ಕೃಷ್ಣ ಲಮಾಣಿ
ಬರೋಬ್ಬರಿ ₹124 ಕೋಟಿ ವೆಚ್ಚದಲ್ಲಿ ಬೆಂಗಳೂರು ಮೂಲದ ಗುತ್ತಿಗೆ ಕಂಪನಿ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಮಾಡಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಮಾತ್ರ ಇದುವರೆಗೆ ಉದ್ಘಾಟನೆ ಮಾಡಿಲ್ಲ. ಇದರಿಂದ ಸೌಲಭ್ಯ ಇದ್ದರೂ ಜಿಲ್ಲೆ ಜನರು ಚಿಕಿತ್ಸೆಗಾಗಿ ಪರ ಜಿಲ್ಲೆಗಳತ್ತ ತಿರುಗಾಡುತ್ತಾರೆ.
ಸುಸಜ್ಜಿತ ಕಟ್ಟಡ:ನಗರದ ಹೊರವಲಯದ ಬೈಪಾಸ್ ರಸ್ತೆ ಬಳಿ ಐದು ಎಕರೆ ವಿಶಾಲ ಜಾಗದಲ್ಲಿ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ಈಗ ಹೈಟೆಕ್ ಮಾದರಿಯಲ್ಲಿ ನಿರ್ಮಾಣಗೊಂಡಿದ್ದರೂ ಚಿಕಿತ್ಸೆಗಾಗಿ ಜಿಲ್ಲೆಯಿಂದ ಜಿಲ್ಲೆಗೆ ವಿಜಯನಗರ ಜಿಲ್ಲೆ ಜನರು ತಿರುಗಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಈ ಆಸ್ಪತ್ರೆ ಕಟ್ಟಡದಲ್ಲಿ 300 ಬೆಡ್ ನಿರ್ಮಾಣ ಮಾಡಲಾಗಿದೆ. ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದರೂ ಸಂಬಂಧಿಸಿದ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದ ಈ ಕಟ್ಟಡ ಉದ್ಘಾಟನೆ ಭಾಗ್ಯ ಕಂಡಿಲ್ಲ ಎಂಬುದು ಜಿಲ್ಲೆ ಜನರ ಆರೋಪವಾಗಿದೆ.
ಈ ಕಟ್ಟಡದಲ್ಲಿ ಒಪಿಡಿ ವಿಭಾಗ, ಹೆರಿಗೆ ವಾರ್ಡ್‌ಗಳು, ಕ್ಯಾನ್ಸರ್ ರೋಗಿಗಳ ವಾರ್ಡ್, ಇಎನ್‌ಟಿ ವಿಭಾಗ, ಹೃದಯ ಸಂಬಂಧಿ ಚಿಕಿತ್ಸಾ ವಿಭಾಗ, ರಕ್ತ ಭಂಡಾರ, ಔಷಧಾಲಯ ಸೇರಿದಂತೆ ಒಟ್ಟು 17 ವಿಭಾಗಗಳನ್ನು ನಿರ್ಮಾಣ ಮಾಡಲಾಗಿದೆ. ಸುಸಜ್ಜಿತ ಹಾಗ ವ್ಯವಸ್ಥಿತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ. ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ವಿಶ್ರಮಿಸಲು ವ್ಯವಸ್ಥೆ ಕೂಡ ಮಾಡಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ವತಃ ಆಗಮಿಸಿ ಈ ಕಟ್ಟಡ ಪರಿಶೀಲಿಸಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಕೂಡ ಕಟ್ಟಡ ಪರಿಶೀಲಿಸಿದ್ದಾರೆ. ಶಾಸಕ ಎಚ್.ಆರ್. ಗವಿಯಪ್ಪನವರು ಕೂಡ ಜಿಲ್ಲಾಸ್ಪತ್ರೆ ರಸ್ತೆ ನಿರ್ಮಾಣ ಮತ್ತು ಕಂಪೌಂಡ್ ನಿರ್ಮಾಣಕ್ಕೂ ವಿಶೇಷ ಆಸಕ್ತಿ ವಹಿಸಿ ಅನುದಾನ ಕೂಡ ಒದಗಿಸಿದ್ದಾರೆ. ಇನ್ನು ಕೆಕೆಆರ್‌ಡಿಬಿಯಿಂದ ವಿಶೇಷ ಅನುದಾನ ಕೂಡ ಕೊಡಿಸಿದ್ದಾರೆ. ಕಟ್ಟಡ ಮಾತ್ರ ಉದ್ಘಾಟನೆ ಭಾಗ್ಯ ಕಂಡಿಲ್ಲ.
433 ಸಿಬ್ಬಂದಿ ಅಗತ್ಯ:
ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದೆ. ಆದರೆ ವೈದ್ಯರು ಸೇರಿದಂತೆ ಸಿಬ್ಬಂದಿ ನಿಯೋಜನೆ ಮತ್ತು ವೈದ್ಯಕೀಯ ಸಲಕರಣೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ.