ಹಾವೇರಿ ಜಿಲ್ಲಾದ್ಯಂತ ಸಂಭ್ರಮದಿಂದ ನಡೆದ ವಿಜಯ ದಶಮಿ

KannadaprabhaNewsNetwork |  
Published : Oct 03, 2025, 01:07 AM IST
2ಎಚ್‌ವಿಆರ್2- | Kannada Prabha

ಸಾರಾಂಶ

ಶರನ್ನವರಾತ್ರಿ ಅಂಗವಾಗಿ ಜಿಲ್ಲಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಹಾವೇರಿ: ಶರನ್ನವರಾತ್ರಿ ಅಂಗವಾಗಿ ಜಿಲ್ಲಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬುಧವಾರ ಆಯುಧ ಪೂಜೆ ನಿಮಿತ್ತ ವಾಹನಗಳ ಪೂಜೆ, ಅಂಗಡಿ ಮುಂಗಟ್ಟುಗಳಲ್ಲಿ ದೇವತೆಗೆ ಪೂಜೆ ಸಲ್ಲಿಸಲಾಯಿತು. ಗುರುವಾರ ವಿಜಯದಶಮಿ ಅಂಗವಾಗಿ ಗ್ರಾಮ ದೇವತೆ, ದುರ್ಗಾದೇವಿ, ನವದುರ್ಗೆ, ಕಾಳಿಕಾ ದೇವಿ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದಸರಾ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಒಂಬತ್ತು ದಿನಗಳ ಕಾಲ ದುರ್ಗಾದೇವಿ, ಗ್ರಾಮದೇವತೆಯ ದೇವಸ್ಥಾನಗಳಲ್ಲಿ ಪುರಾಣ ಪ್ರವಚನ, ವಿಶಿಷ್ಟ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇನ್ನು ಗ್ರಾಮೀಣ ಭಾಗದಲ್ಲಿ ಗ್ರಾಮದೇವತೆಯ ಭಾವಚಿತ್ರದ ಮೆರವಣಿಗೆ, ಕುಂಭ ಮೆರವಣಿಗೆ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ಹಬ್ಬಕ್ಕೆ ಮೆರುಗು ತಂದವು. ವಿಜಯದಶಮಿ ಹಬ್ಬ ಶುಭ ಸೂಚಕವಾಗಿದ್ದರಿಂದ ಹೊಸ ವಾಹನ ಖರೀದಿ, ನೂತನ ಅಂಗಡಿ ಪ್ರಾರಂಭೋತ್ಸವ, ನಿವೇಶನ ಖರೀದಿಸುವುದು ಕಂಡು ಬಂದಿತು.ಬನ್ನಿ ಮುಡಿಯುವ ಕಾರ್ಯಕ್ರಮ: ಗುರುವಾರ ಸಂಜೆ ಸುಮಾರು 7.30ರ ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮ ವಿಶಿಷ್ಠವಾಗಿ ನಡೆಯಿತು. ಹಾವೇರಿಯಲ್ಲಿ ಮೊದಲಿಗೆ ಪುರಸಿದ್ಧೇಶ್ವರ ದೇವಸ್ಥಾನದಲ್ಲಿ ದೇವರಿಗೆ ಬನ್ನಿ ಅರ್ಪಿಸಲಾಯಿತು. ಅಲ್ಲಿಂದ ಭಕ್ತರು ಹುಕ್ಕೇರಿಮಠದಲ್ಲಿ ಸದಾಶಿವ ಸ್ವಾಮೀಜಿಗಳಿಗೆ ಬನ್ನಿ ಅರ್ಪಿಸಿ ನಮಸ್ಕರಿಸಿ, ಆಶೀರ್ವಾದ ಪಡೆದರು. ಅಂತೆಯೇ ಗ್ರಾಮೀಣ ಪ್ರದೇಶದಲ್ಲಿ ಗ್ರಾಮದ ಹೊರವಲಯದಲ್ಲಿರುವ ಬನ್ನಿ ಗಿಡಕ್ಕೆ ಮೆರವಣಿಗೆ ಮೂಲಕ ತಂಡೋಪತಂಡವಾಗಿ ತೆರಳಿ ಪೂಜೆ ಸಲ್ಲಿಸಿ, ಪೂಜೆ ಸಲ್ಲಿಸಿ ಬನ್ನಿ ಸಮರ್ಪಿಸಲಾಯಿತು. ಬಳಿಕ ಬನ್ನಿಗಿಡದ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಎಲ್ಲ ಸಮಾಜದ ಬಾಂಧವರು ಬನ್ನಿ ತೊಂಗೊಂಡು ನಾವು-ನೀವು ಬಂಗಾರದಂಗ ಇರೋಣ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಪರಸ್ಪರರು ಬನ್ನಿ ಎಲೆಗಳನ್ನು ಹಿಡಿದು ಬನ್ನಿ ಹಂಚಿಕೊಂಡು ಸಂಭ್ರಮಪಟ್ಟರು. ಪರಸ್ಪರರು ಬನ್ನಿ ವಿನಿಮಯ ಮಾಡಿಕೊಂಡು ಸಹೋದರತ್ವ, ಸಹಭಾಳ್ವೆ ಪ್ರೀತಿಗೆ ಪಾತ್ರರಾಗಲು ಮನೆ ಹಿರಿಯರಿಗೆ ನಮಿಸಿ ಆಶೀರ್ವಾದ ಪಡೆದುಕೊಂಡರು.ದೇವಿ ಪೂಜೆ ನಡೆಸಲು ಹಾಗೂ ಬನ್ನಿ ಮುಡಿಯುವ ಸಲುವಾಗಿ ಬೆಳಗ್ಗೆ ಮಾರುಕಟ್ಟೆಗೆ ತೆರಳಿ ಹೂ, ಹಣ್ಣು, ಬಾಳೆ ದಿಂಡು, ಚೆಂಡು ಹೂ, ಜೋಳದ ದಂಟು, ಕಬ್ಬು ಖರೀದಿ ಮಾಡಿದರು. ವಿವಿಧ ಗ್ರಾಮಗಳಲ್ಲಿ ಮನೆ ದೇವಸ್ಥಾನ, ಮಠಗಳಿಗೆ, ದೇವರ ಕರ್ತೃಗೆ ಗದ್ದುಗೆ ತೆರಳಿ ಬನ್ನಿ ನೀಡಿ ದೇವರ ಕೃಪೆಗೆ ಪಾತ್ರರಾದರು.ಶ್ರೀ ದ್ಯಾಮವ್ವ, ಕಾಳಿಕಾ ದೇವಿ ಕಾರ್ಯಕ್ರಮ:ಹಾವೇರಿಯ ಗ್ರಾಮ ದೇವತೆ ಶ್ರೀ ದ್ಯಾಮವ್ವ ದೇವಿ ಹಾಗೂ ಕಾಳಿಕಾ ದೇವಿ ಬನ್ನಿ ಮುಡಿಯುವ ಕಾರ್ಯಕ್ರಮ ನಗರದಲ್ಲಿ ನಡೆಯಿತು. ಶ್ರೀ ದ್ಯಾಮವ್ವ ದೇವಿ ಹಾಗೂ ಕಾಳಿಕಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ನಗರದ ಹೊರವಲಯದಲ್ಲಿರುವ ಪೂಜಾ ಸ್ಥಳಕ್ಕೆ ತೆರಳಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು. ದೇವಿ ಮೂರ್ತಿಗಳಿಗೆ ವಿಶೇಷ ಅಲಂಕಾರ: ವಿಜಯದಶಮಿ ಅಂಗವಾಗಿ ಗುರುವಾರ ಹಾವೇರಿ ನಗರದ ಮೂಲ ಹಕ್ಕಲು ಮರಿಯಮ್ಮ ದೇವಿ, ಬಸವೇಶ್ವರನಗರ ಸಿ ಬ್ಲಾಕ್‌ನ ಅನ್ನಪೂರ್ಣೇಶ್ವರಿ ದೇವಿ, ಯಾಲಕ್ಕಿ ಓಣಿಯಲ್ಲಿ ಪ್ರತಿಷ್ಠಾಪಿಸಿರುವ ದುರ್ಗಾದೇವಿ, ಕೊಲ್ಲಾಪುರ ಮಹಾಲಕ್ಷ್ಮಿದೇವಿ, ಹಿರೇಕೆರೂರಿನ ದುರ್ಗಾದೇವಿ, ತಡಸದ ಗಾಯತ್ರಿದೇವಿ, ರಾಣೆಬೆನ್ನೂರಿನ ಆದಿಶಕ್ತಿ ದುರ್ಗಾಮಾತೆ, ಬ್ಯಾಡಗಿಯ ಬನಶಂಕರಿ ದೇವಿ, ರಟ್ಟಿಹಳ್ಳಿಯ ದುರ್ಗಾದೇವಿ, ಬಂಕಾಪೂರದ ರೇಣುಕಾ ಯಲ್ಲಮ್ಮ, ಚಾಮುಂಡೇಶ್ವರಿ ದೇವಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಂಡುಬರುವ ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳಿಗೆ ವಿಶೇಷವಾಗಿ ರಜತ ಹಾಗೂ ಚಿನ್ನದ ಆಭರಣಗಳಿಂದ, ನಾನಾ ಬಗೆಯ ಫಲಪುಷ್ಪಗಳಿಂದ, ಹಣ್ಣುö, ಕಾಯಿ, ಹಸಿರು ಸೀರೆ, ಕೈಬಳೆಗಳಿಂದ ಅಲಂಕಾರಗೊಳಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ