ಕನ್ನಡಪ್ರಭ ವಾರ್ತೆ ಜಮಖಂಡಿ
ಬುಧವಾರ ಸೀಮಿ ಸೀಮೋಲಂಘನ ನೆರವೇರಿಸಿ ಸಿಂಹಾಸನರೋಹಣ ಮಾಡಿ ವಿಜಯದಶಮಿಯ ಶಾಂತಿ ಸಂದೇಶ ನೀಡಿದರು. ಧರ್ಮ ಎಂದರೆ ಕೇವಲ ಆಚರಣೆಗಳಲ್ಲ. ಧರ್ಮವೆಂದರೆ ಸತ್ಯ ನುಡಿಯುವ ನ್ಯಾಯಪರ ನಿಲ್ಲುವ ಹಸಿದವರಿಗೆ ಅನ್ನ ಕೊಡುವ ಅಸಹಾಯಕರಿಗೆ ನೆರವಾಗುವ ಮಹಿಳೆಯರನ್ನು ಗೌರವಿಸುವ ಮತ್ತು ಪ್ರತಿಯೊಂದು ಜೀವಿಯಲ್ಲಿಯೂ ದೈವತ್ವ ಕಾಣುವುದು ವಿಜಯದಶಮಿಯ ಮೂಲ ಗುರಿಯಾಗಬೇಕು. ಪ್ರತಿಯೊಬ್ಬರೂ ತಮ್ಮೊಳಗಿನ ಅಹಂಕಾರ, ದ್ವೇಷ, ಅಸೂಯೆ, ಸ್ವಾರ್ಥ, ಅಸತ್ಯವೆಂಬ ರಾವಣನನ್ನು ಸಂಹರಿಸಿಕೊಳ್ಳಬೇಕು. ಮನಸ್ಸಿನಲ್ಲಿ ಸತ್ಯ, ಪ್ರಾಮಾಣಿಕತೆ, ಕರುಣೆ, ಸಹನೆ ಮತ್ತು ಸೇವಾ ಮನೋಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಿಜವಾದ ವಿಜಯವು ಹೊರಗಿನ ಶತ್ರುವನ್ನು ಸೋಲಿಸುವುದು ಮಾತ್ರವಲ್ಲ. ನಮ್ಮೊಳಗಿನ ದುರ್ಗುಣಗಳನ್ನು ಗೆಲ್ಲುವುದರಲ್ಲಿದೆ. ಸನಾತನ ಸಂಸ್ಕೃತಿ ಪರಂಪರೆ ದೇವಾಲಯಗಳು ಗುರು ಪರಂಪರೆ ಮತ್ತು ಧಾರ್ಮಿಕ ಮೌಲ್ಯಗಳು ಮುಂದಿನ ಪೀಳಿಗೆಗೂ ತಲುಪುವಂತಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ, ಯುವ ಜನತೆಯಲ್ಲಿ ಧೈರ್ಯ, ಶಿಸ್ತು, ಸೇವಾ ಮನೋಭಾವ, ರಾಷ್ಟ್ರ ಪ್ರೇಮ ಬೆಳೆಸುವುದಾಗಬೇಕು. ಸಮಾಜದಲ್ಲಿ ಜಾತಿ ಮತ ಭಾಷೆ ಮತ್ತು ಆರ್ಥಿಕ ಸ್ಥಿತಿ ಭೇದಗಳನ್ನು ಮೀರಿ ಮಾನವೀಯತೆಯ ಸೇತುವೆ ನಿರ್ಮಾಣಗೊಳ್ಳಬೇಕು. ನಗರದಲ್ಲಿ ನಡೆದ ಶರನ್ನವರಾತ್ರಿ ಧರ್ಮ ಸಮ್ಮೇಳನದ ಎಲ್ಲಾ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ನಡೆದಿರುವುದು ಅತ್ಯಂತ ಹರುಷ ಉಂಟು ಮಾಡಿದೆ ಎಂದ ಜಗದ್ಗುರುಗಳು, ದಸರಾ ಧರ್ಮ ಸಮ್ಮೇಳನ ಎಲ್ಲ ಸದಸ್ಯರು ಮತ್ತು ಭಕ್ತಾಭಿಮಾನಿಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಿದ್ದನ್ನು ಎಂದೆಂದಿಗೂ ಮರೆಯಲಾಗದೆಂದರು.ದಸರಾ ಧರ್ಮ ಸಮ್ಮೇಳನ ಸವಿನೆನಪಿಗಾಗಿ ಜಗದ್ಗುರು ರೇಣುಕಾಚಾರ್ಯರ ಭವ್ಯ ಮಂದಿರ ನಿರ್ಮಾಣಗೊಳ್ಳಲೆಂದು ಶುಭ ಹಾರೈಸಿದರು. ಸ್ವಾಗತಿ ಸಮಿತಿ ಕಾರ್ಯಾಧ್ಯಕ್ಷರು ಮತ್ತು ಶಾಸಕರೂ ಆದ ಜಗದೀಶ ಗುಡಗುಂಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಯಡಿಯೂರು, ಜಮಖಂಡಿ ಕಲ್ಯಾಣಮಠದ ಮುತ್ತಿನಕಂತಿ ಹಿರೇಮಠ, ಕೊಣ್ಣೂರು ಹೊರಗಿನ ಮಠ, ಮಳಲಿ ಸಂಸ್ಥಾನ ಮಠ, ಸಿದ್ದರಬೆಟ್ಟ ಕ್ಷೇತ್ರ, ಸಂಗೊಳ್ಳಿ ಹಿರೇಮಠ, ತೇರದಾಳ ಹಿರೇಮಠ ಸೇರಿ ಅನೇಕ ಮಠಾಧೀಶರು ಪಾಲ್ಗೊಂಡಿದ್ದರು.ಸಿ.ಎಚ್. ಬಾಳನಗೌಡ್ರ, ಗುರುಪಾದಯ್ಯ ಸಾಲಿಮಠ ಇದ್ದರು. ಶಿಷ್ಯ ಸದ್ಭಕ್ತರು ವಿಜಯ ದಶಮಿಯ ನಿಮಿತ್ತ ಜಗದ್ಗುರುಗಳಿಗೆ ಬನ್ನಿ ಬಂಗಾರ ಕಾಣಿಕೆ ಅರ್ಪಿಸಿ ಆಶೀರ್ವಾದ ಪಡೆದರು.