ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ತಾಲೂಕು ಅರಕೆರೆ ಗ್ರಾಮದ ಶ್ರೀಚುಂಚೇಗೌಡ ಉ.ಪುಟ್ಟಣ್ಣಯ್ಯನವರ ಹೆಂಗಸರ ಆಸ್ಪತ್ರೆ (ಸಾರ್ವಜನಿಕ ಆಸ್ಪತ್ರೆ)ಯನ್ನು ನರ್ತಕಿಯರ ಮೇಕಪ್ ಕೊಠಡಿಯನ್ನಾಗಿ ಬಳಕೆ ಮಾಡಿಕೊಂಡಿದ್ದಕ್ಕೆ ಶಾಸಕ ರಮೇಶ್‌ ಬಂಡಿಸಿದ್ದೇಗೌಡರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ತಾಲೂಕು ಅರಕೆರೆ ಗ್ರಾಮದ ಶ್ರೀಚುಂಚೇಗೌಡ ಉ.ಪುಟ್ಟಣ್ಣಯ್ಯನವರ ಹೆಂಗಸರ ಆಸ್ಪತ್ರೆ (ಸಾರ್ವಜನಿಕ ಆಸ್ಪತ್ರೆ)ಯನ್ನು ನರ್ತಕಿಯರ ಮೇಕಪ್ ಕೊಠಡಿಯನ್ನಾಗಿ ಬಳಕೆ ಮಾಡಿಕೊಂಡಿದ್ದಕ್ಕೆ ಶಾಸಕ ರಮೇಶ್‌ ಬಂಡಿಸಿದ್ದೇಗೌಡರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಶಾಸಕರು ತಮ್ಮ ತಾಯಿ ಮಾಜಿ ಶಾಸಕಿ ವಿಜಯಲಕ್ಷ್ಮಮ್ಮರ ಹುಟ್ಟುಹಬ್ಬವನ್ನು ಸ್ವ-ಗ್ರಾಮ ಅರಕೆರೆಯಲ್ಲಿ ಆಯೋಜಿಸಿ ಸಂಗೀತ, ನೃತ್ಯ ನಾಟಕ ಸೇರಿದಂತೆ ಹಲವು ಸಾಂಸ್ಕೃತಿ ಕಾರ್ಯಕ್ರಮ ಆಯೋಜಿಸಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ನರ್ತಕಿಯರಿಗೆ ಮೇಕಪ್, ಬಟ್ಟೆ ಬದಲಿಸಲು ಹಾಗೂ ವಿಶ್ರಾಂತಿ ಪಡೆಯಲು ಸಾರ್ವಜನಿಕ ಆಸ್ಪತ್ರೆ ಮಹಿಳಾ ವೈದ್ಯರ ಕೊಠಡಿಯನ್ನೇ ನೀಡಿದ್ದಾರೆ. ನರ್ತಕಿಯರು ಅರೆ ಬೆತ್ತಲೆ ಬಟ್ಟೆಗಳನ್ನು ತೊಟ್ಟು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಈ ವೀಡಿಯೋದಲ್ಲಿ ಸಾರ್ವಜನಿಕರಿಗಾಗಿ ಆಸ್ಪತ್ರೆ ನಿರ್ಮಿಸಿ ದಾನವಾಗಿ ನೀಡಿದ್ದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ತಾತ ಚುಂಚೇಗೌಡ, ತಂದೆ ಶ್ರೀಕಂಠಯ್ಯ ಹಾಗೂ ಮುತ್ತಾತಂದಿರ ಭಾವ ಚಿತ್ರವುಳ್ಳ ಫೋಟೋ ಸಹ ಸೆರೆಯಾಗಿದ್ದು, ಸ್ವತಂತ್ರ್ಯ ಪೂರ್ವದಲ್ಲೇ ನಿರ್ಮಿಸಿದ್ದ ಜಿಲ್ಲೆಗೆ ಮೊದಲನೇ ಆಸ್ಪತ್ರೆಯಾಗಿದೆ.

ಮೈಸೂರು ರಾಜರಿಂದ ಉದ್ಘಾಟಿಸಿ ಮೈಸೂರು ರಾಜ್ಯಕ್ಕೆ ಸಾರ್ವಜನಿಕರಿಗಾಗಿ ದಾನವಾಗಿ ನೀಡಿದ್ದ ಇತಿಹಾಸ ಹಿನ್ನೆಲೆಯುಳ್ಳ ಆಸ್ಪತ್ರೆಯಲ್ಲಿ ಇಂತಹ ಉದ್ದೇಶ ಬಳಕೆ ಮಾಡಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗೆ ವೈದ್ಯರು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಶಾಸಕರು ಈ ಅವ್ಯವಸ್ಥೆಯನ್ನು ಗಮನಿಸಿ ವೈದ್ಯರನ್ನು ಕರೆತನ್ನಿ ಎಂದು ಗ್ರಾಮದ ಯುವಕನೊಬ್ಬ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ, ಆದರೆ, ಶಾಸಕರು ವೈದರನ್ನು ಕರೆತರದೇ ನರ್ತಕಿಯರನ್ನ ಕರೆತಂದಿದ್ದಾರೆ ಎಂದು ಗ್ರಾಮಸ್ಥರು ಸೇರಿದಂತೆ ಸಾರ್ವಜನಿಕರು ಕಿಡಿಕಾರಿದ್ದಾರೆ.