ಕುಖ್ಯಾತ ಬೈಕ್‌ ಕಳ್ಳರ ಬಂಧನ: 46 ಬೈಕ್‌ ವಶ

KannadaprabhaNewsNetwork |  
Published : Aug 21, 2024, 12:41 AM IST
COP | Kannada Prabha

ಸಾರಾಂಶ

ರಾಜಧಾನಿಯಲ್ಲಿ ಬೈಕ್‌ ಕಳ್ಳತನಕ್ಕಿಳಿದಿದ್ದ ಇಬ್ಬರು ಯುವಕರು ಸೇರಿದಂತೆ ಮೂವರು ಕಿಡಿಗೇಡಿಗಳನ್ನು ಪ್ರತ್ಯೇಕವಾಗಿ ವಿದ್ಯಾರಣ್ಯಪುರ ಹಾಗೂ ಪೀಣ್ಯ ಪೊಲೀಸರು ಸೆರೆ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಬೈಕ್‌ ಕಳ್ಳತನಕ್ಕಿಳಿದಿದ್ದ ಇಬ್ಬರು ಯುವಕರು ಸೇರಿದಂತೆ ಮೂವರು ಕಿಡಿಗೇಡಿಗಳನ್ನು ಪ್ರತ್ಯೇಕವಾಗಿ ವಿದ್ಯಾರಣ್ಯಪುರ ಹಾಗೂ ಪೀಣ್ಯ ಪೊಲೀಸರು ಸೆರೆ ಹಿಡಿದಿದ್ದಾರೆ.

ಹುಣಸಮಾರನಹಳ್ಳಿ ನಿವಾಸಿಗಳಾದ ರಾಘವೇಂದ್ರ, ಸಾಯಿತೇಜ ಹಾಗೂ ಮಾದಾವರದ ವೆಂಕಟೇಶ್ ಬಂಧಿತರಾಗಿದ್ದು, ಆರೋಪಿಗಳಿಂದ 31 ಲಕ್ಷ ರು ಮೌಲ್ಯದ 46 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಹಲವು ದಿನಗಳಿಂದ ನಗರದಲ್ಲಿ ಈ ಮೂವರು ಪ್ರತ್ಯೇಕವಾಗಿ ಬೈಕ್ ಕಳ್ಳತನದಲ್ಲಿ ತೊಡಗಿದ್ದರು. ಈ ಬಗ್ಗೆ ತನಿಖೆಗಿಳಿದ ವಿದ್ಯಾರಣ್ಯಪುರ ಹಾಗೂ ಪೀಣ್ಯ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಕಳ್ಳರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಮಂಡ್ಯದಿಂದ ಬಂದು ಕಳವು:

ಮಂಡ್ಯದ ವೆಂಕಟೇಶ ತನ್ನ ಕುಟುಂಬದ ಜತೆ ತುಮಕೂರು ರಸ್ತೆಯ ಮಾದಾವರದಲ್ಲಿ ನೆಲೆಸಿದ್ದ. ಬೆವರು ಹರಿಸದೆ ನಿರಾಯಸವಾಗಿ ಹಣ ಗಿಳಿಸಲು ಆತ ಬೈಕ್ ಕಳ್ಳತಕ್ಕಿಳಿದಿದ್ದ. ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುತ್ತಿದ್ದ ಬೈಕ್‌ಗಳೇ ಈತ ಟಾರ್ಗೆಟ್ ಆಗುತ್ತಿದ್ದವು. ಅಂತೆಯೇ ಕೆಲ ದಿನಗಳ ಹಿಂದೆ ನಾಗಸಂದ್ರ ಮೆಟ್ರೋ ನಿಲ್ದಾಣದ ಹತ್ತಿರ ಖಾಸಗಿ ಕಂಪನಿ ಉದ್ಯೋಗಿ ಬೈಕ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹೀಗೆ ಕಳವು ಮಾಡಿದ ಬೈಕ್‌ಗಳನ್ನು ಚಿತ್ರದುರ್ಗ ಪರಶುರಾಮಪುರ ಗ್ರಾಮಸ್ಥರು ಹಾಗೂ7 ಬೈಕ್‌ಗಳನ್ನು ತನ್ನ ಸ್ನೇಹಿತರಿಗೆ ಮಾರಾಟ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.

ಆರೋಪಿಯಿಂದ ಪೀಣ್ಯ, ಬ್ಯಾಡರಹಳ್ಳಿ, ಚಂದ್ರಲೇಔಟ್, ನಂದಿನಿ ಲೇಔಟ್‌, ಕೋಣನಕುಂಟೆ, ಪುಟ್ಟೇಹನಳ್ಳಿ, ಹುಳಿಮಾವು, ಮಾದನಾಯನಕಹಳ್ಳಿ, ಕುಮಾರಸ್ವಾಮಿ ಲೇಔಟ್‌, ವೈಟ್‌ಫೀಲ್ಡ್‌, ಹೊಸಕೋಟೆ, ನೆಲಮಂಗಲ ಸೇರಿದಂತೆ ವಿವಿಧ ಠಾಣೆಗಳಲ್ಲಿ ನಡೆದಿದ್ದ 5 ಲಕ್ಷ ರು. ಮೌಲ್ಯದ 20 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡಿ ಎಂಜಿನ್ ಹಾಗೂ ಚಾರ್ಸಿ ನಂಬರ್‌ಗಳನ್ನು ಟ್ಯಾಂಪರಿಂಗ್ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರುತ್ತಿದ್ದರು. ಆರೋಪಿಗಳಿಂದ 25 ಬೈಕ್‌ಗಳು, 6 ಮೊಬೈಲ್‌ಗಳು, 2 ಲ್ಯಾಪ್‌ಟಾಪ್‌ಗಳು ಹಾಗೂ ಒಂದು ಕಲರ್ ಪ್ರಿಂಟರ್ ಸೇರಿ 26 ಲಕ್ಷ ಮೌಲ್ಯದ ವಸ್ತುಗಳು ಜಪ್ತಿಯಾಗಿವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಕಡಪ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಸುಸ್ಥಿತಿಯಲ್ಲಿರುವ ಬೈಕ್‌ಗಳನ್ನು ಕಳವು ಮಾಡುತ್ತಿದ್ದರು. ಕದ್ದ ವಾಹನಗಳನ್ನು ತಾವು ವಾಸವಿದ್ದ ಹುಣಸಮಾರನಹಳ್ಳಿಯ ಮನೆಗೆ ತಂದು, ಅವುಗಳ ಅಸಲಿ ಇಂಜಿನ್ ಹಾಗೂ ಚಾರ್ಸಿ ನಂಬರ್‌ಗಳನ್ನು ಟ್ಯಾಂಪರ್ ಮಾಡಿ, ಲ್ಯಾಪ್‌ಟಾಪ್ ಹಾಗೂ ಕಲರ್ ಪ್ರಿಂಟರ್ ಸಹಾಯದಿಂದ ನಕಲಿ ಆರ್‌ಸಿ ಕಾರ್ಡ್, ಇನ್ಸೂರೆನ್ಸ್ ಸೃಷ್ಟಿಸುತ್ತಿದ್ದರು. ಪ್ರತಿ ಬೈಕ್ ಮಾರಾಟಕ್ಕೆ ಹೊಸ ಮೊಬೈಲ್ ಅನ್ನು ಆರೋಪಿಗಳು ಖರೀದಿಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಬೈಕ್‌ ಕಳ್ಳತನಕ್ಕಿಳಿದ ಸ್ನೇಹಿತರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ರಾಘವೇಂದ್ರ ಹಾಗೂ ಸಾಯಿತೇತ ಬಾಲ್ಯ ಸ್ನೇಹಿತರಾಗಿದ್ದು, ಈ ಗೆಳೆಯರು ಬೈಕ್ ಕಳ್ಳತನಕ್ಕೂ ಕುಖ್ಯಾತಿ ಪಡೆದಿದ್ದಾರೆ. ಎಂಜಿನಿಯರಿಂಗ್ ಓದಿಗೆ ರಾಘು ಹಾಗೂ ಫಾರ್ಮಿಸಿ ಓದಿಗೆ ಸಾಯಿ ಅರ್ಧಕ್ಕೆ ಟಾಟಾ ಹೇಳಿದ್ದರು. ಮೊದಲು ಗಂಗಾವತಿಯಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ವ್ಯವಹಾರವನ್ನು ರಾಘವೇಂದ್ರ ಆರಂಭಿಸಿದ್ದ. ಆಗ ಬೈಕ್ ವಿಲೇವಾರಿ ಬಗ್ಗೆ ತಿಳಿದುಕೊಂಡಿದ್ದ ಆತ, ಕಳವು ಮಾಡಿದ ಬೈಕ್‌ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರುತ್ತಿದ್ದ. ಜನರಿಂದ ಬೈಕ್ ಖರೀದಿಸಿ ಮಾರಾಟ ಮಾಡಿದಕ್ಕಿಂತ ಕಳವು ಬೈಕ್‌ಗಳಿಂದ ಹೆಚ್ಚು ಸಂಪಾದಿಸಬಹುದು ಎಂದು ದೂರಾಲೋಚಿಸಿ ಆತ ಕಳ್ಳತಕ್ಕಿಳಿದಿದ್ದ. ಅಂತೆಯೇ ಗಂಗಾವತಿಯಿಂದ ಬಂದು ಹುಣಸಮಾರನಹಳ್ಳಿ ಬಳಿ ಗೆಳೆಯ ಸಾಯಿತೇಜ ಜತೆ ನೆಲೆಸಿದ್ದ ರಾಘವೇಂದ್ರ, ಬಳಿಕ ನಗರ ವ್ಯಾಪ್ತಿಯಲ್ಲಿ ಬೈಕ್ ಕಳವು ಕಾರ್ಯಾಚರಣೆ ಶುರು ಮಾಡಿದ್ದ. ಹೀಗೆ ಕದ್ದ ಬೈಕ್‌ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಓಎಲ್‌ಎಕ್ಸ್‌ನಲ್ಲಿ ಆತ ಮಾರುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!