ಯುಪಿಎಸ್ಸಿಯಲ್ಲಿ 4ನೇ ಪ್ರಯತ್ನದಲ್ಲಿ ಯಶಸ್ಸು ಕಂಡ ವಿಜಯಕುಮಾರ

KannadaprabhaNewsNetwork | Published : Apr 18, 2024 2:21 AM

ಸಾರಾಂಶ

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕೆನ್ನುವ ಛಲ ಇವರನ್ನು ನಾಲ್ಕನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಲು ಪ್ರೇರೇಪಿಸಿತು.

ವಿ.ಎಂ. ನಾಗಭೂಷಣ

ಸಂಡೂರು: ತಾಲೂಕಿನ ಚೋರುನೂರು ಗ್ರಾಮದ ಟಿ.ವಿಜಯಕುಮಾರ್ ಕೇಂದ್ರ ಲೋಕಸೇವಾ ಆಯೋಗದ ೨೦೨೩ನೇ ಸಾಲಿನ ಪರೀಕ್ಷೆಯಲ್ಲಿ ೯೫೩ ರ‍್ಯಾಂಕ್‌ ಪಡೆದು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

೨೦೨೨ರಲ್ಲಿ ಘೋಷಣೆಯಾದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಇವರು ಪ್ರಸ್ತುತ ಕೊಪ್ಪಳದಲ್ಲಿನ ಕಾರಾಗೃಹದ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಲ್ಕನೇ ಪ್ರಯತ್ನ:

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕೆನ್ನುವ ಛಲ ಇವರನ್ನು ನಾಲ್ಕನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಲು ಪ್ರೇರೇಪಿಸಿತು. ನಾಲ್ಕನೇ ಪ್ರಯತ್ನದಲ್ಲಿ ಇವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ತಮ್ಮ ಮಹದಾಸೆ ಈಡೇರಿಸಿಕೊಂಡಿದ್ದಾರೆ. ಆ ಮೂಲಕ ಸಾಧಿಸುವ ಛಲ, ಕಠಿಣ ಹಾಗೂ ಪ್ರಾಮಾಣಿಕ ಪರಿಶ್ರಮ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇವರು ಉದಾಹರಣೆಯಾಗಿದ್ದಾರೆ.

ಶೈಕ್ಷಣಿಕ ವಿವರ:

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಚೋರುನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದುಕೊಂಡು, 6-10ನೇ ತರಗತಿಯನ್ನು ಚಿಕ್ಕಜೋಗಿಹಳ್ಳಿಯಲ್ಲಿರುವ ನವೋದಯ ಶಾಲೆಯಲ್ಲಿ ಪೂರೈಸಿದರು. ಪದವಿ ಪೂರ್ವ ಶಿಕ್ಷಣವನ್ನು ಹೈದರಾಬಾದಿನ ನಾರಾಯಣ ಕಾಲೇಜಿನಲ್ಲಿ ಪಡೆದರು. ನಂತರ ಇವರು ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಸ್ಟ್ರೀಯಲ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.

ತರಬೇತಿ:

ಯುಪಿಎಸ್‌ಸಿ ಪರೀಕ್ಷೆಗಾಗಿ ಇವರು ದೆಹಲಿಯ ವಾಜಿರಾಂ ಅಂಡ್ ರವಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಯುಪಿಎಸ್‌ಸಿ ಮೇನ್ಸ್ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡು ತೇರ್ಗಡೆಯಾದರು.

ತಮ್ಮ ಯಶಸ್ಸಿನ ಕುರಿತು ಕನ್ನಡಪ್ರಭದೊಂದಿಗೆ ತಮ್ಮ ಅನುಭವ ಹಂಚಿಕೊಂಡ ಟಿ. ವಿಜಯಕುಮಾರ್, ನಮ್ಮ ತಂದೆ ಟಿ.ಅಡಿವೆಪ್ಪ ಹಾಗೂ ತಾಯಿ ಎಂ.ಟಿ. ಮಣಿಯಮ್ಮನವರು ನೀಡಿದ ಪ್ರೇರಣೆ ಹಾಗೂ ಯುಪಿಎಸ್‌ಸಿ ಪರೀಕ್ಷೆಯ ಕುರಿತ ಆಸಕ್ತಿ ನನ್ನನ್ನು ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಲು ಸಹಕಾರಿಯಾಯಿತು. ಯುಪಿಎಸ್ ಪರೀಕ್ಷೆಯಲ್ಲಿ ಓದು ಬಹಳಷ್ಟು ಪ್ರಭಾವ ಬೀರುತ್ತದೆ. ಯಾವುದೇ ಪರೀಕ್ಷೆಯನ್ನು ಎದುರಿಸಲು ಓದು ಸಂಪೂರ್ಣ, ಬುದ್ಧಿ ಪರಿಪೂರ್ಣವಾಗಿರಬೇಕು ಎಂಬುದನ್ನು ನಾನು ನಂಬಿ ಅದರಂತೆ ಶ್ರಮ ವಹಿಸಿದ್ದರಿಂದ, ನನಗೆ ನಿರೀಕ್ಷಿತ ಫಲ ದೊರಕಿದೆ ಎಂದು ತಿಳಿಸಿದರು.

ತಾಲೂಕಿನ ಚೋರುನೂರು ಗ್ರಾಮದ ಟಿ.ವಿಜಯಕುಮಾರ್ ಅವರ ಸಾಧನೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಪ್ರೇರಣೆಯಾಗಿದೆ ಎನ್ನುತ್ತಾರೆ ಅವರು.

Share this article