ಅಂಜನಾದ್ರಿ ದೇಗುಲದಿಂದ ಸಿಬ್ಬಂದಿ ಹೊರಗೆ ಹಾಕಿದ ವಿದ್ಯಾದಾಸ ಬಾಬಾ

KannadaprabhaNewsNetwork |  
Published : Oct 15, 2026, 02:15 AM IST
14ುಲು2 | Kannada Prabha

ಸಾರಾಂಶ

ಗಂಗಾವತಿ ತಾಲೂಕಿನ ಅಂಜನಾದ್ರಿಯ ಅರ್ಚಕರಾಗಿದ್ದ ವಿದ್ಯಾದಾಸ ಬಾಬಾ ಅವರ ಪರ ಉಚ್ಚ ನ್ಯಾಯಾಲಯ ಆದೇಶ ನೀಡಿದೆ ಎಂಬ ಕಾರಣಕ್ಕೆ ಬಾಬಾ ಅವರು ದೇಗುಲವನ್ನು ತಮ್ಮ ಸುಪರ್ದಿಗೆ ಪಡೆದು ಸಿಬ್ಬಂದಿಯನ್ನು ಹೊರಗೆ ಹಾಕಿದ ಘಟನೆ ನಡೆದಿದೆ.

ಗಂಗಾವತಿ: ತಾಲೂಕಿನ ಅಂಜನಾದ್ರಿಯ ಅರ್ಚಕರಾಗಿದ್ದ ವಿದ್ಯಾದಾಸ ಬಾಬಾ ಅವರ ಪರ ಉಚ್ಚ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಅವರು ದೇಗುಲವನ್ನು ತಮ್ಮ ಸುಪರ್ದಿಗೆ ಪಡೆದು ಸಿಬ್ಬಂದಿಯನ್ನು ಹೊರಗೆ ಹಾಕಿದ ಘಟನೆ ಬುಧವಾರ ನಡೆದಿದೆ.

ಅಪರ ಜಿಲ್ಲಾಧಿಕಾರಿ ಅ. 13ರಂದು ಅಂಜನಾದ್ರಿಗೆ ಆಗಮಿಸಿ ನ್ಯಾಯಾಲಯ ಆದೇಶ ಪಾಲಿಸುವಂತೆ ಬಾಬಾ ಅವರಿಗೆ ಸೂಚಿಸಿದ್ದರು. ಆನಂತರ ವಿದ್ಯಾದಾಸಾ ಬಾಬಾ ಅವರು ದೇಗುಲವನ್ನು ಪ್ರವೇಶಿಸಿ, ಅಲ್ಲಿರುವ ಸಿಬ್ಬಂದಿಗೆ ಹೊರಗೆ ಹೋಗುವಂತೆ ಸೂಚನೆ ನೀಡಿದ್ದಲ್ಲದೆ, ದೇಗುಲ ಮತ್ತು ಕಚೇರಿಗೆ ಬೀಗ ಹಾಕಿದ್ದಾರೆ.

ಉಚ್ಚ ನ್ಯಾಯಾಲಯದ ತೀರ್ಪು ಬಂದ ಬಳಿಕ ಅರ್ಚಕ ವಿದ್ಯಾದಾಸ ಬಾಬಾ ಅವರು ಎರಡು ದಿನಗಳ ಹಿಂದೆ ದೇಗುಲ ಪ್ರವೇಶ ಮಾಡಿದ್ದಾರೆ. ಅರ್ಚಕರಿಗೆ ಪೂಜೆ, ವಾಸ್ತವ್ಯಕ್ಕೆ ಕೊಠಡಿ, ವೇದ ಪಾಠಶಾಲೆ ಪ್ರಾರಂಭಿಸಲು ಅವಕಾಶ ಸಿಕ್ಕಿದೆ.

ಈ ಮಧ್ಯೆ ಸರ್ಕಾರಿ ಕೆಲಸಕ್ಕೆ ವಿದ್ಯಾದಾಸ ಬಾಬಾ ಅಡ್ಡಿಪಡಿಸಿದ್ದಾರೆ ಎಂದು ತಹಸೀಲ್ದಾರ ವಿನಾಯಕ ಗೋಡಬಳೆ ಅವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅತಂತ್ರ ಸ್ಥಿತಿಯಲ್ಲಿ ಸಿಬ್ಬಂದಿ: ಆಂಜನೇಯ ಜನ್ಮ ಸ್ಥಳ ಅಂಜನಾದ್ರಿಯಲ್ಲಿ ದಿನ ನಿತ್ಯ ಕೆಲಸ ಮಾಡುತ್ತಿದ್ದ 20ಕ್ಕೂ ಹೆಚ್ಚು ಸಿಬ್ಬಂದಿಗೆ ಈಗ ಅತಂತ್ರ ಸ್ಥಿತಿ ಒದಗಿದೆ. ಅವರು ಅಂಜನಾದ್ರಿ ಬೆಟ್ಟದ ಕೆಳಗೆ ಕುಳಿತುಕೊಂಡಿದ್ದಾರೆ.

ಭಕ್ತರಲ್ಲಿಗೆ ಗೊಂದಲ: ಜಿಲ್ಲಾಡಳಿತ ಮತ್ತು ಅರ್ಚಕರ ಮಧ್ಯೆ ನಡೆದ ವಿವಾದದಿಂದ ದಿನ ನಿತ್ಯ ಬರುವ ಸಾವಿರಾರು ಭಕ್ತರಿಗೆ ಗೊಂದಲ ಉಂಟಾಗಿದೆ. ಪ್ರತಿನಿತ್ಯ ಒಂದು ಸಾವಿರಕ್ಕೂ ಅಧಿಕ ಭಕ್ತರು ದೇಗುಲಕ್ಕೆ ಬರುತ್ತಾರೆ, ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ 20 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ.

ಅನ್ನ ಸಂತರ್ಪಣೆ ಸ್ಥಗಿತ: ದಿನ ನಿತ್ಯ ಅಂಜನಾದ್ರಿಗೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯುತ್ತಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಮುಜರಾಯಿ ಇಲಾಖೆಯಿಂದ ಕೈಗೊಳ್ಳುತ್ತಿದ್ದರು. ಈಗ ವಿವಾದದಿಂದಾಗಿ ಅನ್ನ ಸಂತರ್ಪಣೆ ಸ್ಥಗಿತಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತುಲ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ
ಕಷ್ಟ ಮೆಟ್ಟಿ ನಿಂತ ಬೆಳೆಗಾರನೇ ನಿಜವಾದ ರೈತ: ವಿಶ್ವವಲ್ಲಭತೀರ್ಥ ಶ್ರೀಪಾದ ಶ್ರೀ