ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲಾದ್ಯಂತ ಅ.1ರಂದು ಆಯುಧ ಪೂಜೆ, ಅ.2ರಂದು ವಿಜಯದಶಮಿ ಹಾಗೂ ನಾಡಹಬ್ಬ ಆಚರಿಸುವ ಹಿನ್ನೆಲೆ ಸಮಸ್ತರಿಗೂ ಹಬ್ಬದ ಶುಭಾಶಯಗಳು. ಎಲ್ಲರ ಬಾಳಲ್ಲೂ ನಕಾರಾತ್ಮಕತೆ ಅಳಿದು, ಸಕಾರಾತ್ಮಕತೆ ಬೆಳಗಲಿ. ನಗರ, ಜಿಲ್ಲಾದ್ಯಂತ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ನಾಡಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.ವಿಶ್ವ ಹಿಂದು ಪರಿಷತ್ತು, ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿಯಿಂದ ಅ.2ರಂದು ನಗರದ ಶ್ರೀ ವೆಂಕಟೇಶ್ವರ ವೃತ್ತದಿಂದ ವಿಜಯದಶಮಿ ಶೋಭಾಯಾತ್ರೆ ನಡೆಯಲಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶೋಭಾಯಾತ್ರೆಯಲ್ಲಿ ಆಯೋಜಕರು ಹಾಗೂ ಸಾರ್ವಜನಿಕರು ಕೆಲವು ಸೂಚನೆಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸಿದೆ.
1. ವಿಜಯದಶಮಿ ಮೆರವಣಿಗೆ ಈಗಾಗಲೇ ನಿಗದಿಪಡಿಸಿದ ಮಾರ್ಗಗಳಲ್ಲೇ ಸಾಗಬೇಕು. ಮೆರವಣಿಗೆ ವೇಳೆ ಯಾವುದೇ ಜೀವಹಾನಿ ಆಗದಂತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು.2. ಮೆರವಣಿಗೆ ವೇಳೆ ಪ್ರಚೋದನಾಕಾರಿ ಹಾಡು ಹಾಕುವುದು, ಪೋಸ್ಟರ್ ಪ್ರದರ್ಶಿಸುವುದಕ್ಕೆ ಅವಕಾಶವಿಲ್ಲ. ಆಯೋಜಕರು ವಿಶೇಷ ಗಮನಹರಿಸಬೇಕು.
3. ಮಾದಕ ವಸ್ತು, ಮದ್ಯ ಸೇವನೆ ಮಾಡಬಾರದು. ವಿದ್ಯುತ್ ಅವಘಡಗಳಾಗದಂತೆ, ಅಗತ್ಯ ಬೆಳಕಿನ ವ್ಯವಸ್ಥೆಗೆ ಜನರೇಟರ್ ಅಳವಡಿಸಿಕೊಳ್ಳುವುದು. ಸೂಕ್ಷ್ಮ ಪ್ರದೇಶಗಳಲ್ಲಿ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.4. ವಿಜಯ ದಶಮಿ ಹಿನ್ನೆಲೆ ಈಗಾಗಲೇ ರೌಡಿ ಮತ್ತು ಮತೀಯ ಗೂಂಡಾಗಳ ಮೇಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಿಗಾ ಇರಿಸಲಾಗಿದೆ. ಕೋರ್ಟ್ ಆದೇಶ ಹಿನ್ನೆಲೆ ಕರ್ಕಶ ಶಬ್ಧಗಳ ಧ್ವನಿವರ್ಧಕಗಳನ್ನು ಉಪಯೋಗಿಸಬಾರದು.
5. ಮೆರವಣಿಗೆ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರನ್ನು ನೇಮಿಸಿ, ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ, ಧಾರ್ಮಿಕ ನಿಂದನೆ, ಸುಳ್ಳುಸುದ್ದಿ, ಪೋಸ್ಟ್‌ಗಳನ್ನು ಹಾಕಬಾರದು.6. ಯಾವುದೇ ಅಹಿತಕರ ಘಟನೆ ಕಂಡುಬಂದರೆ ತುರ್ತು ಸಹಾಯವಣಿ 112ಗೆ ಕರೆ ಮಾಡಬೇಕು. ಸ್ಥಳೀಯ ಪೊಲೀಸ್ ಠಾಣೆ/ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಅನುಮತಿ ಪಡೆಯದೇ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಹಾಕಬಾರದು.
7. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ದ್ವಿಚಕ್ರ ವಾಹನಗಳಲ್ಲಿ 2ಕ್ಕಿಂತ ಹೆಚ್ಚಿನ ಸವಾರರು ಇರುವಂತಿಲ್ಲ.- - -
(ಬಾಕ್ಸ್) * ಸಿಸಿ ಕ್ಯಾಮ್, ಮೆರವಣಿಗೆ ಮೇಲೆ ಡ್ರೋಣ್ ಕಣ್ಗಾವಲುವಿಜಯದಶಮಿ ಮೆರವಣಿಗೆ ಹಿನ್ನೆಲೆ ಭದ್ರತೆ ಒದಗಿಸಲು ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಕೆ.ಎಸ್.ಆರ್.ಪಿ ತುಕಡಿಗಳು ಮತ್ತು ಡಿಎಆರ್ ತುಕಡಿಗಳು, ಕ್ಯೂ.ಆರ್.ಟಿ. ತಂಡಗಳು, ದುರ್ಗಾ ಪಡೆ, ಅಲ್ಲದೇ ಹೋಂ ಗಾರ್ಡ್ ಸಿಬ್ಬಂದಿ ನಿಯೋಜಿಸಲಾಗಿದೆ. 200ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ, ಮೆರವಣಿಗೆ ಚಿತ್ರೀಕರಣಕ್ಕೆ ಹೆಚ್ಚಿನ ವಿಡಿಯೋಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ. ಡ್ರೋನ್ ಕಣ್ಗಾವಲು ಇರಿಸಲಾಗಿರುತ್ತದೆ.
- ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ.- - -