ಸರ್ಕಾರಿ ಶಾಲೆ ಮಕ್ಕಳಿಗೆ ವಿಮಾನಯಾನದ ಮೂಲಕ ಶೈಕ್ಷಣಿಕ ಪ್ರವಾಸ

KannadaprabhaNewsNetwork | Published : Nov 27, 2024 1:01 AM

ಸಾರಾಂಶ

ಇಲ್ಲಿನ ಸಮೀಪದ ಲಿಂಗದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಕ ಶಾಲೆಯ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ವಿಮಾನ ಪ್ರಯಾಣದ ಮೂಲಕ ಶೈಕ್ಷಣಿಕ ಪ್ರವಾಸ ಆಯೋಜಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಪ್ರಥಮ । ಮಕ್ಕಳ ಕನಸಿಗೆ ಶಿಕ್ಷಕರಿಂದ ಸಾಥ್‌ಎಸ್‌. ನಾರಾಯಣ್‌ಕನ್ನಡಪ್ರಭ ವಾರ್ತೆ ಮುನಿರಾಬಾದ್

ಇಲ್ಲಿನ ಸಮೀಪದ ಲಿಂಗದಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಕ ಶಾಲೆಯ ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ವಿಮಾನ ಪ್ರಯಾಣದ ಮೂಲಕ ಶೈಕ್ಷಣಿಕ ಪ್ರವಾಸ ಆಯೋಜಿಸಲಾಗಿದೆ.

ಸಾಮಾನ್ಯವಾಗಿ ಸರ್ಕಾರಿ ಶಾಲೆಯ ಮಕ್ಕಳು ಪ್ರವಾಸ ಮಾಡುವುದು ದೂರದ ಮಾತು. ಸಾಮಾನ್ಯವಾಗಿ ಬಸ್ಸಿನಲ್ಲಿ ಶ್ಯೆಕ್ಷಣಿಕ ಪ್ರವಾಸ ಮಾಡುತ್ತಾರೆ. ಆದರೆ ಲಿಂಗದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿಮಾನ ಯಾನ ಮಾಡುತ್ತಿರುವುದು ಅಚ್ಚರಿಯೇ ಸರಿ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದೇ ಪ್ರಪ್ರಥಮ ಎನ್ನಲಾಗುತ್ತಿದೆ. ರಾಜ್ಯದ ದ್ವಿತೀಯ ಕನ್ನಡ ಶಾಲೆ ಎಂಬ ಹೆಗ್ಗಳಿಕೆಗೆ ಈ ಲಿಂಗದಳ್ಳಿ ಶಾಲೆ ಪಾತ್ರವಾಗಿದೆ.

ಶಾಲೆಯ ಮಕ್ಕಳಿಗೆ ವಿಮಾನ ಯಾನ ಮಾಡಿಸುವ ನಿಟ್ಟಿನಲ್ಲಿ ಶಾಲೆಯ ಮುಖ್ಯ ಗುರುಗಳಾದ ವಿಶ್ವೇಶ್ವರಯ್ಯ, ಶಿಕ್ಷಕರಾದ ನಾಗರಾಜ, ಹರೀಶ, ನೇತ್ರಾವತಿ, ಹನುಮಂತಪ್ಪ ಹಾಗೂ ಮಂಜುನಾಥ ಪೂಜಾರ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿಮಾನದ ಮೂಲಕ ಶೈಕ್ಷಣಿಕ ಪ್ರವಾಸ ಯಾಕೆ?:

ತಮ್ಮ ಶಾಲೆಯಿಂದ ಕಳೆದ 10 ವರ್ಷಗಳಿಂದ ಪ್ರತಿ ವರ್ಷವು ತಪ್ಪದೇ ಶಾಲಾ ಮಕ್ಕಳಿಗೆ ಬಸ್ ಹಾಗೂ ರೈಲ್ವೆ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿಸಲಾಗಿದೆ. ಆದರೆ ಈ ಬಾರಿ ಹೊರರಾಜ್ಯಕ್ಕೆ ಪ್ರವಾಸಕ್ಕೆ ಕರೆದೊಯ್ಯಬೇಕೆಂದು ಶಿಕ್ಷಕರು ತೀರ್ಮಾನಿಸಿದರು.

ಶಾಲೆಯಲ್ಲಿ ಓದುತ್ತಿರುವವರು ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಾಗಿದ್ದಾರೆ. ಈ ಬಡಮಕ್ಕಳಿಗೆ ವಿಮಾನ ಪ್ರಯಾಣದ ಮೂಲಕ ಶೈಕ್ಷಣಿಕ ಪ್ರವಾಸ ಮಾಡಿಸಬೇಕೆಂಬ ಚಿಂತನೆ ಮುಖ್ಯ ಗುರು ಹಾಗೂ ಶಿಕ್ಷಕರಲ್ಲಿ ಬಂತು. ಅವರು ತಕ್ಷಣ ತೋರಣಗಲ್ಲಿನಲ್ಲಿರುವ ಜಿಂದಾಲ್ ವಿಮಾನ ನಿಲ್ದಾಣಕ್ಕೆ ತೆರಳಿ ₹1.3 ಲಕ್ಷ ಹಣ ನೀಡಿ ಹೈದ್ರಾಬಾದಿಗೆ ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ. ಹೈದ್ರಾಬಾದ್‌ ಪ್ರವಾಸ ಒಟ್ಟು 3 ಲಕ್ಷ ವೆಚ್ಚ ತಗಲಿದ್ದು, ಈಗಾಗಲೇ ಶಿಕ್ಷಕರು, ದಾನಿಗಳು, ಗ್ರಾಪಂ ಹಾಗೂ ಕಿರ್ಲೊಸ್ಕರ್‌ ಕಾರ್ಖಾನೆಯಿಂದ ₹2.5 ಲಕ್ಷ ದೇಣಿಗೆ ಸಂಗ್ರಹವಾಗಿದೆ. ಇನ್ನುಳಿದ 50 ಸಾವಿರ ಕೂಡಾ ಅತಿ ಶೀಘ್ರವಾಗಿ ಸಂಗ್ರಹವಾಗಲಿದೆ ಎಂದು ಪ್ರವಾಸ ಉಸ್ತುವಾರಿ ವಹಿಸಿರುವ ಶಿಕ್ಷಕ ಮಂಜುನಾಥ ಪೂಜಾರ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಪ್ರವಾಸದಲ್ಲಿ 30 ಮಕ್ಕಳು 6 ಶಿಕ್ಷಕರು, 6 ಎಸ್‌ಡಿಎಂಸಿ ಸದಸ್ಯರು ಭಾಗವಹಿಸಲಿದ್ದಾರೆ.

ಡಿ. 6ರಂದು ಪ್ರಯಾಣ:

ವಿಮಾನಯಾನ ಪ್ರಯಾಣವು ಡಿ. 6ರಂದು ಪ್ರಾರಂಭವಾಗಲಿದ್ದು, ಅಂದು ಬೆಳಗ್ಗೆ 9ಗಂಟೆಗೆ ಶಾಲಾ ಆವರಣದಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಶಾಲಾ ಮಕ್ಕಳಿಗೆ ಶುಭ ಹಾರೈಸುವರು.

ಸಂಸದ ರಾಜಶೇಖರ ಹಿಟ್ನಾಳ ವಿಮಾನಯಾನ ಪ್ರಯಾಣಕ್ಕೆ ಧ್ವಜ ನಿಶಾನೆ ತೋರಿಸಲಿದ್ದಾರೆ. ವಿಮಾನವು ಜಿಂದಾಲ್ ವಿಮಾನ ನಿಲ್ದಾಣದಿಂದ ಸಂಜೆ 4ಕ್ಕೆ ಹೊರಟು 5.30ಕ್ಕೆ ಹೈದರಾಬಾದ್ ತಲುಪಲಿದೆ. ಮರುದಿನ ವಿದ್ಯಾರ್ಥಿಗಳು ಹೈದ್ರಾಬಾದಿನ ಸಮೀಪವಿರುವ ಸುವರ್ಣ ಗಿರಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಹುಸೇನ್ ಸಾಗರ್ ಲೇಕ್, ವಾಟರ್ ಫಾಲ್ಸ್, ಸಾಲಾರ್ ಜಂಗ್ ಮ್ಯೂಸಿಯಂ ವೀಕ್ಷಣೆ ಮಾಡಿ ಡಿ. 8ರಂದು ತಮ್ಮ ಊರಿಗೆ ರೈಲ್ವೆ ಮೂಲಕ ಮರಳಲಿದ್ದಾರೆ.

Share this article