ಪ್ರತಿ ವರ್ಷದಂತೆ ಈ ದೇವಾಲಯದಲ್ಲಿ ಸುಮಾರು 5 ರಿಂದ 7 ಲಕ್ಷದವರೆಗೆ ಎಲ್ಲಾ ಬಗೆಯ ನೋಟುಗಳ ಸಂಗ್ರಹಿಸಿ ದೇವಿಗೆ ನೋಟಿನ ಅಲಂಕಾರ ಮಾಡುವ ಮೂಲಕ ಈ ದೇವಾಲಯ ಪ್ರಸಿದ್ದಿಗೊಂಡಿದೆ. ಬಂದ ಭಕ್ತರಿಗೆ ಪೂಜಾ ಕಾರ್ಯ ನೆರವೇರಿಸಿ ಮಹಾ ಮಂಗಳಾರತಿ ಜೊತೆ ತೀರ್ಥ ಪ್ರಸಾದ ವಿತರಿಸಲಾಗುತ್ತಿತ್ತು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ನೋಟುಗಳಿಂದ ಧನಲಕ್ಷ್ಮಿ ಅಲಂಕಾರದಲ್ಲಿ ಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತರನ್ನು ಆಕರ್ಷಿತು.ಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ, ಶ್ರೀಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಗೆ ವಿವಿಧ ನೋಟಗಳ ಸಂಗ್ರಹಿಸಿ ಅಲಂಕರಿಸಲಾಯಿತು. ನೋಟುಗಳಿಂದ ಅಲಂಕೃತಗೊಂಡ ಚಾಮುಂಡೇಶ್ವರಿ ದೇವಿಯನ್ನು ನೋಡಿ ಕಣ್ತುಂಬಿಕೊಂಡರು.
ದೇವಾಲಯದ ಮುಖ್ಯ ಅರ್ಚಕ ಲಕ್ಮೀಶ್ ನೇತೃತ್ವದಲ್ಲಿ ಇತರ ಅರ್ಚಕ ವೃಂದ ಸೇರಿ ಗುರುವಾರ ಸಂಜೆಯಿಂದಲೆ ದೇವಾಲಯದ ಗರ್ಭಗುಡಿಯ ದೇವಿ ಸೇರಿದಂತೆ ಗೋಡೆಗಳ ಸುತ್ತಲೂ ಅಲಂಕಾರ ಮಾಡಲಾಗಿತ್ತು.ಗರ್ಭಗುಡಿಯ ಸುತ್ತಲೂ 10,20, 50, 100, 200, 500 ರು. ನೋಟುಗಳನ್ನು ಅಂಟಿಸಿ, ದೇವಿ ಅಲಂಕಾರಕ್ಕೆ ನೋಟುಗಳ ಬಳಕೆ ಮಾಡಲಾಗಿತ್ತು. ಅಲಂಕಾರ ಮಾಡಿದ್ದರಿಂದ ಧನ ಲಕ್ಷ್ಮಿ ಅವತಾರದಂತೆ ದೇವಿ ಭಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಪ್ರತಿ ವರ್ಷದಂತೆ ಈ ದೇವಾಲಯದಲ್ಲಿ ಸುಮಾರು 5 ರಿಂದ 7 ಲಕ್ಷದವರೆಗೆ ಎಲ್ಲಾ ಬಗೆಯ ನೋಟುಗಳ ಸಂಗ್ರಹಿಸಿ ದೇವಿಗೆ ನೋಟಿನ ಅಲಂಕಾರ ಮಾಡುವ ಮೂಲಕ ಈ ದೇವಾಲಯ ಪ್ರಸಿದ್ದಿಗೊಂಡಿದೆ. ಬಂದ ಭಕ್ತರಿಗೆ ಪೂಜಾ ಕಾರ್ಯ ನೆರವೇರಿಸಿ ಮಹಾ ಮಂಗಳಾರತಿ ಜೊತೆ ತೀರ್ಥ ಪ್ರಸಾದ ವಿತರಿಸಲಾಗುತ್ತಿತ್ತು.ಪಟ್ಟಣ ಮಾತ್ರವಲ್ಲದೆ ತಾಲೂಕಿನ ಗ್ರಾಮಗಳಿಂದ ನೂರಾರು ಭಕ್ತರು ಶ್ರದ್ದೆ ಭಕ್ತಿಯಿಂದ ದೇವಾಲಯಕ್ಕೆ ಆಗಮಿಸಿ ಚಾಮುಂಡೇಶ್ವರಿ ದೇವಿಯ ಧನ ಲಕ್ಷ್ಮಿ ಅವತಾರದ ದರ್ಶನ ಪಡೆದು ಪುನೀತರಾಗಿದ್ದಾರೆ.ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ
ಶ್ರೀರಂಗಪಟ್ಟಣ:ಶ್ರೀವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.ಪಟ್ಟಣದ ಮುಖ್ಯ ಬೀದಿಯ ಶ್ರೀ ಲಕ್ಷ್ಮಿ ದೇವಾಲಯದಲ್ಲಿ ದೇವರ ವಿಗ್ರಹಕ್ಕೆ ಅರ್ಚಕ ಕೃಷ್ಣ ಭಟ್ ನೇತೃತ್ವದಲ್ಲಿ ವಿಶೇಷ ಅಲಂಕಾರ ಮಾಡಿ ಭಕ್ತರ ಗಮನ ಸೆಳೆಯಿತು.ಪ್ರಸಿದ್ದ ಗಂಜಾಂ ಶ್ರೀ ನಿಮಿಷಾಂಬ ದೇವಾಲಯದಲ್ಲಿ ಮುಖ್ಯ ಅರ್ಚಕ ಸೂರ್ಯನಾರಾಯಣಭಟ್ ನೇತೃತ್ವದಲ್ಲಿ ಅರ್ಚಕರ ತಂಡ ಲಕ್ಷ್ಮಿ ದೇವಿ ವ್ರತ ಪೂಜೆಗಳ ನೆರವೇರಿಸಿ ಬಂದ ಭಕ್ತರಿಗೆ ವಿಶೇಷ ಪ್ರಸಾದ ಅನ್ನ ಸಂತರ್ಪಣೆ ಕಾರ್ಯ ನೆರವೇರಿಸಿದರು.
ಕಾಳಿ ದೇವಿ: ತಾಲೂಕಿನ ಮೈಸೂರು-ಬೆಂಗಳೂರು ಹೆದ್ದಾರಿಯ ಟಿ.ಎಂ. ಹೊಸೂರು ಗೇಟ್ ಬಳಿ ಇರುವ ಮಹಾ ಕಾಳಿ ದೇವಾಲಯದಲ್ಲಿ ಶ್ರೀಗುರುದೇವ್ ನೇತೃತ್ವದಲ್ಲಿ ದೇವಿಗೆ ಅಲಂಕರಿಸಿ ವಿಶೇಷ ಪೂಜೆ ಮಾಡಿ ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈಗೆ ಎಲ್ಲಾ ದೇವಾಲಯಗಳಲ್ಲಿ ಹೆಚ್ಚಿನ ಮಹಿಳೆಯರು ತಂಡೋಪ ತಂಡವಾಗಿ ಆಗಮಿಸುತ್ತಿದ್ದುದ್ದು ಕಂಡು ಬಂತು.