ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 550 ದಿನಗಳಿಂದ ಬಿಡದಿ ರೈತರು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಧಿಮಾಕಿನ ಧೋರಣೆ ಅನುಸರಿಸುತ್ತಿದೆ. ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನದಾಸ್ ನೇತೃತ್ವದ ಪಬ್ಲಿಕ್ ಹಿಯರಿಂಗ್‌ನಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಗೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಗೆ ಯಾವುದೇ ಕಾನೂನಿನ ತಳಹದಿ ಇಲ್ಲ, ಇದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳ ಉಲ್ಲಂಘನೆ ಎಂದು ಸ್ಪಷ್ಟವಾಗಿ ಹೇಳಿದೆ. ವಿಚಾರಣೆ ವೇಳೆ ಶೇ.80ರಷ್ಟು ರೈತರು ಭೂಮಿ ಕೊಡುವುದಿಲ್ಲ ಎಂದರೂ ಸರ್ಕಾರ ಈ ಅನ್ಯಾಯದ ಭೂ ಸ್ವಾಧೀನವನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜುಲೈ 14ರಂದು ಪತ್ರಿಕಾಗೋಷ್ಠಿಯಲ್ಲಿ ಸಮಿತಿ ರಚಿಸುವುದಾಗಿ ಘೋಷಿಸಿದ್ದರು. ಆಗಸ್ಟ್ 9 ರಂದು ನ್ಯಾಯಮೂರ್ತಿ ಗುರುನಾಥ್ ನರೇಂದ್ರ ನೇತೃತ್ವದಲ್ಲಿ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ ಮಾಡಿ 30 ದಿನಗಳಲ್ಲಿ ವರದಿ ಪಡೆಯುವುದಾಗಿ ಹೇಳಿದ್ದರು. ಘೋಷಿಸಿ ಒಂದೂವರೆ ತಿಂಗಳಾದರೂ ಸರ್ಕಾರಿ ಆದೇಶವೇ ಹೊರಬಿದ್ದಿಲ್ಲ. ಪಟ್ಟಿ ಬಿಡುಗಡೆಯಾಗಿ 15 ದಿನವಾದರೂ ಕ್ರಮವಿಲ್ಲ. ಇದು ಅನಗತ್ಯ ಮತ್ತು ದುರುದ್ದೇಶದ ವಿಳಂಬ ಎಂದು ದೂರಿದರು.ಬಿಡದಿ ರೈತರ ಹೋರಾಟ ಒಂದೂವರೆ ವರ್ಷದಿಂದ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಒಂದು ಬಾರಿಯೂ ರೈತರ ಜೊತೆ ಮಾತುಕತೆ ನಡೆಸಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯದ ಹೆಸರಲ್ಲಿ ರೈತರಲ್ಲಿ ಒಡಕು ಮೂಡಿಸಿ, ಪರೋಕ್ಷವಾಗಿ ಸರ್ಕಾರದ ರಿಯಲ್ ಎಸ್ಟೇಟ್ ಹುನ್ನಾರಕ್ಕೆ ಸಹಕರಿಸುತ್ತಿವೆ. ಮೂರೂ ಪಕ್ಷಗಳು ತಮ್ಮ ಲೋಪ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿವೆಯೇ ಹೊರತು ರೈತರ ಭೂಮಿ ಉಳಿಸಲು ಅರ್ಥಪೂರ್ಣ ಹೋರಾಟ ನಡೆಸುತ್ತಿಲ್ಲ ಎಂದು ಕಿಡಿಕಾರಿದರು.
ಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಹಾಗೂ ರೈತ ಮುಖಂಡರಾದ ಶೇಷಪ್ಪ, ಹಿಟ್ಟೂರು ರಾಜು, ಹನುಮಮ್ಮ, ಕೆ. ಎಲ್.ಅಶೋಕ್, ಎಚ್.ಎಂ. ಜ್ಞಾನೇಶ್, ಇ.ಬಿ. ಜಗದೀಶ್, ಕೆ. ರಾಘವೇಂದ್ರ, ಶೇಖರಪ್ಪ, ಷಣ್ಮುಕಪ್ಪ ಮತ್ತಿತರರು ಉಪಸ್ಥಿತರಿದ್ದರು.