ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ನಗರದ ಶಿವಶಂಕರ ಕಾಲನಿ ನಿವಾಸಿಗಳಾದ ಶಿವಾನಂದ ಕಾನಾನ, ಗಣೇಶ ಗಿಡ್ಡನ್ನವರ, ಪ್ರದೀಪ್ ಆರೋಪಿಗಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:ಆರೋಪಿಗಳು ಜ.9ರಂದು ಆಟೋದಲ್ಲಿ ಮಹಿಳೆಯನ್ನು ಹೆಗ್ಗೇರಿ ಮೈದಾನ ಬಳಿ ಕರೆದ್ಯೊಯ್ದು ಆಕೆಗೆ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾರೆ. ಆ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ವಾಟ್ಸಾಪ್ ಗ್ರೂಪ್‌ನಲ್ಲಿ ಪ್ರದೀಪ್ ಎಂಬಾತ ಶೇರ್ ಮಾಡಿದ್ದಾನೆ. ಈ ವಿಚಾರ ಶಿವಶಂಕರ ಕಾಲನಿಯ ಮುಖಂಡರು ಹಾಗೂ ನಿವಾಸಿಗಳಿಗೆ ತಿಳಿದಿದ್ದು, ತಕ್ಷಣವೇ ಅತ್ಯಾಚಾರ ಆರೋಪಿಗಳಿಬ್ಬರನ್ನು ಕರೆಯಿಸಿ ಅವರ ತಲೆ, ಮೀಸೆ ಬೋಳಿಸಿ ಥಳಿಸಿದ್ದಾರೆ. ಆ ಬಳಿಕ ಆರೋಪಿಗಳು ಠಾಣೆಗೆ ಹೋಗಿ ತಮ್ಮ ಮೇಲೆ ಜನರು ಹಲ್ಲೆ ನಡೆಸಿದ್ದಾರೆಂದು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 40 ಜನರ ವಿರುದ್ಧ ದೂರು ನೀಡಿದ್ದಾರೆ. ಆಗ ಪೊಲೀಸರು ಪ್ರಮುಖರನ್ನು ಕರೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಮಹಿಳೆ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಅತ್ಯಾಚಾರ ಎಸಗಿರುವ ವಿಡಿಯೋ, ಫೋಟೋ ವೈರಲ್ ಆದ ಬೆನ್ನಲ್ಲೆ ಸಂತ್ರಸ್ತ ಮಹಿಳೆಯನ್ನು ಹುಡುಕಿ ಠಾಣೆಗೆ ಕರೆತರಲಾಗಿದ್ದು, ಆಕೆಯಿಂದ ದೂರು ಪಡೆದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಮೂವರನ್ನು ಬಂಧಿಸಲಾಗಿದೆ. ಆರೋಪಿ ಶಿವಾನಂದ 40 ಜನರ ವಿರುದ್ಧ ನೀಡಿದ ದೂರಿನ ಬಗ್ಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.ಊಟ ಕೊಡುವ ನೆಪದಲ್ಲಿ ಅತ್ಯಾಚಾರ:ಅತ್ಯಾಚಾರಕ್ಕೆ ಒಳಗಾದ ಮಹಿಳೆ ಹಾವೇರಿ ಮೂಲದವಳು. ಆಕೆಯ ಪತಿಯು 1 ಪ್ರಕರಣದಲ್ಲಿ ಆರೋಪಿಯಾಗಿ ಶಿವಮೊಗ್ಗ ಜೈಲು ಸೇರಿದ್ದಾನೆ. ಮನೆಬಿಟ್ಟು ಬಂದು ಮಹಿಳೆ ಹುಬ್ಬಳ್ಳಿಯ ಮಠ, ದೇವಸ್ಥಾನ, ಬಸ್ ನಿಲ್ದಾಣದಲ್ಲಿ ಮಲಗಿಕೊಂಡು ಜೀವನ ಸಾಗಿಸುತ್ತಿದ್ದಳು. ಇದನ್ನು ಗಮನಿಸಿದ ಆರೋಪಿಗಳು ಆಕೆಗೆ ಊಟ ಕೊಡುವ ನೆಪದಲ್ಲಿ ಪುಸಲಾಯಿಸಿ ಆಟೋದಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳೀಯರ ವಿಚಾರಣೆಗೆ ಆಕ್ರೋಶ:
ಆರೋಪಿಗಳು ನೀಡಿದ ದೂರಿನ ಮೇಲೆ ಹಲ್ಲೆ ಮಾಡಿದ್ದ 40 ಜನರ ಪೈಕಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳಿಯರು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಬದಲು ಬುದ್ಧಿ ಹೇಳಿದವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಠಾಣೆ ಎದುರು ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು.