ವಿಜಯ ದಶಮಿ ರಾಷ್ಟ್ರದ ಆತ್ಮಜಾಗೃತಿಯ ದಿನ: ಮಂಜುನಾಥ ಇಟಗಿ

KannadaprabhaNewsNetwork |  
Published : Oct 22, 2026, 02:15 AM IST
ವಿಜಯ ದಶಮಿ ಉತ್ಸವದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಮಂಜುನಾಥ ಇಟಗಿ ಮಾತನಾಡಿದರು. | Kannada Prabha

ಸಾರಾಂಶ

ದುರ್ಗಾದೇವಿ ಮಹಿಷಾಸುರನನ್ನು ಮರ್ದಿಸಿದ ದಿನ. ಇದು ಕೇವಲ ಹಬ್ಬವಲ್ಲ, ಇದು ರಾಷ್ಟ್ರದ ಆತ್ಮಜಾಗೃತಿಯ ದಿನ

ಕನ್ನಡಪ್ರಭ ವಾರ್ತೆ ಮುಂಡರಗಿ

ವಿಜಯದಶಮಿ ಅಧರ್ಮದ ಮೇಲೆ ಧರ್ಮದ, ಅಸತ್ಯದ ಮೇಲೆ ಸತ್ಯದ ವಿಜಯದ ಸಂಕೇತ. ಶ್ರೀರಾಮನು ರಾವಣನನ್ನು ಸಂಹರಿಸಿದ ದಿನ, ದುರ್ಗಾದೇವಿ ಮಹಿಷಾಸುರನನ್ನು ಮರ್ದಿಸಿದ ದಿನ. ಇದು ಕೇವಲ ಹಬ್ಬವಲ್ಲ, ಇದು ರಾಷ್ಟ್ರದ ಆತ್ಮಜಾಗೃತಿಯ ದಿನ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಮಂಜುನಾಥ ಇಟಗಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಮ್ಮಿಕೊಂಡಿದ್ದ ವಿಜಯ ದಶಮಿ ಉತ್ಸವದಲ್ಲಿ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದರು. ‌‌

ರಾಷ್ಟ್ರ ಎಂದರೆ ಕೇವಲ ನೆಲ, ಜಲ, ಗಡಿ ಅಲ್ಲ. ರಾಷ್ಟ್ರ ಎನ್ನುವುದು ಒಂದು ಚೈತನ್ಯ, ಒಂದು ಸಂಸ್ಕೃತಿ, ಒಂದು ನಿರಂತರ ಹರಿಯುವ ಜೀವನದಿ. ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿಯವರೆಗೆ, ಅಟಕದಿಂದ ಕಟಕದವರೆಗೆ ನಮ್ಮ ನಾಡಿಮಿಡಿತ ಒಂದೇ. ನಮ್ಮ ವೇದಗಳು ಒಂದೇ, ನಮ್ಮ ಪುರಾಣಗಳು ಒಂದೇ, ನಮ್ಮ ಪೂರ್ವಜರು ಒಂದೇ. ನಾವು ಕೇವಲ ಒಂದು ಜನಸಮೂಹವಲ್ಲ, ನಾವು ಒಂದು ರಾಷ್ಟ್ರ ಪುರುಷರು. ಈ ರಾಷ್ಟ್ರಪುರುಷ ಸಾವಿರಾರು ವರ್ಷಗಳಿಂದ ಬದುಕಿದ್ದಾನೆ, ಪರಕೀಯರ ದಾಳಿಗಳನ್ನು ಎದುರಿಸಿದ್ದಾನೆ, ಮತ್ತೆ ಎದ್ದು ನಿಂತಿದ್ದಾನೆ.

ಒಂದು ಒಳಗಿನ ಸವಾಲು, ನಮ್ಮನ್ನು ಜಾತಿ, ಭಾಷೆ, ಪಂಥಗಳ ಹೆಸರಲ್ಲಿ ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳು. ನಮ್ಮ ನಮ್ಮ ಮಧ್ಯೆ ಒಡಕು ತಂದಿಟ್ಟು ನಮ್ಮನ್ನು ನಾಶ ಮಾಡಲು ನೋಡುತ್ತಾರೆ. ಇಂತಹ ಕೃತ್ಯಗಳ ಮೆಟ್ಟಿ ನಾವು ಮೊದಲು ಭಾರತೀಯರು ಎಂದು ನೋಡಬೇಕು. ಮತ್ತೊಂದು ಹೊರಗಿನ ಸವಾಲು, ನಮ್ಮ ಸಾರ್ವಭೌಮತೆ, ನಮ್ಮ ಗಡಿಗಳಿಗೆ ಸವಾಲು ಹಾಕುವ ಶತ್ರು ಶಕ್ತಿಗಳು. ನಾವು ನಮ್ಮ ಮನೆಗಳಲ್ಲಿ ದೀಪ ಬೆಳಗಿಸುವಾಗ ನಮ್ಮ ರಾಷ್ಟ್ರದ ಭವಿಷ್ಯದ ದೀಪವೂ ಬೆಳಗಬೇಕು. ನಾವು ನಮ್ಮ ಮಕ್ಕಳಿಗೆ ಆಸ್ತಿ ಜೊತೆಗೆ ದೇಶಭಕ್ತಿಯನ್ನೂ ಕೊಡಬೇಕು. ನಾನು ಪ್ರತಿದಿನ ರಾಷ್ಟ್ರಕ್ಕಾಗಿ ಒಂದು ಸಣ್ಣ ಕೆಲಸ ಮಾಡುತ್ತೇನೆ. ದೇಶವನ್ನು ಒಡೆಯುವ ಯಾವುದೇ ಸುಳ್ಳು ಸುದ್ದಿ, ವಿಷಯಗಳನ್ನು ನಾನು ಹರಡುವುದಿಲ್ಲ, ಭಾರತೀಯ ಸಂಸ್ಕೃತಿ, ಸ್ವದೇಶಿ ವಸ್ತುಗಳನ್ನು ನಾನು ಹೆಮ್ಮೆಯಿಂದ ಬಳಸುತ್ತೇನೆ ಎನ್ನುವ ನಿರ್ಧಾರಗಳನ್ನು ಮಾಡಬೇಕು. ಬನ್ನಿ, ಈ ಶಮಿ ವೃಕ್ಷದ ಎಲೆಗಳನ್ನು ನಾವು ಬಂಗಾರವೆಂದು ಹಂಚಿಕೊಳ್ಳುವಂತೆ, ರಾಷ್ಟ್ರಭಕ್ತಿಯನ್ನು ನಾವೆಲ್ಲರೂ ಹಂಚಿಕೊಳ್ಳೋಣ ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಡಿವಾಳ ಮಾಚಿದೇವರ ಸಮಾಜದ ಅಧ್ಯಕ್ಷ ನಾಗರಾಜ ಮಡಿವಾಳರ ಪಾಲ್ಗೊಂಡಿದ್ದರು. ಈ ಸಂದರ್ಭ ಶ್ರೀನಿವಾಸ ಕಟ್ಟಿಮನಿ, ಅವಿನಾಶ ಗೊಟಕಿಂಡಿ, ಶೇಖರಗೌಡ ಪಾಟೀಲ, ಅಜ್ಜಪ್ಪ ಲಿಂಬಿಕಾಯಿ,‌ ಮಂಜುನಾಥ ಅಳವಂಡಿ, ನಾಗರಾಜ ಹೊಸಮನಿ, ಜಗದೀಶ ಸೋನಿ, ಸಂಜಯ ಚೌಡಾಳ, ಅನಂತ ಚಿತ್ರಗಾರ, ನಾಗರಾಜ ಪತ್ತಾರ, ಸಂತೋಷ ಬಳ್ಳೊಳ್ಳಿ, ಹನುಮಂತ ಅರ್ಕಸಾಲಿ, ನಾರಾಯಣ ಮಹೇಂದ್ರಕರ್, ಬಸವರಾಜ ಹಕ್ಕಂಡಿ, ಬಸವರಾಜ ಸಜ್ಜನರ, ಸೋಮಣ್ಣ ಬೆಟಗೇರಿ, ವಿಠ್ಠಲ ಜಾಧವ್, ಸುರೇಶ ರಾಮೇನಹಳ್ಳಿ, ಸಂಜಯ ಕಲ್ಯಾಣಿ, ಶ್ರೀನಿವಾಸ ಗುಗ್ಗರಿ, ಮಂಜುನಾಥ ಮುಧೋಳ ಮುಂತಾದವರು ಭಾಗವಹಿಸಿದ್ದರು. ಕಾಳಪ್ಪ ಕಮ್ಮಾರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಕುಟಿಕ ಜಾತಿಯ ವಕ್ರಕಂಠ ಹಕ್ಕಿ ಕೂಡ್ಲಿಗಿಗೆ ತಾತ್ಕಾಲಿಕ ವಲಸೆ
ಕುಷ್ಟಗಿ ರೈಲ್ವೆ ಮೇಲ್ಸೇತುವೆ ಶೀಘ್ರ ಲೋಕಾರ್ಪಣೆ