ಕನ್ನಡಪ್ರಭ ವಾರ್ತೆ ಆಲೂರು ಬನ್ನಿ ಹಂಚುವ ಮೂಲಕ ಶುಭಾಶಯ ವಿನಿಮಯ ನವರಾತ್ರಿ ಉತ್ಸವದ ಪ್ರಯುಕ್ತ ಕಳೆದ 9 ದಿನಗಳಿಂದ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನಡೆದವು. ಆಯುಧ ಪೂಜೆ ಅಂಗವಾಗಿ ಸಾರ್ವಜನಿಕರು ವಾಹನ ಪೂಜೆ,ವಿವಿಧ ಉಪಕರಣಗಳ, ರೈತರು ಕೃಷಿ ಉಪಕರಣಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ನವರಾತ್ರಿ ಪ್ರಯುಕ್ತ ವಿವಿಧ ಗ್ರಾಮಗಳಲ್ಲಿ ದೇವರುಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮಗಳ ರಾಜಬೀದಿಗಳಲ್ಲಿ ಮೆರವಣಿಗೆ, ಉತ್ಸವಗಳನ್ನು ಶ್ರದ್ಧಾ ಭಕ್ತಿಯಿಂದ ನೆರೆವೇರಿಸಿದರು. ಮಂಗಳವಾರ ವಿಜಯದಶಮಿಯ ಅಂಗವಾಗಿ ಹರಿಹಳ್ಳಿ ಗ್ರಾಮದ ಶ್ರೀ ಕೆಂಚಾಂಬ ದೇವಿ, ಮರಸು ಗ್ರಾಮದ ಶ್ರೀ ತಿರುಮಲ, ಹಳೆ ಆಲೂರಿನ ಶ್ರೀ ರಂಗನಾಥ ಸ್ವಾಮಿ, ಮರಸು ಹೊಸಳ್ಳಿಯ ವಿಜಯದುರ್ಗ ಕ್ಷೇತ್ರದ ಉಡಸಲಮ್ಮ ಮತ್ತು ಮತ್ಸಲಮ್ಮ , ಕಣತೂರಿನ ಗ್ರಾಮ ದೇವತೆ ದೇವಿರಮ್ಮ ,ರಾಯರಕೊಪ್ಪಲಿನ ಶ್ರೀ ಬನಶಂಕರಿ ಅಮ್ಮನವರು, ದೇವರುಗಳನ್ನು ಪಟ್ಟಕ್ಕೆ ಕೂರಿಸಿ ಮತ್ತು ಬನ್ನಿ ಮಂಟಪದಲ್ಲಿ ಕುಳ್ಳಿರಿಸಿ, ಮುಂಭಾಗದಲ್ಲಿ ನೆಡಲಾಗಿದ್ದ ಬಾಳೆ ಮತ್ತು ಬನ್ನಿ ಕಂಬವನ್ನು ತುಂಡರಿಸಲಾಯಿತು. ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದಿರುವಂತೆ ಪಟೇಲ ವಂಶಸ್ಥರಾದ ಎಂ. ಪಿ. ಕುಮಾರ್ ಬಿಲ್ಲು ಬಾಣ, ವಿಶ್ವಕರ್ಮ ವಂಶಸ್ಥರಾದ ಎಂ. ಪಿ. ಹರೀಶ್ ಬಂದೂಕಿನಿಂದ ಗುಂಡು ಹಾರಿಸಿ ಬನ್ನಿ ತುಂಡರಿಸಿದರು. ನೆರೆದಿದ್ದ ನೂರಾರು ಭಕ್ತರು ಬನ್ನಿ ಸೊಪ್ಪನ್ನು ಪಡೆದುಕೊಂಡು ಮಿತ್ರರು, ಬಂಧುಗಳಿಗೆ ಪರಸ್ಪರ ಬನ್ನಿ ಹಂಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಮೇಲ್ಕಂಡ ದೇವರುಗಳನ್ನು ಆಯಾಯ ಗ್ರಾಮದಲ್ಲಿ 9 ದಿನಗಳು ಪಟ್ಟಕ್ಕೆ ಕುಳ್ಳಿರಿಸಲಾಗಿತ್ತು. ಪ್ರತಿದಿನ ಸಂಜೆ ಗ್ರಾಮಸ್ಥರು ವಿವಿಧ ಅಲಂಕಾರ ಪೂಜೆ ನೆರವೇರಿಸಿದರು.