ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಪುರಭವನದಿಂದ ಆರಂಭವಾದ ಎಚ್ಚಿರಿಕೆ ಮೆರವಣಿಗೆಯು ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಗಾಂಧಿಚೌಕ ತಲುಪಿ ಪ್ರತಿಭಟನಾ ಸಭೆ ನಡೆಸಲಾಯಿತು.
ಕಾರ್ಪೊರೇಟ್ ಗಳು, ಶ್ರೀಮಂತರ ಪರ ಇರುವ ಕೇಂದ್ರ ಸರ್ಕಾರದಿಂದ ದುಡಿಯುವ ಜನರು ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಎಂ.ಎನ್.ಸಿಗಳಿಗೆ ಸಹಾಯ ಮಾಡಲು ಸರ್ಕಾರ 2024- 25ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದಂತೆ ಡಿಜಿಟಲ್ ಅಗ್ರಿಕಲ್ಚರ್ ಮಿಷನ್- ಡ್ಯಾಮ್ ಮೂಲಕ ಭೂಮಿ ಮತ್ತು ಬೆಳೆಗಳ ಡಿಜಿಟಲೀಕರಣ ಹೇರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರದ ಕರಾಳ ಕಾಯ್ದೆಗೆ ಪೂರಕವಾಗಿ ರಾಜ್ಯದಲ್ಲಿ ಅಂದಿನ ಬಿಜೆಪಿ ಸರ್ಕಾರ ಭೂಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಕಾಯ್ದೆ ಜಾರಿ ಮಾಡಿತು. ಇದನ್ನು ವಿರೋಧಿಸಿ ನಿರಂತರ ಹೋರಾಟ ರಾಜ್ಯದಲ್ಲೂ ನಡೆಯಿತು. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ಅವರು ಕಿಡಿಕಾರಿದರು.
ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಕಾನೂನುಬದ್ಧವಾಗಿ ಖಾತರಿಪಡಿಸಬೇಕು. 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ರಾಷ್ಟ್ರೀಯ ಕನಿಷ್ಟ ವೇತನ ತಿಂಗಳಿಗೆ 26000 ರೂ., 10 ಸಾವಿರ ಪಿಂಚಣಿಯನ್ನು ಸಂಘಟಿತ, ಅಸಂಘಟಿತ ಯೋಜನೆ ಕಾರ್ಯಕರ್ತರು, ಗುತ್ತಿಗೆ ಕಾರ್ಮಿಕರು ಮತ್ತು ಕೃಷಿ ವಲಯ ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ವಿವೇಚನೆಯಿಲ್ಲದ ಭೂ ಸ್ವಾಧೀನ ಕೈಬಿಡಬೇಕು. ಬೆಳೆಗಳು ಮತ್ತು ಜಾನುವಾರುಗಳಿಗೆ ಸಮಗ್ರ ಸಾರ್ವಜನಿಕ ವಲಯದ ವಿಮಾ ಯೋಜನೆ, ಬೆಳೆ ವಿಮೆ ಮತ್ತು ಗೇಣಿದಾರ ರೈತರಿಗೆ ಎಲ್ಲಾ ಯೋಜನೆಗಳ ಪ್ರಯೋಜನ ಒದಗಿಸಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆ ಬಲಪಡಿಸಿ, ಎಲ್ಲರಿಗೂ ಗುಣಮಟ್ಟದ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದರು.