ಗ್ಲಾಸ್ ಒಡೆದು ಕೆಳಕ್ಕೆ ಹಾರಿ ಜೀವ ಉಳಿಸಿಕೊಂಡ ವಿಜಯ ಭಂಡಾರಿ

KannadaprabhaNewsNetwork |  
Published : Dec 26, 2025, 02:15 AM IST
 | Kannada Prabha

ಸಾರಾಂಶ

ಮಧ್ಯರಾತ್ರಿ ದೊಡ್ಡ ಸ್ಫೋಟವಾಗಿ ಬಸ್ಸಿಗೆ ಏನೋ ಗುದ್ದಿದಂತಾಯಿತು. ಬಸ್ ಉರುಳಿಬಿತ್ತು. ಬಸ್ಸಿನಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ನಾನು ಬಸ್ಸಿನ ಕಿಟಕಿಯ ಗ್ಲಾಸ್ ಒಡೆದು ಕೆಳಕ್ಕೆ ಹಾರಿ ಜೀವ ಉಳಿಸಿಕೊಂಡೆ

ಚಿತ್ರದುರ್ಗ ಬಸ್ ದುರಂತ

ಕನ್ನಡಪ್ರಭ ವಾರ್ತೆ ಕಾರವಾರ

ಮಧ್ಯರಾತ್ರಿ ದೊಡ್ಡ ಸ್ಫೋಟವಾಗಿ ಬಸ್ಸಿಗೆ ಏನೋ ಗುದ್ದಿದಂತಾಯಿತು. ಬಸ್ ಉರುಳಿಬಿತ್ತು. ಬಸ್ಸಿನಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ನಾನು ಬಸ್ಸಿನ ಕಿಟಕಿಯ ಗ್ಲಾಸ್ ಒಡೆದು ಕೆಳಕ್ಕೆ ಹಾರಿ ಜೀವ ಉಳಿಸಿಕೊಂಡೆ...

ಇದು ಚಿತ್ರದುರ್ಗ ಬಸ್ ದುರಂತದಲ್ಲಿ ಪಾರಾಗಿ ಬಂದ ಕುಮಟಾದ ವಿಜಯ ಭಂಡಾರಿ ದುರಂತವನ್ನು ಬಿಚ್ಚಿಟ್ಟ ಪರಿ.

ನಾನು ಬಸ್ಸಿನ ಕಿಟಕಿ ಗ್ಲಾಸ್ ಒಡೆದು ಹೊರಗಡೆ ಹಾರುವಾಗ ಗ್ಲಾಸ್ ಕೈ, ಕಾಲಿಗೆ ತರಚಿ ಗಾಯಗಳಾಯಿತು. ಆಗಿನ್ನೂ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿರಲಿಲ್ಲ. ನಂತರ ಹಠಾತ್ತಾಗಿ ಬೆಂಕಿ ಹೊತ್ತಿಕೊಂಡು ಉರಿಯತೊಡಗಿತು ಎಂದು ವಿಜಯ್ ಹೇಳುತ್ತಾರೆ.

ಕುಮಟಾದ ಚಿತ್ರಗಿಯವರಾದ ವಿಜಯ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಅವರ ಮೊಬೈಲ್, ಲ್ಯಾಪ್‌ಟ್ಯಾಪ್, ಬ್ಯಾಗ್ ಎಲ್ಲ ಸುಟ್ಟು ಕರಕಲಾಗಿವೆ. ಬಸ್ಸಿನಿಂದ ಹೊರಕ್ಕೆ ಜಿಗಿದ ಮೇಲೆ ರಾತ್ರಿ 2 ಗಂಟೆಗೆ ವೇಳೆಗೆ ಸ್ಥಳೀಯರ ಮೊಬೈಲ್ ಪಡೆದು ಮನೆಗೆ ಅಪಘಾತದ ಮಾಹಿತಿ ನೀಡಿ ತಾವು ಸುರಕ್ಷಿತವಾಗಿ ಇರುವುದಾಗಿ ತಿಳಿಸಿದ್ದಾರೆ.

ಬಸ್ಸಿನಲ್ಲಿದ್ದ ಹಲವರು ನಿದ್ದೆಯ ಮಂಪರಿನಲ್ಲಿದ್ದರು. ಏನಾಯಿತು ಎಂದು ಅರಿಯುವಷ್ಟರಲ್ಲಿ ಘೋರ ದುರಂತ ನಡೆದು ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿತ್ತು ಎಂದು ವಿಜಯ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ತಮ್ಮ ಸಂಬಂಧಿಯೊಬ್ಬರ ಕಾರಿನಲ್ಲಿ ಸಹಪ್ರಯಾಣಿಕ ಮೇಘರಾಜ್ ಅವರನ್ನೂ ಕರೆದುಕೊಂಡು ಬಂದಿದ್ದಾರೆ.

ಘಟನೆಯ ಆಘಾತದಿಂದ ವಿಜಯ್ ಇನ್ನೂ ಚೇತರಿಸಿಕೊಂಡಿಲ್ಲ. ಆದರೆ ಅಪಾಯದಿಂದ ಪಾರಾಗಿದ್ದಾರೆ ಎಂದು ವಿಜಯ ಸಂಬಂಧಿ ಕನ್ನಡಪ್ರಭ ಪತ್ರಿಕೆಯ ವಿತರಕ ಕತಗಾಲ ಮಹೇಶ ದೇಶಭಂಡಾರಿ ತಿಳಿಸಿದ್ದಾರೆ.

ಮೃತರ ಕುಟುಂಬಕ್ಕೆ ಪರಿಹಾರ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ರೂಪಾಲಿ ಆಗ್ರಹ:

ಬೆಂಗಳೂರಿನಿಂದ ಗೋಕರ್ಣಕ್ಕೆ ಬರುತ್ತಿದ್ದ ಖಾಸಗಿ ಬಸ್ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಅಪಘಾತಕ್ಕೀಡಾಗಿ 5 ಜನರು ಜೀವ ಕಳೆದುಕೊಂಡಿರುವುದು ತೀವ್ರ ಆಘಾತ, ನೋವನ್ನು ಉಂಟುಮಾಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಸಂತಾಪ ವ್ಯಕ್ತಪಡಿಸಿದ್ದಾರೆ.ವಿಧಿಯ ಅಟ್ಟಹಾಸಕ್ಕೆ ಪ್ರಯಾಣಿಕರು ಬಲಿಯಾದ ಬರಸಿಡಿಲಿನಂತೆ ಎರಗಿದ ವಿದ್ಯಮಾನ ಆ ಕುಟುಂಬಗಳನ್ನು ದಿಗ್ಭ್ರಾಂತರನ್ನಾಗಿಸಿದೆ. ಅಪಘಾತದಲ್ಲಿ ಮೃತರ ಹಾಗೂ ಗಾಯಗೊಂಡವರ ಕುಟುಂಬಕ್ಕೆ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ, ಗಾಯಾಳುಗಳು ಶೀಘ್ರದಲ್ಲಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಪರಿಹಾರ ಘೋಷಣೆಗೆ ಧನ್ಯವಾದ

ಚಿತ್ರದುರ್ಗ ಬಸ್ ದುರಂತದಲ್ಲಿ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ , ಗಾಯಾಳುಗಳಿಗೆ ತಲಾ ₹50 ಸಾವಿರ ವನ್ನು ಪ್ರಧಾನಿ ನರೇಂದ್ರ ಮೋದಿ ಪರಿಹಾರ ಘೋಷಣೆ ಮಾಡಿದ್ದಾರೆ ಹಾಗೂ ಈ ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನಡೆದ ದುರಂತಕ್ಕೆ ಶೀಘ್ರದಲ್ಲಿ ಸ್ಪಂದಿಸಿ ಪರಿಹಾರ ಘೋಷಣೆ ಮಾಡಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ರೂಪಾಲಿ ಎಸ್. ನಾಯ್ಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್‌ಮಸ್, ಸಹಬಾಳ್ವೆ ಮೆರಗು!
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ