ಮೊಹರಂ ಹಬ್ಬಕ್ಕೆ ವಿಜಯನಗರ ಜಿಲ್ಲೆ ಸಜ್ಜು

KannadaprabhaNewsNetwork |  
Published : Jul 17, 2024, 12:46 AM ISTUpdated : Jul 17, 2024, 12:47 AM IST
16ಎಚ್‌ಪಿಟಿ4-ಹೊಸಪೇಟೆಯಲ್ಲಿ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಮಣ್ಣಿನ ಮಡಿಕೆ ಖರೀದಿಯಲ್ಲಿ ತೊಡಗಿರುವ ಭಕ್ತರು. | Kannada Prabha

ಸಾರಾಂಶ

ಹಿಂದೂ-ಮುಸ್ಲಿಂ ಭಾವೈಕತ್ಯೆ ಸಂಕೇತ ಮೊಹರಂ ಹಬ್ಬದ ಆಚರಣೆಗೆ ನಗರ ಸೇರಿದಂತೆ ಜಿಲ್ಲೆ ಸಜ್ಜಾಗಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹಿಂದೂ-ಮುಸ್ಲಿಂ ಭಾವೈಕತ್ಯೆ ಸಂಕೇತ ಮೊಹರಂ ಹಬ್ಬದ ಆಚರಣೆಗೆ ನಗರ ಸೇರಿದಂತೆ ಜಿಲ್ಲೆ ಸಜ್ಜಾಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಕೊಟ್ಟೂರು ಹಾಗೂ ಹರಪನಹಳ್ಳಿ ತಾಲೂಕು ಸೇರಿದಂತೆ ಜಿಲ್ಲೆಯ ಆರು ತಾಲೂಕುಕುಗಳಲ್ಲಿ ಹಿಂದೂ-ಮುಸ್ಲಿಂ ಬಾಂಧವರು, ಸಹೋದರತ್ವ ಭಾವನೆ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

ಹೊಸಪೇಟೆ ನಗರದ ದೊಡ್ಡ ರಾಮಲಿ ಸ್ವಾಮಿ ಮಸೀದಿ, ಚಿತ್ತವಾಡ್ಗಿಯ ಸಣ್ಣ ರಾಮನಮಲೆ ಮಸೀದಿ ಸೇರಿದಂತೆ ನಗರದ ವಿವಿಧೆಡೆ ಪೀರಲು ದೇವರನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಗುತ್ತಿದೆ.

ದೇವರಿಗೆ ಹರಕೆ ಹೊತ್ತ ಕೆಲ ಭಕ್ತರು, ಹುಲಿವೇಷ ಧರಿಸಿ, ಹಲಗೆ ವಾದ್ಯಕ್ಕೆ ಮಸೀದಿ ಆವರಣದಲ್ಲಿ ಕುಣಿದು ಹರಕೆ ತೀರಿಸಿದರೆ, ಇನ್ನೂ ಅಚ್ಚಳ್ಳಿ, ಬಿಚ್ಚಳ್ಳಿ ವೇಷ ಧರಿಸಿದ ಕೆಲ ಭಕ್ತರು ದೇವರ ಮೊರೆ ಹೋಗುತ್ತಿದ್ದಾರೆ. ಇನ್ನೂ ಭಕ್ತರು ಪೀರಲು ದೇವರಿಗೆ ಬೆಲ್ಲದ ಹಾಲು ನೈವೇದ್ಯ ಸಲ್ಲಿಸಿದರು. ಹೊಸ ಮಣ್ಣಿನ ಮಡಕೆಯಲ್ಲಿ ಬೆಲ್ಲದ ನೈವೇದ್ಯ ತಯಾರಿಸಿಬಿಂದಿಗೆ ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿ ಬಂದು ರಾಮಲಿ ಸ್ವಾಮಿ ಮಸೀದಿಗೆ ಅರ್ಪಣೆ ಮಾಡಿದರು.

ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಪೀರಲು ದೇವರಿಗೆ ಬೆಲ್ಲದ ನೈವೇದ್ಯ ಅರ್ಪಿಸಲು ನಗರದ ಲಿಟ್ಲ್ ಫ್ಲವರ್ ಕನ್ನಡ ಮಾಧ್ಯಮ ಶಾಲೆ ಎದುರು ಕುಂಬಾರರ ಬಳಿ ಮಣ್ಣಿನ ಮಡಿಕೆ ಖರೀದಿಸಲು ಜನರು ಮುಗಿ ಬಿದ್ದರು. ಈ ಬಾರಿ ಬೇಸಿಗೆಯಲ್ಲಿ ನಾಲ್ಕು ಕಾಸು ಕಂಡಿದ್ದ ಕುಂಬಾರರು, ಮಳೆಗಾಲದ ಹೊತ್ತಿನಲ್ಲಿ ವ್ಯಾಪಾರ ಮಂದಗತಿಯಲ್ಲಿ ಸಾಗಿದ್ದರಿಂದ ಆರ್ಥಿಕ ಹಿನ್ನೆಡೆ ಅನುಭವಿಸಿದ್ದರು. ಇದೀಗ ಮೊಹರಂ ಹಬ್ಬದ ಸಂಭ್ರಮದಲ್ಲಿ ಕೈ ತುಂಬಾ ಹಣ ನೋಡುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ರಾಮಲಿ ಸ್ವಾಮಿ ಮಸೀದಿ ಆವರಣದ ಅಗ್ನಿಹೊಂಡದಲ್ಲಿ ಭಕ್ತರು ಹಾಯ್ದು ಭಕ್ತಿ ಸಮರ್ಪಿಸಿದರು. ಮೊಹರಂ ಹಬ್ಬದ ಖತಲ್‌ ರಾತ್ ಹಿನ್ನೆಲೆಯಲ್ಲಿ ಕೆಲವೆಡೆ ಕವ್ವಾಲಿ, ಹಂತಿ ಪದಗಳನ್ನು ಭಕ್ತರು ಹಾಡಿದರು.ಜುಲೈ 17ರಂದು ಸಂಜೆ ಕರ್ಬಲಾ ಭವ್ಯ ಮೆರವಣಿಗೆ ನಡೆಯಲಿದೆ. ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಿರುವ ಪೀರಲು ದೇವರುಗಳು ಪರಸ್ಪರ ಸಮಾಗಮಗೊಂಡು, ಗಂಗಾ ಸ್ಥಳಕ್ಕೆ ತೆರಳಿ, ದೇವರ ವಿಸರ್ಜನಾ ಕಾರ್ಯ ಸಮಾಪ್ತಿಗೊಳ್ಳಲಿದೆ.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ