ನವರಾತ್ರಿ ಹಿನ್ನೆಲೆಯಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆದ ದುರ್ಗಾದೇವಿ ವಿಸರ್ಜನ ಕಾರ್ಯಕ್ರಮಕ್ಕೆ ತರೆ ಬಿದ್ದಿತ್ತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಜಯದಶಮಿಯ ವಿಶೇಷ ಪೂಜೆ, ಬನ್ನಿ ವಿನಿಮಯ, ಸಂಭ್ರಮಾಚರಣೆ, ಅದ್ಧೂರಿ ದುರ್ಗಾದೇವಿ ವಿಸರ್ಜನಾ ಮೆರವಣಿಗೆ ಮೂಲಕ ನಗರದಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆದ ದಸರಾ ಹಬ್ಬ ಸಂಪನ್ನಗೊಂಡಿದೆ.
ನವರಾತ್ರಿ ಹಬ್ಬದ ಕೊನೆದಿನ ಹಿನ್ನೆಲೆಯಲ್ಲಿ ಶುಕ್ರವಾರ ನಸುಕಿನಿಂದಲೇ ಎಲ್ಲ ದೇವಸ್ಥಾನಗಳಲ್ಲೂ ಭಕ್ತಸಮೂಹ ನೆರೆದಿತ್ತು. ಭಕ್ತರು ದೇವಸ್ಥಾನದಿಂದ ಬನ್ನಿಯನ್ನು ಪಡೆದು ಮನೆಗೊಯ್ದು ಪೂಜಿಸಿ ಪರಸ್ಪರ ವಿನಿಮಯ ಮಾಡಿಕೊಂಡು ಶುಭ ಕೋರಿಕೊಂಡರು.
ಮೆಜೆಸ್ಟಿಕ್‌ನ ಅಣ್ಣಮ್ಮ ದೇವಿ ದೇವಸ್ಥಾನ, ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಸ್ಥಾನ, ಮತ್ತಿಕೆರೆಯ ಚೌಡೇಶ್ವರಿ ದೇವಾಲಯ, ಗಂಗಮ್ಮ ದೇವಾಲಯ, ಶೇಷಾದ್ರಿಪುರದ ಮಹಾಲಕ್ಷ್ಮೀ ದೇವಾಲಯ, ಬಂಡಿಕಾಳಮ್ಮ ದೇವಸ್ಥಾನ, ಶಂಕರ ಮಠದ ಶಾರದಾ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದವು. ಲಲಿತಾ ಸಹಸ್ರನಾಮ ಪಠಣ, ಭಜನೆ ನಡೆಯಿತು.
ಬನಶಂಕರಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ನವಚಂಡಿಕಾ ಹೋಮ, ಸಂಜೆ ಶಾಕಂಬರಿ ಅಮ್ಮನವರ ರಾಜಬೀದಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಚಂಡೆವಾದ್ಯ, ನಾದಸ್ವರ, ಡೊಳ್ಳುಕುಣಿತಗಳ ಸಮೇತವಾಗಿ ಮೆರವಣಿಗೆ ಸಾಗಿತು. ರಾತ್ರಿ 8ಗಂಟೆಗೆ ದೇವಾಲಯದ ಆವರಣದಲ್ಲಿ ಶಮೀ ಪೂಜೆ ನೆರವೇರಿತು.
ದಶಮಿ ಪ್ರಯುಕ್ತ ನಗರದ ಅದಿದೇವತೆ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ಆಗಮಿಸಿ ದೇವಿಯ ದರ್ಶನಾಶೀರ್ವಾದ ಪಡೆದರು. ಇದರ ಜೊತೆಗೆ ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಾಲಯದಲ್ಲಿ ಅಮ್ಮನವರಿಗೂ ವಿಶೇಷ ಪೂಜೆಗಳು ಭಕ್ತಿಯಿಂದ ಜರುಗಿತು.
ಅದ್ಧೂರಿ ವಿಸರ್ಜನಾ ಮೆರವಣಿಗೆ
ಜೆ.ಸಿ.ನಗರ ದಸರಾ ಉತ್ಸವ ಸಮಿತಿಯಿಂದ ನಡೆದ ಒಂಬತ್ತು ದಿನಗಳ ಅದ್ಧೂರಿ ಕಾರ್ಯಕ್ರಮಕ್ಕೆ ತೆರೆಬಿದ್ದಿದೆ. ರಾತ್ರಿ ಇಲ್ಲಿನ ಮುಖ್ಯ ರಸ್ತೆಯಲ್ಲಿ ನಡೆದ ಅದ್ಧೂರಿ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಮಾರಪ್ಪ ಬ್ಲಾಕ್ , ಮುನಿರೆಡ್ಡಿ ಪಾಳ್ಯ, ತಿಮ್ಮಯ್ಯ ಗಾರ್ಡನ್, ಆರ್.ಟಿ.ನಗರ ಸೇರಿ ವಿವಿಧೆಡೆಯ ಯುವಕ ಸಂಘಗಳು ಪ್ರತಿಷ್ಠಾಪಿಸಿದ್ದ ದುರ್ಗೆ, ಭುವನೇಶ್ವರಿ ದೇವಿ, ಶ್ರೀರಾಮ, ಆಂಜನೇಯ, ಮಹಾಗಣಪತಿ ಮೆರವಣಿಗೆಗಳು ಭರ್ಜರಿಯಾಗಿತ್ತು. ಇದಕ್ಕೂ ಮುನ್ನ ಪ್ರಸಾದ ವಿತರಣೆ ನಡೆಯಿತು.
ಅದರಂತೆ ವೈಟ್‌ಫೀಲ್ಡ್, ಎಚ್.ಎಸ್.ಆರ್.ಲೇಔಟ್, ಕೋರಮಂಗಲ, ಯಶಂತಪುರ, ಜಯಮಹಲ್, ಜಾಲಹಳ್ಳಿ ಸೇರಿ ರಾಜಧಾನಿಯೆಲ್ಲೆಡೆ ಪ್ರತಿಷ್ಠಾಪಿಸಿದ್ದ ದುರ್ಗಾ ಮೂರ್ತಿಗಳ ವಿಸರ್ಜನೆ ನಡೆಯಿತು. ಹಲಸೂರು ಕೆರೆ ಸೇರಿ ಮತ್ತಿತರ ಕಡೆಗಳಲ್ಲಿ ದೇವಿಯನ್ನು ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.