.ವಿ. ಸಂಕನೂರ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಹಣ, ಅಧಿಕಾರ, ಆಡಳಿತ ದುರುಪಯೋಗ ಬಳಸಿಕೊಂಡು ನಾಲ್ಕು ವಿಧಾನಪರಿಷತ್ ಚುನಾವಣೆಯಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದರು. ಆದರೂ ಬಿಜೆಪಿ ಒಗ್ಗಟ್ಟಿನ ಫಲದಿಂದಾಗಿ ಜಯಗಳಿಸಿದೆ. ಪಕ್ಷ ಸಿದ್ಧಾಂತ, ಕಾರ್ಯಕರ್ತರ ಪರಿಶ್ರಮ ಉತ್ತಮ ನೇತೃತ್ವಕ್ಕೆ ದೊರೆತ ಜಯವಾಗಿದೆ ಎಂದರು.

ಮತಗಳ್ಳತನವೆಂದು ಜನರ ದಾರಿ ತಪ್ಪಿಸುತ್ತಿದ್ದು, ಎಸ್‌ಐಆರ್ ನಡೆಸುವ ಮುನ್ನ ಕಾಂಗ್ರೆಸ್ ದೇಶದಲ್ಲಿ ಹಾಗೂ ಹಲವು ರಾಜ್ಯದಲ್ಲಿ ಸೋತಿದೆ. ಗ್ಯಾರಂಟಿ ಮೂಲಕ ಜಯಗಳಿಸಿ ಪ್ರತಿಯೊಂದು ವಸ್ತುವಿನ ದರ ಏರಿಸಿ ಲೂಟಿ ಮಾಡುತ್ತಿದೆ. ಇದು ದಿವಾಳಿ ಸರ್ಕಾರ ಎಂದು ಆರೋಪಿಸಿದರು. ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪಕ್ಷದ ಕಾರ್ಯಕರ್ತರ ತ್ಯಾಗ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಬಿಜೆಪಿ ಕಾರ್ಯಕರ್ತರಲ್ಲಿರುವ ಶಿಸ್ತು, ಪ್ರಾಮಾಣಿಕತೆ ಬೇರೆ ಯಾವ ಪಕ್ಷದಲ್ಲೂ ಇಲ್ಲ. ಜಯಗಳಿಸಿದ ಎಸ್.ವಿ. ಸಂಕನೂರ ಮನೆಯ ಬಾಗಿಲಿಗೆ ಬಂದವರ ಕೆಲಸ ಪ್ರಾಮಾಣಿಕವಾಗಿ ಮಾಡಲಿ ಎಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಪಕ್ಷದ ಕಾರ್ಯಕರ್ತರ ಹಾಗೂ ಜನಪ್ರತಿನಿಧಿಗಳ ಶ್ರಮದಿಂದ ಸಂಕನೂರ ಅವರು ಹ್ಯಾಟ್ರಿಕ್‌ ಗೆಲವು ಸಾಧಿಸಿದ್ದಾರೆ. ಜನರು ಬಿಜೆಪಿ ಮೇಲೆ ಇಟ್ಟಿರುವ ವಿಶ್ವಾಸವೇ ಗೆಲುವಿಗೆ ಕಾರಣ. ಸರ್ಕಾರ ಲೂಟಿ ಮಾಡುತ್ತಿರುವುದು ಜನರಿಗೆ ಗೊತ್ತಾಗಿದೆ. ಈ ಪರಿಷತ್‌ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿದ್ದು 2028ರಲ್ಲೂ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

ಶಾಸಕ ಮಹೇಶ ಟೆಂಗಿನಕಾಯಿ, ಪಕ್ಷದ ಘಟನಾಯಕರು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ಬ್ಯಾಲೆಟ್ ಪೇಪರ್‌ನಿಂದ ಸೋತ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಮುಂದಿನ ಚುನಾವಣೆಗಳ ಗಂಭೀರವಾಗಿ ಪರಿಗಣಿಸಬೇಕು ಎಂದರು. ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಎಸ್.ವಿ. ಸಂಕನೂರ ಅವರು ಸದನದ ಒಳಗೆ ಹಾಗೂ ಹೊರಗಡೆ ಧ್ವನಿ ಎತ್ತಿದ್ದಾರೆ. ಸರಳ ವ್ಯಕ್ತಿತ್ವದ ವ್ಯಕ್ತಿ. ಅವರ ಗೆಲವು ಕಾಂಗ್ರೆಸ್‌ನಲ್ಲಿ ಭಯ ಹುಟ್ಟಿಸಿದೆ. ತಾಪಂ, ಜಿಪಂ ಸೋಲುವ ಭಯ ಅವರಿಗೆ ಕಾಡುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ವ್ಯಕ್ತಿಗಿಂತ ಪಕ್ಷ ದೊಡ್ಡದಿದೆ. ಕಾರ್ಯಕರ್ತರು ವ್ಯಕ್ತಿ ಪರಿಗಣಿಸಲ್ಲ. ಪಕ್ಷಕ್ಕೆ ಪ್ರಮಾಣಿಕವಾಗಿ ದುಡಿದಿದ್ದಾರೆ. 2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿ, ಎಸ್.ವಿ. ಸಂಕನೂರ ಅವರು ಕಾರ್ಯಕರ್ತರಿಗೆ ಸ್ಪಂದಿಸಬೇಕು. ಮುಂದೆ ಪಕ್ಷದ ಕಾರ್ಯಕರ್ತರ ಮರೆಯಬಾರದು ಎಂದು ಹೇಳಿದರು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪಶ್ಚಿಮ ಪದವೀಧರ ಮತ ಕ್ಷೇತ್ರದ ಚುನಾವಣೆ ಗೆಲವು ಶ್ರೇಯಸ್ಸು ಪಕ್ಷದ ಕಾರ್ಯಕರ್ತರಿಗೆ ಸಲ್ಲಿಸುತ್ತೇನೆ. ನಿಮ್ಮ ಪರಿಶ್ರಮ ಋಣ ತಿರಿಸುತ್ತೇನೆ ಎಂದರು. ಮಾಜಿ ಶಾಸಕ ಅಶೋಕ ಕಾಟವೆ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಚಂದ್ರಶೇಖರ ಪಾಟೀಲ, ಸುಭಾಸ ಪಾಟೀಲ, ಬಸವರಾಜ ಕೊಂದಗೋಳಮಠ, ಮಂಜುನಾಥ ಮಲ್ಲಿಗವಾಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ