ಸಂಪುಟದಿಂದ ನಾಗೇಂದ್ರ ಕೈಬಿಡದಿದ್ದರೆ ವಿಧಾನಸೌಧ ಮುತ್ತಿಗೆ

KannadaprabhaNewsNetwork |  
Published : Aug 19, 2026, 01:30 AM IST
ಪೋಟೋ: 18ಎಸ್‌ಎಂಜಿಕೆಪಿ01ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ವಾಲ್ಮೀಕಿ ನಿಗಮದ ಹಗರಣದ ಆರೋಪಿಯಾಗಿರುವ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. | Kannada Prabha

ಸಾರಾಂಶ

Vidhana Soudha will be besieged if Nagendra is not removed from the cabinet.

- ರಾಜ್ಯ ಸರ್ಕಾರಕ್ಕೆ ಸಂಸದ ರಾಘವೇಂದ್ರ ಎಚ್ಚರಿಕೆ । ಜಿಲ್ಲಾ ಬಿಜೆಪಿ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಾಲ್ಮೀಕಿ ನಿಗಮದ ಹಗರಣದ ಆರೋಪಿಯಾಗಿರುವ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಧರಣಿಯಲ್ಲಿ ಭಾಗವಹಿಸಿದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನಾಗೇಂದ್ರ ಅವರನ್ನು 24 ಗಂಟೆಯೊಳಗೆ ಸಚಿವ ಸಂಪುಟದಿಂದ ಕೈಬಿಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯ ಹಣವನ್ನು ಸರ್ಕಾರ ದುರ್ಬಳಕೆ ಮಾಡುತ್ತಿದೆ. ಬಡವರು ಹಾಗೂ ಶೋಷಿತ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ಹಣವನ್ನು ವಿವಿಧ ಸಣ್ಣಪುಟ್ಟ ಕಾಮಗಾರಿಗಳು ಮತ್ತು ಕಟ್ಟಡಗಳಿಗೆ ನೀಡುವ ಮೂಲಕ ಅದರ ಉದ್ದೇಶವನ್ನೇ ಸರ್ಕಾರ ಮರೆತಿದೆ ಎಂದು ಆರೋಪಿಸಿದರು.

ಮುಜರಾಯಿ ಇಲಾಖೆಯ ಮೂಲಕ ದೇವಸ್ಥಾನಗಳಿಗೆ ನೀಡಲಾಗುವ ಅನುದಾನದಲ್ಲಿಯೂ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಇನ್ನು ಯಾವ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದೀರಿ ಎಂಬುದನ್ನು ಸರ್ಕಾರವೇ ಜನರಿಗೆ ಹೇಳಲಿ ಎಂದು ಪ್ರಶ್ನಿಸಿದರು.

ಈ ಕಾಂಗ್ರೆಸ್‌ಗೆ ಯಾವ ಭಾಷೆಯಲ್ಲಿ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಮತದಾರರಿಗೆ ಸುಳ್ಳು ಭರವಸೆ ಹಾಗೂ ಆಮಿಷವೊಡ್ಡಿ 140 ಸೀಟ್ ಬಂದಿದೆ. ನಮ್ಮ ಸರ್ಕಾರ ಇರುವಾಗ ಮಾಡಿದ ಯೋಜನೆಗಳನ್ನು ಅಲ್ಪಸ್ವಲ್ಪ ಮುಗಿಸಿದ್ದು ಬಿಟ್ಟರೆ ಒಂದೇ ಒಂದು ಹೊಸ ಯೋಜನೆಗೆ ಗುದ್ದಲಿ ಪೂಜೆ ಮಾಡಿಲ್ಲ. ಗ್ಯಾರಂಟಿ ಹೆಸರಲ್ಲಿ ಹಿಂದುಳಿದ ವರ್ಗದ ಮತ್ತು ಪರಿಶಿಷ್ಟ ಜಾತಿ, ಪಂಗಡದ ಅನುದಾನವನ್ನು ಲೂಟಿ ಹೊಡೆದಿದ್ದೇ ಇವರ ಸಾಧನೆ ಎಂದು ಟೀಕಿಸಿದರು.

ಶಕ್ತಿ ಯೋಜನೆಯಲ್ಲೂ ಮೋಸ, ಬಸ್ ಗಳನ್ನು ಹೆಚ್ಚಿಗೆ ಮಾಡಿಲ್ಲ, ಒಂದೆಡೆ ಟಿಕೆಟ್ ದರ ಏರಿಸಿದರು. ಗ್ರಾಮಾಂತರ ಮಕ್ಕಳಿಗೆ ಶಾಲಾ, ಕಾಲೇಜುಗಳಿಗೆ ಹೋಗಲು ಬಸ್ ಇಲ್ಲದಂತೆ ಮಾಡಿದರು. ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ₹೫ ಸಾವಿರ ಕೋಟಿ ನಾಪತ್ತೆ ಮಾಡಿದರು. ೨೦೦ ಯೂನಿಟ್ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ಎಂದು ಹೇಳಿ ವಿದ್ಯುತ್ ದರ ಏರಿಸಿ ಈಗ ೫೦ ಯೂನಿಟ್‌ಗಿಂತ ಜಾಸ್ತಿ ಬಳಸಿದರೆ ಹೆಚ್ಚುವರಿ ಶುಲ್ಕ ಹಾಕುತ್ತಿದ್ದಾರೆ. ಲೆಕ್ಕಕ್ಕೆ ಮಾತ್ರ ಚೆಕ್ಕುಲಿ ಕಾಣುತ್ತಿದ್ದು, ಒಳಗಿನ ಸುರುಳಿಯನ್ನು ತಿಂದು ಮುಗಿಸಿದ್ದಾರೆ. ಇದು ಕಾಂಗ್ರೆಸ್ ಆಡಳಿತ ವೈಖರಿ ಎಂದರು.

೧೫ನೇ ಹಣಕಾಸು ನಿಧಿ ಅನುದಾನ ಕೊಡಬೇಕಾದರೆ ಮೊದಲು ಗ್ರಾಪಂ ಚುನಾವಣೆ ನಡೆಸಿ ಎಂದು ಮೋದಿ ಸರ್ಕಾರ ತಾಕೀತು ಮಾಡಿದ ಬಳಿಕ ಈಗ ಗ್ರಾಪಂ ಚುನಾವಣೆಗೆ ಮುಂದಾಗಿದೆ. ನೀಟ್ ಪರೀಕ್ಷೆ ಮಾಡಿದ್ದರಿಂದ ಅನೇಕ ಬಡಮಕ್ಕಳಿಗೆ ವೈದ್ಯ ಸೀಟ್ ಸಿಕ್ಕಿದೆ. ಆನ್‌ಲೈನ್ ಯುಗದಲ್ಲಿ ಪ್ರಶ್ನೆಪತ್ರಿಕೆ ಬಯಲಾಗುವುದು ಸುಲಭ. ಆದರೆ, ಒಂದೇ ತಿಂಗಳಲ್ಲಿ ಮರು ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ರಾಜೀನಾಮೆ ನೀಡಿದರೂ ಅನಾವಶ್ಯಕ ಪ್ರತಿಭಟನೆ ನಡೆಸಿ ಒಂದು ತಿಂಗಳ ಸಂಸತ್ ಅಧಿವೇಶನ ಹಾಳು ಮಾಡಿದರು.

ಸಾರ್ವಜನಿಕರ ₹೮೦ ಕೋಟಿ ಹಣವನ್ನು ವ್ಯರ್ಥ ಮಾಡಿಸಿದರು. ಎಸ್‌ಐಆರ್ ಬಗ್ಗೆ ದೂಷಿಸಿದರು. ಇವಿಎಂ ಬಗ್ಗೆ ಕ್ಯಾತೆ ತೆಗೆದರು. ಕೇರಳದಲ್ಲಿ ಕಾಂಗ್ರೆಸ್ ಬಂದಾಗ ಎಸ್‌ಐಆರ್ ಮತ್ತು ಇವಿಎಂ ಬಗ್ಗೆ ಚಕಾರವೆತ್ತಲಿಲ್ಲ. ಇದು ದ್ವಂದ್ವ ನೀತಿ. ಈ ಭಂಡ, ಭ್ರಷ್ಟ ಕಾಂಗ್ರೆಸ್ ಆಡಳಿತದ ವಿರುದ್ಧ ರಾಜ್ಯದ ಹಳ್ಳಿ ಹಳ್ಳಿಗೆ ಬಿಜೆಪಿ ಕಾರ್ಯಕರ್ತರ ದಂಡು ತೆರಳಿ ಜನರಿಗೆ ಸತ್ಯಾಸತ್ಯತೆಯ ಅರಿವು ಮೂಡಿಸುತ್ತೇವೆ ಎಂದರು.

ಧರಣಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಗುರುಮೂರ್ತಿ, ಹನುಮಂತಪ್ಪ, ಮಾಲತೇಶ್, ಹರೀಶ್, ಗಿರೀಶ್, ರಾಮಾನಾಯ್ಕ್, ಮೂರ್ತಿ, ಸುರೇಖಾ ಮುರಳೀಧರ್, ಶಾಂತಾ ಸುರೇಂದ್ರ, ವೀರಭದ್ರಪ್ಪ ಪೂಜಾರ್, ಸುಮಾ ಭೂಪಾಳಂ, ಮಂಗಳಾ ನಾಗೇಂದ್ರ, ಎಸ್. ಚಂದ್ರಶೇಖರ್ ಸೇರಿದಂತೆ ಪ್ರಮುಖರಿದ್ದರು.

ಪೋಟೋ

18ಎಸ್‌ಎಂಜಿಕೆಪಿ01

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ವಾಲ್ಮೀಕಿ ನಿಗಮದ ಹಗರಣದ ಆರೋಪಿಯಾಗಿರುವ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಕವೀರರಾಗದೆ ಕೌಶಲ್ಯವಂತರಾಗಿ ಬೆಳವಣಿಗೆ ಸಾಧಿಸಿ: ಪ್ರೊ.ಕೆ.ಶಿವಚಿತ್ತಪ್ಪ
ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ