ಕನ್ನಡಪ್ರಭ ವಾರ್ತೆ ಬೆಳಗಾವಿ
ಸುವರ್ಣ ವಿಧಾನಸೌಧದಲ್ಲಿ ಡಿ.9 ರಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಅಧಿವೇಶನಕ್ಕೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದ ವೇಳೆ ಈ ಬಾರಿ ಪ್ರತಿಭಟನೆಗಳು ಕಡಿಮೆ ಸಂಖ್ಯೆಯಲ್ಲಿರಲಿವೆ. ಕಳೆದ ವರ್ಷ ಕೂಡ ಕಡಿಮೆ ಸಂಖ್ಯೆಯಲ್ಲೇ ಪ್ರತಿಭಟನೆಗಳು ನಡೆದಿವೆ. ಈ ಹಿಂದಿನ ಅನುಭವ ಇರುವುದರಿಂದ ಅಧಿವೇಶನದ ಸಿದ್ಧತೆಗಳಿಗೆ ಜಿಲ್ಲಾಡಳಿತಕ್ಕೆ ಯಾವುದೇ ತೊಂದರೆ ಎದುರಾಗಲ್ಲ ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ನೂರು ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗುವುದು. ಇದಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ ₹2 ಕೋಟಿ ಅನುದಾನ ಕಾಯ್ದಿರಿಸಿದೆ. ಇನ್ನೂ ಹೆಚ್ಚಿನ ಅನುದಾನ ಕೂಡ ನೀಡಲಿದೆ. ಕಾಂಗ್ರೆಸ್ ಅಧಿವೇಶನದ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸುವ ನಿಟ್ಟಿನಲ್ಲಿ ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ವತಿಯಿಂದಲೂ ಪ್ರತ್ಯೇಕವಾಗಿ ಸಭೆ ನಡೆಯಲಿದೆ ಎಂದರು.ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಗುತ್ತಿದೆ. ಮೆರವಣಿಗೆ ವೀಕ್ಷಣೆಗೆ ಲಕ್ಷಾಂತರ ಜನರು ಆಗಮಿಸಿದ್ದಾರೆ. ಬೆಳಗಾವಿ ರಾಜ್ಯೋತ್ಸವಕ್ಕೆ ಮುಂದಿನ ಬಾರಿ ಸರ್ಕಾರದಿಂದ ಅನುದಾನ ನೀಡಲಾಗುವುದು. ಈ ಬಾರಿ ರಾಜ್ಯೋತ್ಸವಕ್ಕೆ ಜಿಲ್ಲಾಡಳಿತ ವತಿಯಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದವರು ಹೇಳಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್) ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಿನ ಪ್ರಕರಣ ಕುರಿತು ಬಿಮ್ಸ್ ನಿರ್ದೇಶಕರಿಂದ ನ.5ರಂದು ಜಿಪಂ ಸಭಾಭವನದಲ್ಲಿ ನಡೆಯುವ ಸಭೆಯಲ್ಲಿ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದರು.ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆ ಸ್ಥಗಿತಗೊಳ್ಳುವುದಿಲ್ಲ. ಶಕ್ತಿ ಯೋಜನೆ ಸಂಬಂಧ ಈಗಾಗಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತವಾಗುವುದಿಲ್ಲ ಎಂದು ತಿಳಿಸಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದೆ. ಪಾಲಿಕೆಯಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ನಮಗೆ ಇಲ್ಲ. ಹಾಗಾಗಿ, ನಾವು ಏನೂ ಮಾಡಲಾಗದು ಎಂದ ಅವರು, ವಕ್ಫ್ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವರೇ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮೇಲ್ಸೇತುವ ಕಾಮಗಾರಿಗೆ ಕೇಂದ್ರದ ನಾಯಕರು ಅನುಮತಿ ನೀಡಿದ್ದಾರೆ. ಆದರೆ, ಸ್ಥಳೀಯ ನಾಯಕರು ವರ ನೀಡುತ್ತಿಲ್ಲ. ದೇವರು ವರ ಕೊಟ್ಟರೂ ಪೂಜಾರಿ ವರ ನೀಡದಂತಾಗಿದೆ ಎಂದು ಸಚಿವರು ಕಾಲೆಳೆದರು.ರಾಜ್ಯಾದ್ಯಂತ ರಸ್ತೆಗಳ ದುರಸ್ತಿಗೆ ವಿಶೇಷ ಅನುದಾನ ನೀಡಲಾಗುವುದು. ಈ ಬಾರಿ ಮಳೆಗಾಲ ವಿಪರೀತವಾಗಿರುವುದರಿಂದ ರಸ್ತೆಗಳು ಹಾಳಾಗಿವೆ. ಬೆಳಗಾವಿ ರಸ್ತೆಗಳು ಹಾಳಾಗಿದ್ದು, ಈಗಾಗಲೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದವರು ಹೇಳಿದರು.
ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಮಹಾರಾಷ್ಟ್ರ ಏಕೀಕರಣ ಸಮಿತಿ ನಗರದಲ್ಲಿ ಕರಾಳ ದಿನ ಆಚರಣೆ ಮಾಡಿದೆ.ಈ ರ್‍ಯಾಲಿಯಲ್ಲಿ ಪಾಲ್ಗೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸುವ ಅಗತ್ಯ ಇಲ್ಲ. ಅದು ಹೆಸರಿಗಷ್ಟೇ ಇದೆ. ವರ್ಷದಲ್ಲೊಮ್ಮೆ ಕರಾಳ ದಿನ ನೆನಪಾಗುತ್ತದೆ. ಅದನ್ನು ನಿಷೇಧಿಸುವುದಕ್ಕಿಂತ ನಿರ್ಲಕ್ಷ್ಯ ಮಾಡುವುದು ಒಳಿತು. ಎಂಇಎಸ್ ಸಂಘಟನೆ ನಿಷೇಧಿಸಿದರೆ, ಮತ್ತೆ ಜನರು ಅದರತ್ತ ಹೆಚ್ಚಿನ ಒಲವು ತೋರುವ ಸಾಧ್ಯತೆಯಿದೆ. ಹಾಗಾಗಿ, ಅದನ್ನು ನಿಷೇಧಿಸುವುದಿಲ್ಲ ಎಂದು ಹೇಳಿದರು.ಈ ವೇಳೆ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಪಂ ಸಿಪೊ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಉಪಸ್ಥಿತರಿದ್ದರು.