ನಿವೃತ್ತ ಸೈನಿಕ ಕರ್ನಲ್ ರಾಜೇಶ್ ಹೊಳ್ಳ ಅವರಿಗೆ ‘ಶೀಂಟೂರು ಸನ್ಮಾನ’ ಪ್ರದಾನ
ಪುತ್ತೂರು: ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕರ ದಿನಾಚರಣೆ ‘ಶಿಂಟೂರು ಸ್ಮೃತಿ-೨೦೨೫’ ೧೪ರಂದು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಕರ್ನಲ್ ರಾಜೇಶ್ ಹೊಳ್ಳ ಎಂ.ಎಸ್ ಅವರಿಗೆ ‘ಶೀಂಟೂರು ಸನ್ಮಾನ’ ಪ್ರದಾನ ಮಾಡಲಾಗುವುದು ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ `ಸಹಕಾರಿ ರತ್ನ ಸವಣೂರು ಕೆ.ಸೀತಾರಾಮ ರೈ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ತನ್ನ ತಂದೆ ದಿ.ಶೀಂಟೂರು ನಾರಾಯಣ ರೈ ಅವರು ೨ನೇ ಮಹಾಯುದ್ಧದಲ್ಲಿ ಭಾರತೀಯ ಸೇನಾನಿಯಾಗಿ ಬರ್ಮಾದಲ್ಲಿ ಕರ್ತವ್ಯ ನಿರ್ವಸಿದ್ದರು. ಸೇನಾ ನಿವೃತ್ತಿಯ ಬಳಿಕ ಶಿಕ್ಷಕರಾಗಿದ್ದರು. ಕೃಷಿಕರಾಗಿದ್ದುಕೊಂಡು ಸಹಕಾರಿ ಕ್ಷೇತ್ರದಲ್ಲೂ ಹೆಸರು ಮಾಡಿದ್ದರು.ಅವರ ಪ್ರೇರಣೆಯಿಂದ ನಾನು ೨೦೦೧ರಲ್ಲಿ ವಿದ್ಯಾಗಂಗೋತ್ರಿಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದೆ. ಸಂಸ್ಥಾಪಕರ ದಿನವನ್ನು ‘ಶೀಂಟೂರು ಸ್ಮೃತಿ’ ಹೆಸರಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎ.ಆರ್ ಉದ್ಘಾಟಿಸಲಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ವಕೀಲ ಅಶ್ವಿನ್ ಎಲ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಇತ್ತೀಚೆಗೆ ನಿವೃತ್ತಿಗೊಂಡಿರುವ ಬಂಟ್ವಾಳದ ಕರ್ನಲ್ ರಾಜೇಶ್ ಹೊಳ್ಳ ಎಸ್.ಎಂ ಅವರಿಗೆ ಶೀಂಟೂರು ಸನ್ಮಾನ ಪ್ರದಾನ ಮಾಡಲಾಗುವುದು. ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಸನ್ಮಾನ ಕಾರ್ಯ ನಡೆಸಲಿದ್ದಾರೆ. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮೆನೇಜರ್ ಸೂಂತೋಡು ಹೂವಯ್ಯ ಸುಳ್ಯ ಶೀಂಟೂರು ಸಂಸ್ಮರಣಾ ಉಪನ್ಯಾಸ ನೀಡಲಿದ್ದಾರೆ. ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿ ಎನ್.ಸುಂದರ ರೈ ನಡುಮನೆ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಶಿಷ್ಯವೇತನ ವಿತರಣೆ:ಪ್ರತೀ ವರ್ಷ ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಯ ೧೦ ಮಂದಿ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ತಲಾ ರು.೫ ಸಾವಿರದಂತೆ ಶಿಷ್ಯವೇತನ ನೀಡಲಾಗುತ್ತಿದೆ. ಈ ವರ್ಷ ಧನ್ಯಶ್ರೀ ಬಿ.ಡಿ (ತೃತೀಯ ಬಿಕಾಂ), ದೀಕ್ಷಿತ್ ಜಿ (ತೃತೀಯ ಬಿಎ), ಪವನ್ ಎಚ್.ಎಸ್ (ತೃತೀಯ ಬಿಸಿಎ), ಶ್ರೀರಕ್ಷ ಪಿ. (ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ), ಪ್ರತೀಕ್ಷ ಪಿ. (ವಾಣಿಜ್ಯ ವಿಭಾಗ), ಶಝಾ ಫಾತಿಮ (೧೦ನೇ ತರಗತಿ), ಎನ್.ಆರ್.ಇಫಾ (೮ನೇ ತರಗತಿ), ವಂದನ್ ರೈ ಸಿ(೭ನೇ ತರಗತಿ), ದಿವಿತ್(೫ನೇ ತರಗತಿ) ಮತ್ತು ಯುಕೆಜಿಯ ಅಝ ಫಾತಿಮ ಅವರಿಗೆ ಶೀಂಟೂರು ಶಿಷ್ಯವೇತನ ನೀಡಿ ಪುರಸ್ಕರಿಸಲಾಗುವುದು ಎಂದು ಮಾಹಿತಿ ನೀಡಿದರು.ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾ ವಕೀಲ ಅಶ್ವಿನ್ ಎಲ್ ಶೆಟ್ಟಿ, ಸವಣೂರು ಎಸ್.ಎನ್.ಆರ್.ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ಎನ್.ಸುಂದರ ರೈ ನಡುಮನೆ, ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್.ಆಳ್ವ ಇದ್ದರು.