- ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಆಕ್ಷೇಪ । ಶಂಕುಸ್ಥಾಪನೆಗಳ ಫಲಕ-ಪೋಟೋಗಳ ಪ್ರದರ್ಶಿಸಿ ಟೀಕೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಈ ಹಿಂದೆ ನಾನು ಶಾಸಕನಾಗಿದ್ದಾಗ ಕ್ಷೇತ್ರದ ಅಭಿವೃದ್ದಿಗೆ ನೂರಾರು ಕೋಟಿ ರು. ಅನುದಾನ ತಂದು ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಸಿದ್ದೆ. ಆದರೆ, ಆ ಕಾಮಗಾರಿಗಳಿಗೆ ಪ್ರಸ್ತುತ ಕಾಂಗ್ರೆಸ್ ಶಾಸಕ ಬಸವರಾಜು ವಿ. ಶಿವಗಂಗಾ ಮತ್ತೊಮ್ಮೆ ಶಂಕುಸ್ಥಾಪನೆ ಮಾಡುತ್ತಾ, ನಾನು ತಂದ ಅನುದಾನ ಎಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಆಕ್ಷೇಪಿಸಿದರು.ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಂಡೋಮಟ್ಟಿ ಗ್ರಾಮದಲ್ಲಿ ₹4 ಕೋಟಿ ವೆಚ್ಚದ ಶಾಲೆ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಸುವ ಸಂದರ್ಭ ಚನ್ನಗಿರಿ ಶಿಕ್ಷಕರ ಸಮುದಾಯ ಭವನ ನಿರ್ಮಾಣಕ್ಕೆ ಶಿಕ್ಷಣ ಸಚಿವರನ್ನು ಕರೆಸಿ ಶಂಕುಸ್ಥಾಪನೆ ಮಾಡುತ್ತೇನೆ ಎಂದಿದ್ದಾರೆ. ಈ ಭವನಕ್ಕೆ 2022-23ನೇ ಸಾಲಿನಲ್ಲಿ ಅಪೆಂಡಿಕ್ಸ್-ಇ ಯೋಜನೆಯಲ್ಲಿ ₹4 ಕೋಟಿ ಅನುದಾನ ನಾನು ಮಂಜೂರು ಮಾಡಿಸಿ, 2023ರ ಫೆ.11ರಂದು ಗುದ್ದಲಿಪೂಜೆ ನಡೆಸಿದ್ದೆ ಎಂದು ಗುದ್ದಲಿ ಪೂಜೆ ನಡೆಸಿದ್ದ ಶಂಕುಸ್ಥಾಪನೆಯ ಫಲಕ ಮತ್ತು ಪೋಟೋಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶನ ಮಾಡಿದರು.
ಈಗಿನ ಶಾಸಕರು ಗೆದ್ದ ತಕ್ಷಣ ಈ ಕಾಮಗಾರಿ ಪ್ರಾರಂಭಿಸಿದ್ದರೆ ಈಗ ಉದ್ಘಾಟನೆ ಮಾಡಬಹುದಾಗಿತ್ತು. ಇಷ್ಟು ದಿನ ಕಾಲಹರಣ ಮಾಡಿ, ಈಗ ಮತ್ತೊಮ್ಮೆ ಗುದ್ದಲಿ ಪೂಜೆ ನಡೆಸುತ್ತೇನೆ ಎನ್ನೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.ತಾಲೂಕಿನ ದೇವರಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹5 ಕೋಟಿ ಮಂಜೂರು ಮಾಡಿಸಿ, ನಾನು ಮತ್ತು ಆಗಿನ ಕೃಷಿ ಸಚಿವ ಬಿ.ಸಿ ಪಾಟೀಲ್ ಗುದ್ದಲಿಪೂಜೆ ನಡೆಸಿದ್ದೆವು. ಮತ್ತೊಮ್ಮೆ ಈ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿರೋದು ಸರಿಯಲ್ಲ. ಮಾವಿನಕಟ್ಟೆಯಲ್ಲಿ ₹2 ಕೋಟಿ, ಚಿಕ್ಕೊಡದಲ್ಲಿ ₹1 ಕೋಟಿ ವೆಚ್ಚದಲ್ಲಿ ಸಮುದಾಯ ಭವನಕ್ಕೆ ಮಂಜೂರು ಮಾಡಿಸಿ ಗುದ್ದಲಿಪೂಜೆ ನಡೆಸಿದ್ದೆ. ಈ ಕಾಮಗಾರಿಗಳಿಗೆ ಮತ್ತೊಮ್ಮೆ ಗುದ್ದಲಿ ಪೂಜೆ ನಡೆಸಿರುವುದು ಖಂಡನೀಯ ಎಂದರು.
ಪಾಂಡೋಮಟ್ಟಿಯಲ್ಲಿ ಹೈಟೆಕ್ ಶಾಲೆ ನಿರ್ಮಾಣಕ್ಕೆ ₹4 ಕೋಟಿ ಹಣವನ್ನು ಮಂಜೂರು ಮಾಡಿಸಿದ್ದೆ. ವಿಧಾನಸಭೆ ಚುನಾವಣೆ ಹತ್ತಿರಕ್ಕೆ ಬಂದ ಕಾರಣ ಗುದ್ದಲಿಪೂಜೆ ಮಾಡಲು ಆಗಿರಲಿಲ್ಲ. ಚುನಾವಣೆ ನಡೆದು 3 ವರ್ಷ ಕಳೆಯುತ್ತಿದ್ದು, ಈಗಲಾದರೂ ಈ ಕಾಮಗಾರಿಗೆ ಕಳೆದೆರಡು ದಿನಗಳ ಹಿಂದೆ ಭೂಮಿ ಪೂಜೆ ನಡೆಸಿರುವುದು ಸ್ವಾಗತಾರ್ಹ ಎಂದರು.ಈಗಿನ ಶಾಸಕರು ಯುವಕರಾಗಿದ್ದಾರೆ. ಸರ್ಕಾರದಿಂದ ಅನುದಾನ ತಂದು ಗುದ್ದಲಿಪೂಜೆ ನಡೆಸಲಿ. ಆದರೆ, ನನ್ನ ಅವಧಿಯಲ್ಲಾದ ಕಾಮಗಾರಿಗಳಿಗೆ ಮತ್ತೊಮ್ಮೆ ಗುದ್ದಲಿ ಪೂಜೆ, ಸ್ವಂತ ಸಾಧನೆ ಎಂದು ಬಿಂಬಿಸೋದು ಸಲ್ಲದು. ಶಾಸಕ ಬಸವರಾಜ್ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗಂಗಗೊಂಡನಹಳ್ಳಿ- ಮಸಣಿಕೆರೆ ಏತನೀರಾವರಿಗೆ ₹8 ಕೋಟಿ ಮಂಜೂರು ಮಾಡಿಸಿದ್ದೆ. ಇದುವರೆಗೂ ಈ ಕಾಮಗಾರಿ ಪ್ರಾರಂಭಿಸಿಲ್ಲ, ಹೊನ್ನೆಬಾಗಿ- ಗರಗ ಕೆರೆಗೆ ಮೇದುಗೊಂಡನಹಳ್ಳಿಯಿಂದ ನೀರು ಹರಿಸಲು ಪೈಪ್ ಲೈನ್ ಮಾಡಿಸಲು ₹9 ಕೋಟಿ ಮಂಜೂರಾಗಿದ್ದು, ನನ್ನ ಅವಧಿಯಲ್ಲಿ ಕಾಮಗಾರಿ ಪ್ರಾರಂಭಿಸಿದ್ದೆ. ಈಗ ಆ ಕಾಮಗಾರಿ ತಡೆಹಿಡಿರುವುದು ಏಕೆ ಎಂದು ಮಾಡಾಳು ವಿರೂಪಾಕ್ಷಪ್ಪ ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಲಹಾಳ್ ಡಿ.ಸಿ. ಕುಮಾರಸ್ವಾಮಿ, ಮುಖಂಡರಾದ ಸಿ.ಎಂ. ಗುರುಸಿದ್ದಯ್ಯ, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ, ಮಂಗೇನಹಳ್ಳಿ ಪಿ.ಲೋಹಿತ್ ಕುಮಾರ್, ಬಿ.ಎಂ. ಕುಬೇಂದ್ರೋಜಿ ರಾವ್, ಕೆ.ಆರ್.ಗೋಪಿ, ಪಟ್ಲಿ ನಾಗರಾಜ್, ಮೊಟ್ಟೆ ಚಿಕ್ಕಣ್ಣ, ಕಮಲಾ, ನಂಜುಂಡಪ್ಪ, ಸವಿತಾ ರಾಘವೇಂದ್ರ ಶೆಟ್ಟಿ, ಹರೋನಹಳ್ಳಿ ಮಲ್ಲಿಕಾರ್ಜುನ್ ಹಾಜರಿದ್ದರು.
- - -(ಬಾಕ್ಸ್) * ಕೆಎಸ್‌ಆರ್‌ಟಿಸಿ ಡಿಪೋ ಉದ್ಘಾಟಿಸದೇ ರಾಜಕಾರಣ ಚನ್ನಗಿರಿಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣಕ್ಕೆ ₹8 ಕೋಟಿ ಅನುದಾನ ತಂದು ಡಿಪೋ ನಿರ್ಮಾಣವಾಗಿ, 40 ಬಸ್‌ಗಳು ಸಹಾ ಮಂಜೂರು ಆಗಿವೆ. ಕಾಮಗಾರಿ ಮುಗಿದು ಒಂದೂವರೆ ವರ್ಷ ಕಳೆದರೂ ಉದ್ಘಾಟಿಸದೇ ರಾಜಕಾರಣ ಮಾಡುತ್ತಿರುವುದು ಕ್ಷೇತ್ರದ ಜನತೆಗೆ ಬಗೆದ ದ್ರೋಹ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಕಿಡಿಕಾರಿದರು. ನಲ್ಲೂರು ಗ್ರಾಮದಲ್ಲಿ ₹5 ಕೋಟಿ ವೆಚ್ಚದ ಸಮುದಾಯ ಭವನ ನಿರ್ಮಾಣವಾಗಿ ಉದ್ಘಾಟನೆಗೊಂಡರೂ ಸಾರ್ವಜನಿಕ ಬಳಕೆಗೆ ನೀಡಿಲ್ಲ. ಪಟ್ಟಣದ ಸೌಂದರ್ಯ ಹೆಚ್ಚಿಸಲು ಪಟ್ಟಣದ ಮುಂಭಾಗದ ಕೆರೆ ಅಭಿವೃದ್ಧಿಪಡಿಸಿದ್ದೆ. ಈಗ ವಾಕಿಂಗ್ ಪಾತ್‌ನ ಮೇಲೆ ಗಿಡಗಳು ಬೆಳೆದು ಅಲಂಕಾರಿಕಾ ವಿದ್ಯುತ್ ದೀಪಗಳು ಕೆಟ್ಟುಹೋಗಿದ್ದರೂ ದುರಸ್ತಿಗೆ ಮುಂದಾಗಿಲ್ಲ. ಒಳಾಂಗಣ ಕ್ರೀಡಾಂಗಣ ಪ್ರಾರಂಭಗೊಂಡಿಲ್ಲ. ಎಲ್ಲ ಕಚೇರಿಗಳು ಒಂದೇ ಕಡೆ ಇರುವಂತೆ ಕಚೇರಿಯ ಸಂಕಿರ್ಣದ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದು ಶಾಸಕರ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದರು.
- - -(ಕೋಟ್) ಬಸವರಾಜ ಶಿವಗಂಗಾ ಶಾಸಕರಾಗಿ 3 ವರ್ಷ ಕಳೆಯುತ್ತಿದ್ದರೂ ಚನ್ನಗಿರಿ ಕ್ಷೇತ್ರ ಯಾವುದೇ ಪ್ರಗತಿ ಕಂಡಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರಲಿದೆ. ನಿಮ್ಮ ಆಡಳಿತ ವೈಖರಿ ಬದಲಾಯಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕ್ಷೇತ್ರಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು.
- ಮಾಡಾಳು ವಿರೂಪಾಕ್ಷಪ್ಪ, ಮಾಜಿ ಶಾಸಕ, ಚನ್ನಗಿರಿ ಕ್ಷೇತ್ರ.- - -
-12ಕೆಸಿಎನ್‌ಜಿ1.ಜೆಪಿಜಿ:ಚನ್ನಗಿರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿದರು.