ರೈಲಿನಲ್ಲಿ ಹತ್ಯೆ ಪ್ರಕರಣ: ಅಂತಾರಾಜ್ಯ ಕೊಲೆ ಆರೋಪಿ ಗುಜರಾತ್‌ನಲ್ಲಿ ಬಂಧನ

KannadaprabhaNewsNetwork |  
Published : Nov 27, 2024, 01:01 AM IST
ಮೂಲ್ಕಿ ಸಮೀಪ ರೈಲು ಪ್ರಯಾಣಿಕ ಮೌಜಾಮ್ ಹತ್ಯೆ  ಆರೋಪಿ ಗುಜರಾತ್ ಪೊಲೀಸರಿಂದ ವಶಕ್ಕೆ  | Kannada Prabha

ಸಾರಾಂಶ

ಗುಜರಾತ್‌ ರಾಜ್ಯದಲ್ಲಿ ನಡೆದ 19 ವರ್ಷದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದಾಗ ಆರೋಪಿ ಹರ್ಯಾಣದ ರೋಹ್ಟಕ್‌ ನಿವಾಸಿ ರಾಹುಲ್ ಜಾಟ್‌ನನ್ನು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ರೈಲಿನಲ್ಲಿ ಪ್ರಯಾಣಿಕ ಮೌಜಾಮ್ ಎಂಬಾತನನ್ನು ಮೂಲ್ಕಿ ಸಮೀಪ ಹತ್ಯೆಗೈದ ಪ್ರಕರಣದ ಆರೋಪಿಯನ್ನು ಗುಜರಾತ್‌ ಪೊಲೀಸರು ವಾಪಿ ರೈಲು ನಿಲ್ದಾಣದ ಸಮೀಪ ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಗುಜರಾತ್‌ ರಾಜ್ಯದಲ್ಲಿ ನಡೆದ 19 ವರ್ಷದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದಾಗ ಆರೋಪಿ ಹರ್ಯಾಣದ ರೋಹ್ಟಕ್‌ ನಿವಾಸಿ ರಾಹುಲ್ ಜಾಟ್‌ನನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ತೆರಳುತ್ತಿದ್ದ ರೈಲಿನಲ್ಲಿದ್ದ ಚಿಕ್ಕಬಳ್ಳಾಪುರದ ಕುಮಾರಪೇಟೆ ನಿವಾಸಿ ಅಮೀರ್ ಖಾನ್ ಎಂಬವರ ಪುತ್ರ ಮೌಜಾಮ್ (35) ಅಕ್ಟೋಬರ್ 25 ರಂದು ಕೊಲೆಯಾಗಿದ್ದ. ಕೊಲೆಯಾದ ಮೌಜಾಮ್ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಈತ ಬೆಂಗಳೂರಿನಿಂದ ಮುರ್ಡೇಶ್ವರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವನ ಕುತ್ತಿಗೆ ಬಿಗಿದು ಸಾಯಿಸಿ ಅವರ ಕೈಯಲ್ಲಿದ್ದ ಹಣದ ಬ್ಯಾಗ್ ಮತ್ತು ಮೊಬೈಲ್ ಸುಲಿಗೆ ಮಾಡಿ ಆರೋಪಿ ಪರಾರಿಯಾಗಿದ್ದ. ಬಂಧಿತ ಆರೋಪಿ ರಾಹುಲ್ ಜಾಟ್‌ ಪೊಲೀಸರ ವಿಚಾರಣೆ ವೇಳೆ ಮೌಜಾಮ್‌ನನ್ನು ಕೊಲೆಗೈದಿರುವುದಾಗಿ ಬಾಯ್ಬಿಟ್ಟಿದ್ದಾನೆ.ಆರೋಪಿ ಸೀರಿಯಲ್‌ ಕಿಲ್ಲರ್‌, ರೇಪಿಸ್ಟ್‌: ಹರ್ಯಾಣದ ರೋಹ್ಟಕ್‌ ನಿವಾಸಿ ರಾಹುಲ್ ಜಾಟ್ ಪ್ರಾಥಮಿಕ ತನಿಖೆಯ ಪ್ರಕಾರ ಸೀರಿಯಲ್ ಕಿಲ್ಲರ್ ಮತ್ತು ಅತ್ಯಾಚಾರಿಯಾಗಿದ್ದು ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಎನ್ನಲಾಗಿದೆ. ಗುಜರಾತ್‌ನ ವಲ್ಸಾಡ್ ಜಿಲ್ಲೆಯ ಉದ್ಘಾಡ ಎಂಬಲ್ಲಿ 19 ವರ್ಷದ ಯುವತಿಯನ್ನು ಕೊಲೆಗೈದ ಪ್ರಕರಣದಲ್ಲಿ ಈತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದರು. ಯುವತಿಯ ಶವ ಉದ್ಘಾಡ ರೈಲು ನಿಲ್ದಾಣದ ಸಮೀಪವಿರುವ ಹಳಿಯ ಮೇಲೆ ನವೆಂಬರ್ 14ರಂದು ಪತ್ತೆಯಾಗಿತ್ತು. ಆಕೆ ಟ್ಯೂಷನ್‌ನಿಂದ ಮನೆಗೆ ಹಿಂದಿರುತ್ತಿದ್ದಾಗ ಅಪಹರಿಸಿ ಅತ್ಯಾಚಾರ ಮಾಡಿ ಕೊಲೆಗೈದು ಶವವನ್ನು ಎಸೆದು ಹೋಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಲ್ಪಾಡ್‌ನ ವಾಪಿ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಪ್ರದೇಶದಿಂದ ಸ್ಥಳೀಯ ಮತ್ತು ರೈಲ್ವೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಾಹುಲ್ ಜಾಟ್‌ನನ್ನು ಬಂಧಿಸಲಾಗಿದೆ. ಜಾಟ್ ಪದೇಪದೇ ತಾನಿರುವ ಸ್ಥಳವನ್ನು ಬದಲಾಯಿಸುತ್ತಿದ್ದ. ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ರೈಲುಗಳು ಮತ್ತು ರೈಲು ನಿಲ್ದಾಣಗಳಲ್ಲಿ ಲೂಟಿ ಮತ್ತು ಕೊಲೆ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ಈತ ಹೆಚ್ಚಾಗಿ ರೈಲು ಪ್ರಯಾಣಿಕರನ್ನು ಗುರಿಮಾಡಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಸೋಲಾಪುರ ರೈಲು ನಿಲ್ದಾಣದ ಬಳಿ ರೈಲಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದ ಬಳಿ ಕತಿಹಾರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವೃದ್ಧರೊಬ್ಬರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಮೂಲ್ಕಿಯ ಸಮೀಪ ರೈಲು ಪ್ರಯಾಣಿಕನನ್ನು ಹತ್ಯೆ ಮಾಡಿದ್ದ ವಿಚಾರವನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

ನವೆಂಬರ್ 14 ರಂದು ಆರೋಪಿ ಉಡ್ವಾಡಕ್ಕೆ ತನ್ನ ಹಳೆಯ ಕೆಲಸದ ಸ್ಥಳವಾದ ಹೋಟೆಲಿನಿಂದ ಹಣ ಪಡೆಯಲು ಬಂದಿದ್ದ. ವಾಪಿಗೆ ಹೋಗಲು ಟ್ರೈನ್‌ಗಾಗಿ ಕಾಯುತ್ತಿರುವಾಗ, ರೈಲು ನಿಲ್ದಾಣದಲ್ಲಿ ಒಂಟಿಯಾಗಿ ಹೋಗುತ್ತಿದ್ದ ಹುಡುಗಿಯನ್ನು ಗಮನಿಸಿದ್ದಾನೆ. ಅವಳನ್ನು ಹಿಂಬಾಲಿಸಿ ಮಾವಿನ ತೋಟಕ್ಕೆ ಎಳೆದೊಯ್ದಿದ್ದಾನೆ. ಅಲ್ಲಿ ಅವಳ ಮೇಲೆ ಅತ್ಯಾಚಾರವೆಸಗಿ, ನಂತರ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿ ಬಳಿಕ ವಾಪಿಗೆ ಹಿಂದಿರುಗಿದ್ದಾನೆ. ಮುಂಬೈ ಪೊಲೀಸರಿಗೆ ಸಿಕ್ಕ ಮಾಹಿತಿಯ ಆಧಾರದಂತೆ ಬಂದ್ರಾ- ಭುಜ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ರಾಹುಲ್‌ ಜಾಟ್‌ ಮೇಲೆ ನಿಗಾ ಇಡಲಾಗಿತ್ತು. ವಾಪಿ ರೈಲು ನಿಲ್ದಾಣದಲ್ಲಿ ಪೊಲೀಸರು ಆತನನ್ನು ಬಂಧಿಸಿದರು.ನವೆಂಬರ್ 19 ರಂದು ಪಶ್ಚಿಮ ಬಂಗಾಳದ ಕಟಿಹಾ‌ರ್ ಎಕ್ಸ್‌ಪ್ರೆಸ್‌ನಲ್ಲಿ ವೃದ್ಧ ಸಂಗೀತ ಶಿಕ್ಷಕರನ್ನು ಕೊಂದು ಸೊತ್ತುಗಳನ್ನು ಕಳವು ಮಾಡಿದ್ದಾನೆ. ಅದಕ್ಕೂ ಮುನ್ನ ಅಕ್ಟೋಬರ್ 25 ರಂದು ಬೆಂಗಳೂರಿನಿಂದ ಮುರ್ಡೆಶ್ವರಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಒಬ್ಬ ವ್ಯಕ್ತಿಯನ್ನು ಕೊಂದು ಸೊತ್ತುಗಳನ್ನು ಕಳವು ಮಾಡಿದ್ದಾನೆ. ಅಕ್ಟೋಬರ್‌ನಲ್ಲಿ ಪುಣೆ- ಕನ್ಯಾಕುಮಾರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಿತ್ರ: 26 ಮೌಜಮ್‌.

ಆರೋಪಿಯೊಂದಿಗೆ ರೈಲು ಬೋಗಿಯನ್ನು ಪರಿಶೀಸುತ್ತಿರುವ ಪೊಲೀಸರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ