ಶಿವಮೊಗ್ಗ: ಒಳಮೀಸಲಾತಿ ವರ್ಗೀಕರಣ ವಿರೋಧಿಸಿ, ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರದಿಂದ ಆರಂಭವಾಗಿದೆ.ಶಿಕಾರಿಪುರ ತಾಲೂಕಿನ ಸದಾಶಿವಪುರ, ಬೆಂಡೆಕಟ್ಟೆ, ವಡ್ಡಿಗೆರೆ, ಆಫಿನ್‌ಕಟ್ಟೆ, ಬೇಗೂರು ಮರಡಿ, ಜಾಲಿಮರಡಿ, ಇಟ್ಟಿಗೆ ಹಳ್ಳಿ, ಕೆಂಚಿಕೊಪ್ಪ, ಮುದ್ದೇನಹಳ್ಳಿ, ಬಾಳೇಕೊಪ್ಪ, ಸಿದ್ದರಪುರ, ಶಿವಮೊಗ್ಗ ತಾಲೂಕಿನ ಹೊಸಕೊಪ್ಪ, ಹೊಸಳ್ಳಿ, ಕುಸ್ಕುರು, ಮಂಡೇನಕೊಪ್ಪ, ಸಂತೆಕಡೂರಿನ ತಾಂಡಾಗಳ ನಾಯಕ್ ಡಾವ್ ಕಾರಾಬಾರಿ ಮುಖಂಡರು ಮತ್ತು ನಿವಾಸಿಗಳು ಧರಣಿಯಲ್ಲಿ ಲಂಬಾಣಿ ಜನಾಂಗದ ಪೋಷಾಕುಗಳನ್ನು ಧರಿಸಿ ಪಾಲ್ಗೊಂಡರು. ಮಾಜಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ, ಸೈನಾ ಭಗತ್ ಮಹಾರಾಜರ ನೇತೃತ್ವ ವಹಿಸಿದ್ದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ರಚನೆಯಾಗಿದ್ದ ನ್ಯಾಯಮೂರ್ತಿ ನಾಗ ಮೋಹನ್‌ದಾಸ್ ಆಯೋಗವು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರ ಈ ವರದಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿ, ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಇದು ನಮ್ಮ ಆತಂಕಕ್ಕೆ ಕಾರಣವಾಗಿದೆ ಎಂದರು.ಸ್ಪೃಶ್ಯ-ಅಸ್ಪೃಶ್ಯ ಎಂಬ ಅಸಂವಿಧಾನಿಕ ಪದ ಬಳಕೆಯನ್ನು ಕಡತದಿಂದ ತೆಗೆದುಹಾಕಿ ದಮನಿತ ಅಥವಾ ವಿಮುಕ್ತ ಜಾತಿಗಳೆಂದು ಹೆಸರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ, ಸಿ ವರ್ಗದ ವರಿಗೂ ಶೇ.೬ರಷ್ಟು ಮೀಸಲಾತಿ ನೀಡಬೇಕು. ಅಲೆಮಾರಿಗಳನ್ನು ಯಾವ ವರ್ಗಕ್ಕೂ ಸೇರಿಸದೇ ಪ್ರತ್ಯೇಕವಾಗಿ ಶೇ.೧ರಷ್ಟು ಮೀಸಲಾತಿಯನ್ನು ಅವರಿಗೆ ಕಲ್ಪಿಸಬೇಕು. ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿವರೆಗೆ ಒಳ ಮೀಸಲಾತಿ ವರ್ಗೀಕರಣ ಆದೇಶವನ್ನು ರಾಜ್ಯ ಸರ್ಕಾರ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.ಧರಣಿಯಲ್ಲಿ ಸಮಾಜದ ಪ್ರಮುಖರಾದ ನಾನ್ಯಾನಾಯ್ಕ, ಜಗದೀಶ್ ನಾಯ್ಕ, ನಾಗರಾಜ ನಾಯ್ಕ, ರಮೇಶ್ ನಾಯ್ಕ, ನಾಗೇಶ್‌ನಾಯ್ಕ, ಗಂಗಾನಾಯ್ಕ, ಶಿವಾನಾಯ್ಕ, ಆನಂದ್ ನಾಯ್ಕ, ಬಸವರಾಜ್ ನಾಯ್ಕ, ಗಿರೀಶ್ ನಾಯ್ಕ ಮೊದಲಾದವರಿದ್ದರು.