ಉಡುಪಿ: ಹಿಂದೂ ಧರ್ಮದಲ್ಲಿ ಪ್ರಕೃತಿ ಅರಾಧನೆಗೆ ಹೆಚ್ಚು ಮಹತ್ವವಿದೆ, ಪ್ರಕೃತಿಯ ಮಡಿಲಲ್ಲಿರುವ ಕ್ಷೇತ್ರದಲ್ಲಿ ದೈವಿಶಕ್ತಿ ಹೆಚ್ಚಿರುತ್ತದೆ, ಇಂದ್ರಾಳಿಯ ಈ ಕ್ಷೇತ್ರ ಭಕ್ತ ಮತ್ತು ಭಗವಂತನಿಗೆ ಕೊಂಡಿಯಾಗಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಅವರು ಇಂದ್ರಾಳಿಯ ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಮುಖ್ಯಪ್ರಾಣ - ನಾಗದೇವರು ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವದಂಗವಾಗಿ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮುಖ್ಯ ಅತಿಥಿಗಳಾಗಿದ್ದರು. ಕೊಲಕಾಡಿ ವಾದಿರಾಜ ಆಚಾರ್ಯರು ವಿಶೇಷ ಉಪನ್ಯಾಸ ನೀಡಿದರು.
ಅಚ್ಚುಕಟ್ಟಾದ ವ್ಯವಸ್ಥೆ: ಕ್ಷೇತ್ರಕ್ಕೆ ಹರಿದುಬಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸ್ವಯಂಸೇವಕರು ವಿಶೇಷ ಮುತುವರ್ಜಿ ವಹಿಸಿದ್ದರು. ವಾಹನ ಪಾರ್ಕಿಂಗ್, ಸರತಿ ಸಾಲು, ದೇವರ ದರ್ಶನ, ತೀರ್ಥ ಪ್ರಸಾದ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ನೂರಾರು ಭಜನಾ ತಂಡಗಳ ಸಂಕೀರ್ತನೆಯು ಈ ಪ್ರದೇಶದಲ್ಲಿ ಅನನ್ಯ ಭಕ್ತಿಯ ವಾತಾವರಣವನ್ನು ಸೃಷ್ಟಿಸಿತ್ತು.