ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನಲ್ಲಿ ಸಂಗೀತದ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಭಾರತೀಯ ಪರಂಪರೆಯಲ್ಲಿ ಸಂಗೀತಕ್ಕೆ ಪ್ರಮುಖ ಪಾತ್ರವಿದೆ ಎಂದು ದೂರದರ್ಶನ ಹಾಗೂ ಆಕಾಶವಾಣಿ ಹಿರಿಯ ಶ್ರೇಣಿ ಕಲಾವಿದ ವಿದ್ವಾನ್ ಸಿ. ವಿಶ್ವನಾಥ್ ತಿಳಿಸಿದರು.ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಸ್ವರಾಲಯ ಸಂಗೀತ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಆಯೋಜಿಸಿದ್ದ ಸ್ವರಾಲಯ ಸಾಂಸ್ಕೃತಿಕ ಹಬ್ಬ- 2024 (ಭಾಗ-3) ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದುಷಿ ಡಾ. ಸುಮ ಹರಿನಾಥ್ ಅವರು ಕಲಿತ ಸಂಗೀತ ವಿದ್ಯೆಯನ್ನು ಬೇರೆಯವರಿಗೆ ತುಂಬಾ ಕೈಗೆಟಕುವ ದರದಲ್ಲಿ ಧಾರೆಯೆರೆಯುತ್ತಿರುವುದು ಸ್ವಾಗತಾರ್ಹ ಸಂಗತಿ. ಅವರು ಕಲಿಕೆಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡುತ್ತಾರೆ ಎಂದು ಹೇಳಿದರು.
ಸಂಗೀತ ಶಿಕ್ಷಕಿ ಕ್ಷಮಾ ಕಟ್ವಾರ್ ಮಾತನಾಡಿ, ಸಂಗೀತ ಜಾತಿ, ಮತ ಬೇಧ- ಭಾವವಿಲ್ಲದಿರುವ ಕಲೆ. ಸಂಗೀತ ಎಲ್ಲರನ್ನೂ ತನ್ನತ್ತ ಸೆಳೆಯುತ್ತೆ. ಸಂಗೀತದ ಅರಿವಿನ ಬೆಳವಣಿಗೆಯ ಮೇಲೆಯೂ ಆಳವಾದ ಪ್ರಭಾವ ಬೀರುವುದರಿಂದ ಶಿಕ್ಷಣ ಕ್ಷೇತ್ರದಲ್ಲೂ ವಿದ್ಯಾರ್ಥಿಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಸಂಗೀತವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದಂತಹ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಬಹುದು. ಇದು ಸಾಮಾಜಿಕ ಬೆಳವಣಿಯನ್ನು ಅಭಿವೃದ್ಧಿಪಡಿಸುತ್ತದೆ ಎಂದರು.ಸಂಗೀತ ಕೇಳುವುದರಿಂದ ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆ ದೂರವಾಗುತ್ತದೆ. ಸಂಗೀತಕ್ಕೆ ಮಾನಸಿಕ ಆರೋಗ್ಯ ವೃದ್ಧಿಪಡಿಸುವ ಗುಣ ಇದೆ. ಬಹುಶಃ ಸಂಗೀತದಷ್ಟು ಮನಸ್ಸಿಗೆ ಖುಷಿ ಕೊಡುವುದು ಬೇರೊಂದಿಲ್ಲ ಅಂತ ಹೇಳಬಹುದು ಎಂದು ಅವರು ತಿಳಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕಿ ಭಾನು ನಿಶ್ವಲ್ ದಾಸರ ಪದಗಳನ್ನು ಪ್ರಸ್ತುತಪಡಿಸಿದರೆ, ಸಂಪ್ರದಾಯದ ಹಾಡುಗಳನ್ನು ವಿದುಷಿ ಕಲ್ಪನಾ ಆನಂದ್ ಮತ್ತು ವೃಂದದವರು ನಡೆಸಿಕೊಟ್ಟರು. ಇವರಿಗೆ ವಯೋಲಿನ್ ನಲ್ಲಿ ವಿದ್ವಾನ್ ಎಂ.ಆರ್. ಶ್ರೀಕಾಂತ್, ಮೃದಂಗದಲ್ಲಿ ಎಂ.ಆರ್. ಉದಯಕುಮಾರ್ ಸಾಥ್ ನೀಡಿದರು.ಸ್ವರಾಲಯ ಅಧ್ಯಕ್ಷೆ ವಿದುಷಿ ಡಾ. ಸುಮ ಹರಿನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿ. ಅನಘ ಪ್ರಾರ್ಥಿಸಿದರು. ಎಚ್.ಎಸ್. ಶ್ರೀಕಾಂತಾಮಣಿ ಸ್ವಾಗತಿಸಿದರು.